Advertisement

ಕರುಣೆ ಬಾರದೇ ವರುಣ! ಜೂನ್‌ನಲ್ಲಿ ಮಳೆಗಾಗಿ ಪೂಜೆ ;ಈಗ ಮಳೆ ಬಿಡುವಿಗಾಗಿ ಪ್ರಾರ್ಥನೆ

03:50 PM Jul 19, 2022 | Team Udayavani |

ಲಕ್ಷ್ಮೇಶ್ವರ: ಕಳೆದ 15 ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲ ವರ್ಗದ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Advertisement

ಮಳೆಗಾಗಿ ಜೂನ್‌ನಲ್ಲಿ ವಿವಿಧ ಪೂಜೆ ಮಾಡಿದ ರೈತರೀಗ ಮಳೆ ಬಿಡುವಿಗಾಗಿ ಪೂಜೆ-ಪ್ರಾರ್ಥನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ದುಡಿಮೆಯ ಕೂಲಿಯಿಂದಲೇ ಬದುಕು ನಡೆಸುವ ಕೃಷಿ ಕೂಲಿಕಾರರ ಬದುಕಂತೂ ಚಿಂತಾಜನಕವಾಗಿದೆ. ಕೃಷಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿವೆ. ಕೃಷಿ ಕೂಲಿಯನ್ನೇ ನಂಬಿ ಬದುಕುವವರಿಗೆ ಕೈಯಲ್ಲಿ ಕೆಲಸವಿಲ್ಲದೇ, ದುಡ್ಡಿಲ್ಲದೆ ಬದುಕು ನಡೆಸುವುದೇ ಕಷ್ಟವಾಗಿದೆ. ಕೈಯಲ್ಲಿದ್ದ ಬಿಡಿಗಾಸೆಲ್ಲ ಖರ್ಚು ಮಾಡಿದರೆ ನಾಳೆ ಹೇಗೆ? ಎಂಬ ಚಿಂತೆ ಕೃಷಿ ಕೂಲಿ ಕಾರ್ಮಿಕರನ್ನು ಕಾಡುತ್ತಿದೆ.

ಹೊಲದಲ್ಲಿ ದಿನವೂ ಕೆಲಸ ಮಾಡಿ ಬಂದ ಕೂಲಿ ಹಣದಿಂದಲೇ ಬದುಕು. ಕಳೆದ 2 ವಾರ ದಿಂದ ನಮ್ಮಂತಹ ಅನೇಕ ಕುಟುಂಬಗಳಿಗೆ ಕೆಲಸವೂ ಇಲ್ಲ, ಕೂಲಿಯೂ ಇಲ್ಲದ್ದರಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ದಿನಸಿ, ತರಕಾರಿ, ಜೋಳ ತರಲು ಕೂಲಿ ಮಾಡುವ ರೈತರ ಹತ್ತಿರ ಸಾಲಾ ಕೇಳಿದರೆ ಅವರ ಜೀವನವೂ ಕಷ್ಟದಲ್ಲಿಯೇ ಇದೆ. ನಮಗ್ಯಾರೂ ಸಾಲಾ ಕೊಡಲ್ಲ. ಮಳೆ ಹೀಗೆಯೇ ಮುಂದುವರಿದರೆ ಹೊತ್ತಿನ ಊಟಕ್ಕೂ ಕಷ್ಟಪಡ ಬೇಕಾ ಗುತ್ತದೆ ಎಂದು ದೇವಕ್ಕ ಹಂಪಣ್ಣವರ ನೊಂದು ನುಡಿಯುತ್ತಾರೆ.

ಬಟ್ಟೆಗಳು ಒಣಗುತ್ತಿಲ್ಲ

ಮಳೆ ಆರಂಭಗೊಂಡ 15 ದಿನಗಳಿಂದ ಬರೀ ಮೋಡ ಕವಿದ ವಾತಾವರಣ ಇರುವುದರಿಂದ, ಬಿಸಿಲೇ ಇರದ ಕಾರಣ ಒಗೆದು ಹಾಕಿದ ಬಟ್ಟೆಗಳು ಒಣಗುತ್ತಿಲ್ಲ. ಹೀಗಾಗಿ ದಿನವೂ ಶಾಲೆಗೆ ಹೋಗುವ ಮಕ್ಕಳು, ನೌಕರ ವರ್ಗದವರು ಹಳೆಯ ಬಟ್ಟೆಯನ್ನೇ ಧರಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಒಳಗಡೆಯೇ ಹಗ್ಗ ಕಟ್ಟಿ ಒಣ ಹಾಕಿರುವ ಬಟ್ಟೆಗಳು ನಾಲ್ಕೈದು ದಿನ ಕಳೆದರೂ ಒಣಗುತ್ತಿಲ್ಲ. ಹೊರ ಹೋಗಲು ಮಳೆ ಬಿಡುವು ನೀಡದ್ದರಿಂದ ಜರ್ಕಿನ್‌, ಸ್ವೀಟರ್‌, ಛತ್ರಿ, ಕ್ಯಾಪ್‌ ಬಳಕೆ ಸಾಮಾನ್ಯವಾಗಿದೆ. ಚಳಿಗಾಲದ ವಾತಾವರಣ ನಿರ್ಮಾಣವಾಗಿದೆ.

Advertisement

ಸೋರುತ್ತಿವೆ ಮನೆಗಳು

ನಿರಂತರ ಮಳೆಯಿಂದ ಮಣ್ಣಿನ ಮತ್ತು ಹಳೆಯದಾದ ಕಾಂಕ್ರೀಟ್‌ ಮನೆಗಳೂ ಸೋರುತ್ತಿವೆ. ಸೋರುವ ಮನೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದರಿಂದ ಬೆಳಕಿಲ್ಲದ ಸೋರುವ ಮನೆಯಲ್ಲಿಯೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಖರ್ಚು ಮಾಡಿ ಪ್ಲಾಸ್ಟಿಕ್‌, ತಾಡಪತ್ರಿ ಖರೀದಿಸಿ ಮನೆ ಮೇಲೆ ಹೊದಿಸಿದ್ದರೂ ಸೋರುವುದು ತಪ್ಪುತ್ತಿಲ್ಲ. ಮಳೆಯೂ ನಿಲ್ಲುತ್ತಿಲ್ಲವಾದ್ದರಿಂದ ಜನತೆ ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ. ರೈತರಿಗೆ ಜಾನುವಾರುಗಳ ಪೋಷಣೆ ಕಷ್ಟವಾಗಿದೆ. ಸತತ ಮಳೆಯಿಂದ ಶಿಕ್ಷಣ, ವ್ಯಾಪಾರ, ಕೃಷಿ, ಉದ್ಯೋಗ, ಹೀಗೆ ಎಲ್ಲ ಕ್ಷೇತ್ರಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಇದಕ್ಕೆಲ್ಲ ಮಳೆರಾಯನ ಬಿಡುವೊಂದೇ ಪರಿಹಾರವಾಗಿದೆ. ತಾಲೂಕಿನಾದ್ಯಂತ ಸಾವಿರಾರು ಮನೆಗಳು ಸೋರುತ್ತಿದ್ದು 20 ಕ್ಕೂ ಹೆಚ್ಚು ಮನೆಗಳು ಬಿದ್ದಿರುವ ಬಗ್ಗೆ ಸೋರುತ್ತಿವೆ ಮನೆಗಳು ತಾಲೂಕಾಡಳಿತ ಮಾಹಿತಿ ನೀಡಿದೆ.

ಹೆಚ್ಚಿನ ತೇವಾಂಶದಿಂದ ಕೃಷಿ ಜಮೀನುಗಳು ಹಾಳು-ಬೀಳು

ಸತತ ಮಳೆಯಿಂದ ಜಮೀನಿನಲ್ಲಿ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಯಲ್ಲಿ ನೀರು ನಿಂತು, ತೇವಾಂಶ ಹೆಚ್ಚಳವಾಗಿ ಬೆಳೆ ಹಳದಿಯಾಗಿದೆ. ಎಡೆ ಹೊಡೆಯುವುದು, ಕಳೆ ತೆಗೆಯುವ ಕಾರ್ಯ ಮಾಡಲಾಗದ ಸ್ಥಿತಿ ಇದೆ. ಬೆಳೆಯೊಂದಿಗೆ ವಿಪರೀತ ಕಳೆಯೂ ಬೆಳೆದಿದೆ. ರೋಗಬಾಧೆ ತಡೆಗಟ್ಟಲು ಕ್ರಿಮಿನಾಶಕ ಸಿಂಪಡಿಸಲಾಗದೇ, ರಸಗೊಬ್ಬರ ಹಾಕಲಾಗದೇ ಮುಂಗಾರಿನ ಬೆಳೆ ಕಾಪಾಡುವ ಚಿಂತೆ ರೈತರನ್ನು ಕಾಡುತ್ತಿದೆ. ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಹಳದಿ ರೋಗಕ್ಕೆ ತುತ್ತಾಗಿದೆ. ಗೋವಿನಜೋಳಕ್ಕೆ ಲದ್ದಿಹುಳು ಬಾಧೆ ಆವರಿಸಿದೆ. ಇತರೆ ಬೆಳೆಗಳು ತೇವಾಂಶ ಹೆಚ್ಚಳದಿಂದ ಹಾಳಾಗುತ್ತಿವೆ. ಮಳೆ ಬಿಡುವ ಲಕ್ಷಣಗಳೇ ಕಾಣದ್ದರಿಂದ ರೈತರ ಮುಂಗಾರಿನ ಬೆಳೆಗಳ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ರೈತ ಶಿವಾನಂದ ಲಿಂಗಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next