Advertisement

ನಿಯಮಾವಳಿ ರಚನೆ ಬಳಿಕ ಸಮಸ್ಯೆ ಪರಿಹಾರ 

06:00 AM Jul 04, 2018 | Team Udayavani |

ವಿಧಾನ ಪರಿಷತ್ತು: ಕನ್ನಡ ಚಿತ್ರರಂಗದ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ “ಕನ್ನಡ ಚಲನಚಿತ್ರ ನೀತಿ’ ಜಾರಿಯಲ್ಲಿದ್ದು, ಅದಕ್ಕೆ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಿದ ಬಳಿಕ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಸಚಿವೆ ಡಾ.ಜಯಮಾಲಾ ಹೇಳಿದರು.

Advertisement

ಮಂಗಳವಾರ ಬಿಜೆಪಿಯ ತಾರಾ ಅನುರಾಧ ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿಗಳ ಪರ ಉತ್ತರಿಸಿದ ಅವರು, ಕನ್ನಡ ಚಲನಚಿತ್ರ ನೀತಿ ಯಡಿ ನಿಯಮಾವಳಿ ರಚನೆಯಾಗುತ್ತಿದ್ದು, ಇದು ಎಲ್ಲ ಅಂಶ ಒಳಗೊಂಡಿರಲಿದೆ. ಮೈಸೂರಿನ ಹಿಮ್ಮಾವು ಪ್ರದೇಶದಲ್ಲಿ ಚಿತ್ರ ನಗರಿ ನಿರ್ಮಿಸು ವುದಾಗಿ ಹಿಂದಿನ ಸರ್ಕಾರ ಪ್ರಕಟಿಸಿದ್ದು, ಚುನಾವಣೆ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ಚಿತ್ರನಗರಿ ನಿರ್ಮಾಣ ಕಾರ್ಯ ಮುಂದುವರಿ ಯಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಹಲವೆಡೆ ಚಲನಚಿತ್ರ ಪ್ರಚಾರಕ್ಕಾಗಿ ಫ‌ಲಕಗಳನ್ನು ಕಾಯ್ದಿರಿಸಲಾಗಿದೆ. ಇನ್ನಷ್ಟು ಫ‌ಲಕ ಕಾಯ್ದಿರಿಸಲು ಪ್ರಯತ್ನಿಸಲಾಗುವುದು. 300 ಕಡೆ ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಚಿಂತಿಸಿತ್ತು. ಪರದೆಗೆ 50 ಲಕ್ಷ ರೂ. ಪ್ರೋತ್ಸಾಹ ಧನ ಕೂಡ ಘೋಷಿಸಿತ್ತು. ಪರವಾನಗಿ ನೀಡಿಕೆಯಲ್ಲಿ ಕೆಲ ತೊಡಕುಗಳಿದ್ದು, ನಿವಾರಣೆಯಾಗಬೇಕಿದೆ. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ 4 ಕೋಟಿ ರೂ. ವೆಚ್ಚವಾ ಗುತ್ತಿದ್ದು, 10 ಕೋಟಿ ರೂ. ವೆಚ್ಚ ಮಾಡುತ್ತಿಲ್ಲ ಎಂದು ಹೇಳಿದರು.

ಒತ್ತಾಯ: ಇದಕ್ಕೂ ಮೊದಲು ಕನ್ನಡ ಚಿತ್ರ ರಂಗದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ತಾರಾ ಅನುರಾಧ, ವಾರ್ಷಿಕವಾಗಿ 175ಕ್ಕೂ ಹೆಚ್ಚು ಕನ್ನಡ ಚಿತ್ರಗಳು ತೆರೆ ಕಾಣುತ್ತವೆ. ಕಳೆದ ಆರು ತಿಂಗಳಲ್ಲೇ 100ಕ್ಕೂ ಹೆಚ್ಚು ಕನ್ನಡ ಚಿತ್ರ ಬಿಡುಗಡೆಯಾಗಿವೆ. ನಿರ್ಮಾಣ, ವಿತರಣೆ, ಪ್ರಸಾರ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ತಂತ್ರ  ಜ್ಞಾನ ಬಳಕೆ ಹೆಚ್ಚಾಗಿದ್ದು, ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಕನ್ನಡದಲ್ಲೂ ಪ್ರತಿಭಾವಂತರಿದ್ದು, ಭಾರಿ ಹೂಡಿಕೆ ಚಿತ್ರಗಳು ನಿರ್ಮಾಣವಾಗುತ್ತಿದ್ದರೂ ಲಾಭ ಗಳಿಸುತ್ತಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಹೆಸರಘಟ್ಟದಲ್ಲಿ ಚಿತ್ರ ನಗರಿ ನಿರ್ಮಾಣವಾಗುತ್ತದೆ ಎನ್ನಲಾಗುತ್ತಿತ್ತು. ಹಿಂದಿನ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಈಗಿನ ಮುಖ್ಯಮಂತ್ರಿಗಳು ರಾಮನಗರದಲ್ಲಿ ಚಿತ್ರ ನಗರಿ ನಿರ್ಮಿಸುವ ಚಿಂತನೆ ಇದೆ ಎನ್ನುತ್ತಿದ್ದಾರೆ. ಕೇವಲ ಬಜೆಟ್‌ ಪುಸ್ತಕದಲ್ಲಿ ಚಿತ್ರನಗರಿ ತೋರಿಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ
ಸದಸ್ಯರಾದ ತೇಜಸ್ವಿನಿಗೌಡ, ಎನ್‌.ರವಿಕುಮಾರ್‌ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. 

Advertisement

ಕುರಿ, ಕೋಳಿ ತೋರಿಸಿದ್ರೂ ವಿಮೆ!
ಸಿನಿಮಾದಲ್ಲಿ ಕುರಿ, ಕೋಳಿ, ಎತ್ತು ಹಾದು ಹೋದ ದೃಶ್ಯವಿದ್ದರೂ ಅವುಗಳಿಗೆ ವಿಮೆ ಮಾಡಿಸಬೇಕು, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಸೆನ್ಸಾರ್‌ ಅನುಮತಿ ಪಡೆಯಬೇಕು. ಚಿತ್ರೀಕರಣ ನಡೆಸಬೇಕಾದರೆ ಹತ್ತಾರು ಇಲಾಖೆಗಳ ಅನುಮತಿ ಪಡೆಯುವುದು ಸವಾಲೆನಿಸಿದೆ. ಏಕ ಗವಾಕ್ಷಿ ವ್ಯವಸ್ಥೆಯಡಿ ಅನುಮತಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಾರಾ ಅನುರಾಧ ಮನವಿ ಮಾಡಿದರು. 

ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್‌ಗೆ ಕಡಿವಾಣ ಹಾಕಿ 
ವಿಧಾನ ಪರಿಷತ್ತು: ಗಂಟೆ ಲೆಕ್ಕದಲ್ಲಿ ವಿಮಾನಯಾನ ದರ ಹೆಚ್ಚಾಗುವಂತೆ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ವಿಪರೀತ ಏರಿಕೆಯಾಗುತ್ತದೆ. ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ವೀಕ್ಷಕರೇ ಬಾರದ ಬೆಳಗ್ಗೆ, ಮಧ್ಯರಾತ್ರಿ ವೇಳೆ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಆನ್‌ ಲೈನ್‌ ಬುಕ್ಕಿಂಗ್‌ನಲ್ಲಿ ಕನ್ನಡ ಸಿನಿಮಾಕ್ಕೆ ಟಿಕೆಟ್‌ ಕಾಯ್ದಿರಿಸದೆ ಅನ್ಯ ಭಾಷೆ ಚಿತ್ರ ವೀಕ್ಷಣೆಗೆ ಪ್ರಚೋದಿಸಲಾಗುತ್ತದೆ. ಹೀಗೆ ಮಲ್ಟಿಪ್ಲೆಕ್ಸ್‌ನಲ್ಲಿ ದುಬಾರಿ ಟಿಕೆಟ್‌ ದರ, ಕನ್ನಡ ಚಿತ್ರ ಪ್ರದರ್ಶನಕ್ಕೆ ನಿರಾಸಕ್ತಿ ಇತರೆ ಸಮಸ್ಯೆಗಳ ಬಗ್ಗೆ ಮೇಲ್ಮನೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಮಂಗಳವಾರ ನಡೆಯಿತು.

ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ತಾರಾ ಅನುರಾಧ, “ಕೆಲ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ 10 ಸಿನಿಮಾ ಸ್ಕ್ರೀನ್‌ಗಳಿದ್ದರೆ ಅದರಲ್ಲಿ ಎರಡನ್ನು ಸ್ಥಳೀಯ ಭಾಷಾ ಚಿತ್ರ ಪ್ರದರ್ಶನಕ್ಕೆ ಕಾಯ್ದಿರಿಸಬೇಕೆಂಬ ನಿಯಮವಿದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ನಿಯಮವಿಲ್ಲ. ಹಾಗಾಗಿ ಎಲ್ಲ ಸ್ಕ್ರೀನ್‌ಗಳಲ್ಲಿ ಕನ್ನಡ ಬಿಟ್ಟು ಎಲ್ಲ ಭಾಷೆಗಳ ಚಿತ್ರ ಪ್ರದರ್ಶನವಾಗುತ್ತಿರುತ್ತವೆ. ಒಂದೊಮ್ಮೆ ಕನ್ನಡ ಚಿತ್ರಕ್ಕೆ ಅವಕಾಶ ನೀಡಿದರೂ ಪ್ರೇಕ್ಷಕರೇ ಬಾರದ ಬೆಳಗ್ಗೆ ಇಲ್ಲವೇ ಮಧ್ಯರಾತ್ರಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.

ದುಬಾರಿ ದರ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸೋಮವಾರದಿಂದ ಗುರುವಾರದವರೆಗೆ ಒಂದು ಟಿಕೆಟ್‌ ದರವಿದ್ದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಆ ದರದ ಹತ್ತು ಪಟ್ಟು ಹೆಚ್ಚು ದರ ನಿಗದಿಪಡಿಸುತ್ತವೆ. ಕೆಲವೆಡೆ ಗೋಲ್ಡ್‌ ಕ್ಲಾಸ್‌ನಲ್ಲಿ ಸಿನಿಮಾ ವೀಕ್ಷಿಸಲು ದೊಡ್ಡ ಮೊತ್ತದ ಹಣ ತೆರಬೇಕಾಗಿದೆ. ತಮಿಳುನಾಡಿನಲ್ಲಿ ವಾರದ ಎಲ್ಲ ದಿನವೂ ಪ್ರದರ್ಶನ ದರ 120 ರೂ. ಇದೆ. ಹೀಗಿರುವಾಗ ರಾಜ್ಯ ಸರ್ಕಾರವೇಕೆ ಮೌನ ವಹಿಸಿದೆ. ಪ್ರದರ್ಶನ ದರ
ನಿಯಂತ್ರಣಕ್ಕೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಭಾನಾಯಕಿ ಡಾ.ಜಯಮಾಲಾ, ಮಲ್ಪಿಫ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಹಿಂದಿನ ಮುಖ್ಯಮಂತ್ರಿಗಳು ಮಲ್ಟಿಪ್ಲೆಕ್ಸ್‌ ಸಂಘಗಳ ಪ್ರತಿನಿಧಿಗಳೊಂದಿಗೆ ಮೂರು ಬಾರಿ ಸಭೆ ನಡೆಸಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆದ್ಯತೆ ನೀಡುವಂತೆ
ಸೂಚಿಸಿದ್ದರು. ಮಲ್ಟಿಪ್ಲೆಕ್ಸ್‌ ಹಾಗೂ ಏಕ ತೆರೆ ಸಿನಿಮಾ ಮಂದಿರಗಳಲ್ಲಿ ಪ್ರವೇಶ ದರದ ಗರಿಷ್ಠ ಮಿತಿಯನ್ನು ತೆರಿಗೆ ಹೊರತುಪಡಿಸಿ 200 ರೂ.ಗೆ ನಿಗದಿಪಡಿಸಲಾಗಿದೆ. ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್ ಇಂಡಿಯಾ ಸಂಸ್ಥೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ವಿಚಾರಣೆ ಹಂತದಲ್ಲಿದೆ. ಸದ್ಯ ಶನಿವಾರ, ಭಾನುವಾರ ಹಾಗೂ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಇದೇ ದರವಿದೆ ಎಂದು ಹೇಳಿದರು.

ವರ್ಷಕ್ಕೆ 50ಕ್ಕೂ ಹೆಚ್ಚು ತುಳು ಚಿತ್ರಗಳು ನಿರ್ಮಾಣವಾಗುತ್ತಿದ್ದು, ಕೇವಲ ಮೂರು ಚಿತ್ರಗಳಿಗೆ ಮಾತ್ರ ಸಹಾಯಧನ ಸಿಗುತ್ತಿದೆ. ಹಲವು ಚಿತ್ರಗಳು 100, 150 ದಿನ ಪ್ರದರ್ಶನ ಕಾಣುತ್ತಿವೆ. ತುಳು ಚಿತ್ರರಂಗದ ಬೆಳವಣಿಗೆಗಾಗಿ ಎಲ್ಲ ಚಿತ್ರಗಳಿಗೂ ಸಹಾಯಧನ ನೀಡಬೇಕು. ಚಿತ್ರಗಳು ಗುಣಮಟ್ಟ ಕಾಯ್ದುಕೊಳ್ಳಬೇಕು.
● ಐವಾನ್‌ ಡಿಸೋಜಾ, ಕಾಂಗ್ರೆಸ್‌ ಸದಸ್ಯ

ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಗುರುತಿಸುವ ಸ್ಥಳಕ್ಕೆ ಕಾಂಪೌಂಡ್‌ ಜತೆಗೆ ಇತರೆ ಕೆಲ ಸೌಕರ್ಯ ಕಲ್ಪಿಸಲಾಗಿದೆ. ಪಿಪಿಪಿ ಮಾದರಿಯಡಿ ಹೂಡಿಕೆದಾರರು ಬಂಡವಾಳ ಹೂಡಬೇಕಿದೆ.
● ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next