Advertisement

ಮೂಡುಬಿದಿರೆ: ಟ್ರಾಫಿಕ್‌ ಪೊಲೀಸ್‌ ಇಲ್ಲದೆ ಸಮಸ್ಯೆ

01:29 PM Aug 09, 2022 | Team Udayavani |

ಮೂಡುಬಿದಿರೆ: ಪೇಟೆಯ ನಡುವಿನ ಕೃಷ್ಣಕಟ್ಟೆಯ ಕಡೆಯಿಂದ ನಾಗರಕಟ್ಟೆಯತ್ತ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ನಡೆದುಕೊಂಡು ಹೋಗುವವರಿಗೆ ಸಮಸ್ಯೆ ಆಗುತ್ತಿದೆ. ಜನರು ವಾರ್ಡ್‌ ಸದಸ್ಯೆಯಾದ ನನ್ನನ್ನು ಕೇಳ್ತಾರೆ. ನೀವೇನು ಮಾಡ್ತಾ ಇದ್ದೀರಿ ಎಂದು ಕೇಳಿದರೆ ನಾನು ಏನು ಉತ್ತರ ಕೊಡಬೇಕು? ಪುರಸಭೆಯ ಗಮನ ಸೆಳೆದು ಸಾಕಾಗಿದೆ ಎಂದು ‌ದಸ್ಯೆ ಶಕುಂತಳಾ ದೇವಾಡಿಗ ಮಾತನಾಡುತ್ತಲೇ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸಿದ ಘಟನೆ ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ನಡೆಯಿತು.

Advertisement

ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಒಂದು ಹಂತದಲ್ಲಿ ಅಧ್ಯಕ್ಷರಾಡಿದ ರೂಲಿಂಗ್‌ ಮಾತು ಶಕುಂತಳಾ ಅವರನ್ನು ಮಾತ್ರವಲ್ಲ ಇತರ ಸದಸ್ಯರನ್ನು ಕೆರಳಿಸಿದಂತಾಗಿ ಒಮ್ಮೆಲೇ ಸುರೇಶ ಪ್ರಭು, ಪುರಂದರ ದೇವಾಡಿಗ, ಕರೀಂ, ಕೊರಗಪ್ಪ ಮೊದಲಾದವರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೂ ಅಧ್ಯಕ್ಷರು ಎಲ್ಲರಿಗೂ ಅವಕಾಶವಾಗಬೇಕು ಎಂಬ ದೃಷ್ಟಿಯಿಂದ ತಾನು ಹಾಗೆ ಹೇಳಿದ್ದು ದಯವಿಟ್ಟು ತಪ್ಪು ತಿಳಿಯಬೇಡಿ ಎಂದು ಸ್ಪಷ್ಟನೆ ನೀಡಿ ಗದ್ದಲದ ಸ್ಥಿತಿಗೆ ಪೂರ್ಣ ವಿರಾಮ ಹಾಡಿದರು.

ವಿಶೇಷ ಸಭೆಯಲ್ಲಿ ಪಾರ್ಕಿಂಗ್‌, ವಾಹನ ಸಂಚಾರ ಉಲ್ಲಂಘನೆ, ವಿದ್ಯುತ್‌ ಪೂರೈಕೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ರಾಸಾಯನಿಕ ರಹಿತವಾಗಿ ಶೌಚಾಲಯದ ಗುಂಡಿಗಳನ್ನು ಸ್ವತ್ಛಗೊಳಿಸುವ ಬಗ್ಗೆ ಮಾಹಿತಿ ನೀಡಲಾಯಿತು.

ಟೋಯಿಂಗ್‌ ಬಂದ್‌ ಆಗಿದೆ

ಪಾರ್ಕಿಂಗ್‌ ಸಮಸ್ಯೆ ಬಗ್ಗೆ ಸುರೇಶ್‌ ಪ್ರಭು ಮಾತನಾಡಿ, ನಿಯಮ ಉಲ್ಲಂಘಿ ಸುವ, ಪಾರ್ಕ್‌ ಮಾಡಿ ಗಂಟೆಗಟ್ಟಲೆ ಅಲ್ಲೇ ಬಿಟ್ಟು ಸಾರ್ವಜನಿಕರಿಗೆ ಸಮಸ್ಯೆಯನ್ನುಂಟುಮಾಡುವ ಪ್ರಕರಣಗಳನ್ನು ಎತ್ತಿ ಇಂಥ ವಾಹನಗಳನ್ನು ಟೋಯಿಂಗ್‌ ಮಾಡಿ ಕೊಂಡುಹೋಗಿ ಎಂದು ಸಲಹೆ ನೀಡಿದರು. ಪಿಎಸ್‌ಐ ದಿವಾಕರ ರೈ ಅವರು ಈ ಸಲಹೆಗೆ ಉತ್ತರವಾಗಿ ರಾಜ್ಯದಲ್ಲಿ ಟೋಯಿಂಗ್‌ ಬಂದ್‌ ಆಗಿರುವುದರಿಂದ ಇಲ್ಲಿ ಆ ಕ್ರಮ ಆನುಸರಿಸಲು ಆಗುತ್ತಿಲ್ಲ ಎಂದರು.

Advertisement

ಕೇಸ್‌ ದಾಖಲಿಸಿ

ಹೆಲ್ಮೆಟ್‌ ಧಾರಣೆ, ಪಾರ್ಕಿಂಗ್‌, ಸಂಚಾರ ನಿಯಮ ಉಲ್ಲಂಘನೆಯೇ ಮೊದಲಾದ ವಿಷಯಗಳಲ್ಲಿ ಯಾವುದೇ ಮುಲಾಜಿಲ್ಲದೆ ಕೇಸ್‌ ದಾಖಲಿಸಿ. ಇಲ್ಲವಾದರೆ ಏನು ಮಾಡಿದರೂ ನಡೆಯುತ್ತದೆ ಎಂದು ಜನರು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ ಎಂದು ಪಿ.ಕೆ. ಥಾಮಸ್‌ ಹೇಳಿದರು. ಗಾಂಜಾ ಸಮಸ್ಯೆ ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅವರು ಮೂಡುಬಿದಿರೆಯಲ್ಲಿ ಗಾಂಜಾ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಸ್ತೆ, ಚರಂಡಿ ಆದ ಬಳಿಕ ವಿದ್ಯುತ್‌ ಕಂಬ ಸ್ಥಾಪಿಸುವ, ಅದಾದ ಬಳಿಕ ಸಾಕಷ್ಟು ಅಂತರ ಇರಿಸಿ ಅರಣ್ಯ ಇಲಾಖೆಯವರು ಗಿಡ ನೆಡುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಮೆಸ್ಕಾಂ ನಿಧಾನಗತಿ: ಸರಕಾರದ ದುಡ್ಡು ಪೋಲು

ರಸ್ತೆ ಬದಿಯ ಮರದ ಗೆಲ್ಲುಗಳನ್ನು ಕಡಿಯಿರಿ ಎಂದರೂ ಮೆಸ್ಕಾಂನವರು ಕೇಳುತ್ತಿಲ್ಲ. ಹಾಗಾಗಿಯೇ ವಾರ್ಡ್‌ 1 ರಲ್ಲಿ ಗೆಲ್ಲುಬಿದ್ದು ಒಂದೆಡೆ 4, ಮತ್ತೂಂದೆಡೆ 2 ವಿದ್ಯುತ್‌ ಕಂಬಗಳು ಮೊದಲ ಮಳೆಗೇ ಉರುಳಿಬಿದ್ದಿವೆ, ಮೊದಲೇ ಗೆಲ್ಲು ಗಳನ್ನು ನಿವಾರಿಸಿದ್ದರೆ ಹೀಗಾಗುತ್ತಿತ್ತೇ? ಎಂದು ಮಮತಾ ಆನಂದ್‌ ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಸುರೇಶ್‌ ಕೋಟ್ಯಾನ್‌ ತಮ್ಮ ವಾರ್ಡ್‌ನಲ್ಲಿ ಸುಮಾರು 10 ವಿದ್ಯುತ್‌ ಕಂಬಗಳು ಇಂಥದ್ದೇ ನಿಧಾನ ಗತಿಯ ಕಾರ್ಯದಿಂದಾಗಿ ನೆಲಕ್ಕುರಳಿವೆ. ಹೀಗೆ ಲಕ್ಷಾಂತರ ರೂ. ಸರಕಾರಿ ದುಡ್ಡು ವ್ಯರ್ಥವಾಗಿ ನೆಲಕ್ಕೆ ಚೆಲ್ಲಿದಂತಾಗಿದೆ ಎಂದರು. ಇದಕ್ಕೆಲ್ಲ ಮಾನವ ಸಂಪನ್ಮೂಲ ಕೊರತೆ ಇದ್ದರೆ ಖಾಸಗಿಯಾಗಿ ಮಾಡಿಸಿ ಎಂದು ಅವರು ಸಲಹೆ ನೀಡಿದರು. ಬನ ಎನ್ವಿರೋಟೆಕ್‌ನ ಆಡಳಿತ ನಿರ್ದೇಶಕ ಡಾ| ಬಾಲಾಜಿತ್‌ ಬಿ. ಶೆಟ್ಟಿ ಅವರು ಶೌಚಗುಂಡಿಯನ್ನು ರಾಸಾಯನಿಕರಹಿತವಾಗಿ ಬ್ಯಾಕ್ಟೀರಿಯಾ ಬಳಸಿ ಸ್ವತ್ಛಗೊಳಿಸುವ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ಒದಗಿಸಿದರು. ಮುಖ್ಯಾಧಿಕಾರಿ ಇಂದು ಸ್ವಾಗತಿಸಿ, ಚರ್ಚೆಗಳಲ್ಲಿ ಎತ್ತಲಾದ ವಿಷಯಗಳ ಬಗ್ಗೆ ಪೂರಕ ಮಾಹಿತಿ ನೀಡಿದರು.

ವಾಹನ ಸಂಚಾರ ನಿಯಮ ಉಲ್ಲಂಘನೆ

ಏಕಮುಖ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಕೆಲವು ಹಾದಿಗಳಲ್ಲಿ ದಿನ ಬಿಟ್ಟು ದಿನ ಒಂದೊಂದು ಪಾರ್ಶ್ವದಲ್ಲಿ ವಾಹನ ನಿಲುಗಡೆ ಆಗುತ್ತಿಲ್ಲ. ಪೇಟೆಯ ನಡುವೆ, ಕಾರ್ಕಳ, ಬಿ.ಸಿ.ರೋಡ್‌ ಕಡೆಗೆ ಘನವಾಹನ ಸಂಚರಿಸುವುದನ್ನು ತಡೆಯಬೇಕಾಗಿದೆ. ಜ್ಯೋತಿ ನಗರದಲ್ಲಿ ರೋಟರಿ, ಬಾಬುರಾಜೇಂದ್ರ, ಸರಕಾರಿ ಶಾಲೆ ಇವೆಲ್ಲ ಇದ್ದು ಪೀಕ್‌ ಅವರ್‌ ಗಳಲ್ಲಿ ವಾಹನಗಳ ದಟ್ಟಣೆ ವಿಪರೀತವಾಗುತ್ತಿದೆ. ಕೃಷ್ಣ ಕಟ್ಟೆಯ ಬಳಿ ಇದ್ದ ಪೊಲೀಸ್‌ ಚೌಕ ಕಾಣೆಯಾಗಿದೆ. ಜೈನ ಹೈಸ್ಕೂಲು ಬಳಿ ಬಸ್‌ಗಳು ನಿಗದಿತ ಜಾಗದಲ್ಲಿ ನಿಲ್ಲಿಸುತ್ತಿಲ್ಲ. ಇಂಥ ಅನೇಕ ವಿಚಾರಗಳನ್ನು ಸುರೇಶ್‌ ಕೋಟ್ಯಾನ್‌, ಶ್ವೇತಾ, ಸುರೇಶ್‌ ಪ್ರಭು, ಸೌಮ್ಯಾ, ದಿನೇಶ್‌ಕುಮಾರ್‌, ಪಿ.ಕೆ. ಥಾಮಸ್‌, ಕರೀಂ ಮೊದಲಾದ ಸದಸ್ಯರು ಪ್ರಸ್ತಾವಿಸಿದರು.

ಕಲ್ಲಬೆಟ್ಟು: ಬ್ಯಾರಿಕೇಡ್‌ ಚರಂಡಿಯಲ್ಲಿ

ನಿರಂತರ ಅಪಘಾತಗಳಾಗುತ್ತಿರುವ ಕಲ್ಲಬೆಟ್ಟು ಪ್ರದೇಶದಲ್ಲಿ ದಾನಿಗಳ ನೆರವಿನಿಂದ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಯಾರೋ ಕಿಡಿಗೇಡಿಗಳು ಚರಂಡಿಗೆಸೆಯುತ್ತಿದ್ದಾರೆ. ಹತ್ತಿರದ ಹೋಟೆಲ್‌ನವರು ಬೆಳಗ್ಗೆ ಅವುಗಳನ್ನು ಎತ್ತಿ ಮತ್ತೆ ಮಾರ್ಗದಲ್ಲಿರಿಸುತ್ತಿದ್ದಾರೆ. ಈ ಕಿಡಿಗೇಡಿಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಉಪಾಧ್ಯಕ್ಷೆ ಸುಜಾತಾ ಶಶಿಧರ ಪಿಎಸ್‌ಐ ದಿವಾಕರ ರೈ ಅವರನ್ನು ವಿನಂತಿಸಿದರು.

ಎಸ್‌ಸಿಎಸ್‌ಟಿಗೆ 70 ಯೂನಿಟ್‌ ಉಚಿತ ವಿದ್ಯುತ್‌

ಸುರೇಶ್‌ ಪ್ರಭು ಮಾತನಾಡಿ, ಎಸ್‌ಸಿಎಸ್‌ಟಿ ಮನೆಗಳಿಗೆ 70 ಯೂನಿಟ್‌ ವಿದ್ಯುತ್‌ ಉಚಿತವಾಗಿದೆ. ಆದರೆ, ನೀವು ಅವರಿಗೆ ಆ ಸೌಕರ್ಯ ನೀಡಲು ಸತಾಯಿಸುತ್ತ ಇದ್ದೀರಿ. ಆಧಾರ್‌, ರೇಶನ್‌ ಅಥವಾ ಯಾವುದಾದರೂ ಒಂದು ದಾಖಲೆಯನ್ನು ಮನ್ನಿಸಿ, ಸೌಕರ್ಯ ಕೊಡಿ, ಸುಮ್ಮನೆ ಸತಾಯಿಸಬೇಡಿ ಎಂದು ಹಾಜರಿದ್ದ ಮೆಸ್ಕಾಂ ಎಸ್‌ಒ ಪ್ರವೀಣ ಅವರಲ್ಲಿ ಆಗ್ರಹಪೂರ್ವಕ ವಿನಂತಿಸಿದರು.

ಈ ಬಗ್ಗೆ ಕೊಂಚ ಚರ್ಚೆ ನಡೆದು ಕೊನೆಗೂ ಎಸ್‌ಒ ಈ ಬಗ್ಗೆ ಸಕಾರಾತ್ಮಕ ಕ್ರಮ ಕೈಗೊಳ್ಳು ವುದಾಗಿ ಪ್ರಕಟಿಸಿದರು. ಜೊಸ್ಸಿ ಮಿನೇಜಸ್‌ ಅವರು ತಮ್ಮ ವಾರ್ಡ್‌ನಲ್ಲಿ ಬೆಳಕು ಯೋಜನೆಯಡಿ ವೈರಿಂಗ್‌ ಆಗಿದ್ದರೂ ಇನ್ನೂ ಮೂರು ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ ಎಂದರು.

ದಿನೇಶ್‌ ಕುಮಾರ್‌ ಮಾತನಾಡಿ, ಮಾರೂರು ಪ್ರದೇಶದಲ್ಲಿ ಮೂರು ಟಿಸಿಗಳು ಸ್ಥಾಪನೆಯಾಗಿದ್ದರೂ ಇನ್ನೂ ಚಾರ್ಜ್‌ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ಜರಗಿಸುವುದಾಗಿ ಎಸ್‌ಒ ಳಿಸಿದರು. ಇಂದಿರಾಗಾಂಧಿ ಪುರಸಭಾ ಕಾಂಪ್ಲೆಕ್ಸ್‌ ನ ಮೆಟ್ಟಲುಗಳಲ್ಲಿ ಯಾರೋ ಊಟ ಮಾಡಿ, ಅಲ್ಲೇ ಒಮ್ಮೊಮ್ಮೆ ಮಲ ಮೂತ್ರ ವಿಸರ್ಜನೆಯನ್ನೂ ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಆಗ್ರಹಿಸಿದರು.

ಪೊಲೀಸ್‌ ವ್ಯವಸ್ಥೆ

28 ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡ ಮೂಡುಬಿದಿರೆ ಪೊಲೀಸ್‌ ಠಾಣೆಯಿಂದ ಗ್ರಾಮಕ್ಕೊಂದು (ಮರ್ಪಾಡಿ, ಪ್ರಾಂತ್ಯಗಳಿಗೆ ತಲಾ 2, ಪುತ್ತಿಗೆಗೆ 3) ತಲಾ ಒಂದು ಬೀಟ್‌ ಪೊಲೀಸ್‌ ಒದಗಿಸುವ, ಠಾಣೆಯ ಅಗತ್ಯ ಕೆಲಸಕ್ಕೆ ಸಿಬಂದಿ, 2 ಕೋರ್ಟ್‌ ಕಾರ್ಯಗಳಿಗೆ, 3 ಸಮನ್ಸ್‌ ಜಾರಿ ಮಾಡುವುದಕ್ಕೆ ಹೀಗೆಲ್ಲ ಆದ ಬಳಿಕ ಪಾರ್ಕಿಂಗ್‌, ಟ್ರಾಫಿಕ್‌ ವ್ಯವಸ್ಥೆಗೆ ಸಿಬಂದಿ ನಿಯೋಜಿಸಬೇಕು. 13 ಮಂದಿ ಗೃಹರಕ್ಷಕರ ಪೈಕಿ ಆರು ಮಂದಿಯನ್ನು ಎರಡು ವಾರ, ಉಳಿದಾರು ಮಂದಿಯನ್ನು ಮತ್ತೆರಡು ವಾರ ಈ ಕಾರ್ಯಗಳಿಗೆ ನಿಯೋಜಿಸಬೇಕು. ಎಷ್ಟೆಲ್ಲ ಕಸರತ್ತು ಮಾಡಿದರೂ ನಮಗೆ ಸಿಬಂದಿ ಕೊರತೆ ಕಾಡುತ್ತದೆ. ಹಾಗಿದ್ದರೂ ನಾವು ಇರುವ ಸಿಬಂದಿ (ಗೃಹ ರಕ್ಷಕರು ಸೇರಿ)ಯನ್ನು ಸೂಕ್ತವಾಗಿ ಬಳಸುವ ಬಗ್ಗೆ ಮುನ್ನಾದಿನವೇ ಪಟ್ಟಿ ಮಾಡಿಕೊಳ್ಳುತ್ತೇವೆ. ಇದ್ದುದರಲ್ಲಿ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತ ಇದ್ದೇವೆ. ದಯವಿಟ್ಟು ಪೊಲೀಸರು ಏನು ಮಾಡುತ್ತಿಲ್ಲ ಎಂದು ಹೇಳಬೇಡಿ, ಪರಿಸ್ಥಿತಿ ಅವಲೋಕಿಸಿ ಎಂದು ಪಿಎಸ್‌ಐ ದಿವಾಕರ ರೈ ಹೇಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next