Advertisement

ಜಿಲ್ಲೆಯ 24 ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ

12:29 PM Mar 23, 2022 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲುಸೀಮೆಯ ಪ್ರದೇಶವಾಗಿದ್ದು, ಯಾವುದೇ ನದಿ ಮೂಲಗಳು, ನಾಲೆ ಇಲ್ಲದ ಕಾರಣ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಜಿಲ್ಲೆ ಎದುರಿಸುತ್ತಿದೆ.

Advertisement

ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ರತಿವರ್ಷವೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಜಿಲ್ಲೆ ಮಳೆ ನೀರನ್ನು ಹೆಚ್ಚು ಅವಲಂಬಿಸಿದೆ. ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ ಮೂರು ತಾಲೂಕಿಗೆ ದೊಡ್ಡಪ್ರಮಾಣದ ಜಲಾಶಯ ಮೂಲಗಳಿಲ್ಲ. ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನ ಕೆರೆಗಳಿಗೆ ನಾಗವಾರ ಹೆಬ್ಟಾಳ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತಿದೆ. ನೆಲಮಂಗಲದಲ್ಲಿ ನೀರಿಗೆ ತೀವ್ರ ಸಮಸ್ಯೆ ಇದ್ದು, ಬೇಸಿಗೆಯಲ್ಲಿ ನೆಲಮಂಗಲ ತಾಲೂಕಿನ 13ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.

ನೀರಿಗಾಗಿ ಕಾಯುವ ಪರಿಸ್ಥಿತಿ: ಎಷ್ಟೇ ಮಳೆ ಬಿದ್ದರೂ ಸಹ ನೀರಿನ ಸಮಸ್ಯೆ ಇದ್ದೇ ಇದೆ. ಗ್ರಾಮೀಣ ಪ್ರದೇಶದಲ್ಲಿರುವ ಕೊಳವೆಬಾವಿಗಳು ಈಗಾಗಲೇ ಬತ್ತಿ ಹೋಗುತ್ತಿವೆ. ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹ ಆಗಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ 337 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿತ್ತು. ನೀರಿನ ಸಮಸ್ಯೆಯಿರುವ ಹಳ್ಳಿಗಳಲ್ಲಿ ಟ್ಯಾಂಕರ್‌ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಸಲಾಗುತ್ತಿತ್ತು. ಬೆಸ್ಕಾಂನಿಂದ ಸರಿಯಾಗಿ ವಿದ್ಯುತ್‌ ಸರಬರಾಜು ಆಗದ ಕಾರಣ ಗ್ರಾಮಗಳಲ್ಲಿ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ದಿನಕ್ಕೆ ಒಂದು ಬಾರಿ ಗ್ರಾಪಂಗಳು ಕುಡಿಯುವ ನೀರು ಬಿಡುತ್ತಿದ್ದರೂ, ಸಮರ್ಪಕ ನೀರು ಸಿಗದೆ ಮಹಿಳೆಯರು ತಮ್ಮ ಕೆಲಸ ಕಾರ್ಯ ಬಿಟ್ಟು ನೀರಿನ ಟ್ಯಾಂಕ್‌ ಮುಂದೆ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ: ರಾಜ್ಯ ಸರ್ಕಾರವು ಜಲಜೀವನ್‌ ಮಿಷನ್‌ ಯೋಜನೆಯಲ್ಲಿ 2024ರ ವೇಳೆಗೆ ಜಿಲ್ಲೆಯ ಪ್ರತಿ ಜನರಿಗೂ ಶುದ್ಧ ಕುಡಿಯುವ ನೀರನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗೆ ಜಿಲ್ಲೆಯನ್ನು ಪರಿಗಣಿಸಿದೆ. ಬೇಸಿಗೆ ಝಳ ಹೆಚ್ಚಾಗಿರುವ ಹಿನ್ನೆಲೆ, ಅಗತ್ಯ ಸಿದ್ಧತೆಗಳನ್ನು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷಾಂತ್ಯದಲ್ಲಿ ಸುರಿದ ಮಳೆಯಿಂದ ಮತ್ತು ಎನ್‌.ಎಚ್‌.ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರನ್ನು ಕೆಲ ತಾಲೂಕುಗಳ ಕೆರೆ ತುಂಬಿಸಿದ ಹಿನ್ನೆಲೆ ನೀರಿನ ಲಭ್ಯತೆಯಿದ್ದು, ಹಲವೆಡೆ ಅಂತರ್ಜಲ ಏರಿಕೆ ಕಂಡಿದೆ. ನೀರಿನ ಮೂಲಗಳಿಲ್ಲದ ಕೆಲವು ಹಳ್ಳಿಗಳಲ್ಲಿ ನೀರಿನ ತೀವ್ರ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚುವ ಸಾಧ್ಯತೆಯಿದೆ. ಜಿಪಂ ಬೇಸಿಗೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇಲಾಖೆಯಿಂದ ನೀರು ಸರಬರಾಜು: ಜಿಪಂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಈಗಾಗಲೇ ಬರ ಅನುಭವಿಸುತ್ತಿರುವ 24 ಗ್ರಾಮಗಳಲ್ಲಿ 22 ಕಡೆ ಖಾಸಗಿ ಕೊಳವೆಬಾವಿ ಮೂಲಕ ಹಾಗೂ ಎರಡು ಕಡೆ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡುತ್ತಿದೆ. ಜಿಲ್ಲೆಯ ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಜನರಿಗೆ ಬೇಸಿಗೆ ನೀರಿನ ಸಮಸ್ಯೆ ಅಷ್ಟಾಗಿ ತಟ್ಟುತ್ತಿಲ್ಲ. ಮಾರ್ಚ್‌ ತಿಂಗಳಿನಲ್ಲಿ ಬೇಸಿಗೆ ಪ್ರಮಾಣ ಹೆಚ್ಚಿದ್ದು, ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.

Advertisement

ನೀರಿನ ಸಮಸ್ಯೆಯಿರುವ ಗ್ರಾಮಗಳ ಸಂಖ್ಯೆ: ದೇವನಹಳ್ಳಿ ತಾಲೂಕಿನಲ್ಲಿ 1 ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು, ಹಾಗೂ 5 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ, ಹೊಸಕೋಟೆ ತಾಲೂಕಿನಲ್ಲಿ 1 ಗ್ರಾಮ ಖಾಸಗಿ ಕೊಳವೆಬಾವಿಯ ಮೂಲಕ ನೀರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3 ಗ್ರಾಮ ಖಾಸಗಿ ಕೊಳವೆ ಬಾವಿಯ ಮೂಲಕ ನೀರು ಪೂರೈಕೆ ಹಾಗೂ ನೆಲಮಂಗಲ ತಾಲೂಕಿನಲ್ಲಿ 1 ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು, 13 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 24 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

ಪ್ರತಿವರ್ಷ ಬೇಸಿಗೆಯಲ್ಲಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತವೆ. ಬೇಸಿಗೆ ಪ್ರಾರಂಭ ಆಗಿರುವುದರಿಂದ ಬರಪೀಡಿತ ಪ್ರದೇಶಗಳ ಕುರಿತು ಸರ್ಕಾರ ಜಿಲ್ಲಾಡಳಿತದಿಂದ ಪಟ್ಟಿ ಸಿದ್ಧಪಡಿಸಿ ಅನುದಾನದೊಂದಿಗೆ ನೀರಿನ ಸಮಸ್ಯೆಗಳಿದ್ದರೆ ಬಗೆಹರಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಪಂನಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆ. ರೇವಣಪ್ಪ, ಜಿಪಂ ಸಿಇಒ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌, ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಬಳಿಕ ಜಿಲ್ಲಾಡಳಿತದ ಮಾರ್ಗದರ್ಶನದಿಂದ ಗ್ರಾಮಗಳಿಗೆ ನೀರಿನ ಪೂರೈಕೆಗೆ ರೂಪುರೇಷೆ ತಯಾರಿಸಲಾಗುತ್ತಿದೆ. ಸವಿತಾ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.

 

ಎಸ್.ಮಹೇಶ್

Advertisement

Udayavani is now on Telegram. Click here to join our channel and stay updated with the latest news.

Next