Advertisement

ಅಧಿವೇಶನದಲ್ಲಿ ಸಮಸ್ಯೆ ಮಾರ್ದನಿ

02:47 PM May 03, 2018 | Team Udayavani |

ಮಾಸ್ತಿ: ವಿಧಾನಸಭೆ ಅಧಿವೇಶನದಲ್ಲಿ ಮಾಲೂರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾರೂ ಚರ್ಚಿಸಿರಲಿಲ್ಲ. ಆದರೆ, ನಾನು ಶಾಸಕನಾದ ಮೇಲೆ ಮಾಲೂರಿನ ಸಮಸ್ಯೆಗಳ ಬಗ್ಗೆ ಟೇಬಲ್‌ ತಟ್ಟಿ ಮಾತನಾಡಿದ್ದೇನೆ. ಇದರ ಪ್ರಭಾವದಿಂದ ಸಿಎಂ ಸಿದ್ದರಾಮಯ್ಯ ಅವರು ಒಂದೇ ವಾರದಲ್ಲಿ ಬೆಂಗಳೂರಿನ ಕೊಳಚೆ ನೀರು ಹರಿಸಲು ಅನುಮೋದನೆ ನೀಡಿದರು ಎಂದು ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌. ಮಂಜುನಾಥಗೌಡ ಹೇಳಿದರು. ಮಾಸ್ತಿ ಹಾಗೂ ಹೋಬಳಿಯ ತುರುಣಿಸಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಮತಯಾಚನೆ ನಡೆಸಿ ಮಾತನಾಡಿದರು.

Advertisement

ಸಚಿವರ ಸಹಕಾರವೂ ಇದೆ: ಕಳೆದ 40 ವರ್ಷಗಳಿಂದ ವಿಧಾನಸಭೆ ಅಧಿವೇಶನದಲ್ಲಿ ಮಾಲೂರು ಸಮಸ್ಯೆಗಳ ಬಗ್ಗೆ ಯಾರೂ ಚರ್ಚಿಸಿರಲೇಯಿಲ್ಲ. ಆದರೆ, ನಾನು ಶಾಸಕನಾದ ಮೇಲೆ ಮಾಲೂರಿನ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಟೇಬಲ್‌ ತಟ್ಟಿ ಮಾತನಾಡಿದೆ. ನನ್ನ ಆವೇಶಭರಿತ ಮಾತುಗಳಿಂದ ಮುಖ್ಯಮಂತ್ರಿಗಳು ಬೆಂಗಳೂರಿನ ಕೊಳಚೆ ನೀರು ಹರಿಸಲು ಅನುಮೋದನೆ ನೀಡಿದರು. ಇದರಲ್ಲಿ ಸಚಿವ ರಮೇಶ್‌ಕುಮಾರ್‌ರ ಪಾತ್ರವೂ ಪ್ರಮುಖವಾಗಿದೆ. ಈ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತಿಳಿಸಿದಾಗ, ಮೇಕೆದಾಟು ಮೂಲಕ ಬಂದರೆ ಮೊದಲು ಮಾಸ್ತಿ ಹೋಬಳಿ
ಕೆರೆಗಳಿಗೆ ನೀರು ಬರಲಿದೆ. ಇದರಿಂದ ಈ ಭಾಗದಲ್ಲಿ ಅನುಕೂಲ ವಾಗಲಿದೆ ಎಂದು ತಿಳಿಸಿದರೆಂದು ಹೇಳಿದರು.

ಕೈಗಾರಿಕಾ ವಸಾಹತು ಸ್ಥಾಪನೆ: ಎಚ್‌.ಡಿ. ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚುನಾವಣೆ ಮುಗಿದ ನಂತರ ಮಾಸ್ತಿ ಮತ್ತು ದಿನ್ನಹಳ್ಳಿ ಮಧ್ಯ ಭಾಗದಲ್ಲಿ ಕೈಗಾರಿಕೆ ಪ್ರದೇಶವನ್ನು ಸ್ಥಾಪಿಸಲು ಮಾಸ್ತಿಯಲ್ಲಿ ಸಾರ್ವಜನಿಕರೊಂದಿಗೆ ಸಭೆ ಸೇರಿ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದೆಂದರು.

ಮಾದರಿ ಕ್ಷೇತ್ರ: ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಧಿಕ ಮತಗಳಿಂದ ತಮ್ಮನ್ನು ಮತ್ತೂಮ್ಮೆ ಶಾಸಕರಾಗಿ ಆಯ್ಕೆ ಮಾಡಿದರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಕ್ಷೇತ್ರವಾಗಿಸುವುದಾಗಿ ಹೇಳಿದರು. ಜೆಡಿಎಸ್‌ಗೆ ಸೇರ್ಪಡೆ: ಇದೇ ಸಂದರ್ಭದಲ್ಲಿ ಹಲವಾರ ಮಂದಿ ವಿವಿಧ ಪಕ್ಷಗಳನ್ನು ತೊರೆದು ಶಾಸಕ ಮಂಜುನಾಥಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.

ಶಾಸಕರ ಪುನರಾಯ್ಕೆ ಮಾಡಿ: ಮಾಸ್ತಿ ಹೋಬಳಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್‌ಗೌಡರು ಮತಯಾಚನೆ ನಡೆಸುತ್ತಾ ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ವಿ.ಹನುಮಪ್ಪಅವರ ಸ್ವಾಗ್ರಾಮ ಬಿಟ್ನಹಳ್ಳಿಗೆ ಆಗಮಿಸಿದಾಗ ಅವರನ್ನು ವಿ.ಹನುಮಪ್ಪ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದೇನೆ. ನ್ಯಾಷನಲ್‌ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುತ್ತಿರುತ್ತೇನೆ. ಮುಂದೆಯೂ
ಬಿಜೆಪಿಯಲ್ಲೇ ಇರುತ್ತೇನೆ. ಆದರೆ, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಯಾವ ಪಕ್ಷಗಳೂ ಬೇಡ. ಮನೆಗೆ ದೊಡ್ಡ ಮಗನಂತೆ ದುಡಿದಿರುವ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡರನ್ನು ಪ್ರತಿಯೊಬ್ಬರೂ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಜಿಪಂ ಸದಸ್ಯ ಎಚ್‌.ವಿ.ಶ್ರೀನಿವಾಸ್‌, ಗ್ರಾಪಂ ಉಪಾಧ್ಯಕ್ಷ ಸತೀಶ್‌, ಸದಸ್ಯ ಶೌಕತ್‌ವುಲ್ಲಾ ಬೇಗ್‌, ಮಾಜಿ ಮಂಡಲ್‌ ಪ್ರಧಾನ ಕೆ.ಆರ್‌. ಕೃಷ್ಣೇಗೌಡ, ಎಚ್‌.ಆರ್‌.ಮುನಿಯಪ್ಪ, ಮುಖಂಡ ರಾದ ಅಗ್ರಿ ನಾರಾಯಣಪ್ಪ, ಬಲ್ಲಹಳ್ಳಿ ನಾರಾಯಣ ಸ್ವಾಮಿ, ದಿನ್ನಹಳ್ಳಿ ರಮೇಶ್‌, ಮಿರಪನಹಳ್ಳಿ ಪ್ರಭಾಕರ್‌, ರವಿ, ನೀಮತ್‌ವುಲ್ಲಾ ಬೇಗ್‌, ಚವರಮಂಗಲ ನಾಗರಾಜ್‌, ನರೇಂದ್ರ ಗೋಪಾಲ್‌ ಗೌಡ, ವಿನೋದ್‌, ಬಾಲಾಜಿ ಸೇರಿದಂತೆ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಮಾಲೂರು ಕ್ಷೇತ್ರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನು ನೀಡಿದವರ ಕುಟುಂಬದ ಒಬ್ಬರಿಗೆ ಕಂಪನಿಗಳಲ್ಲಿ ಉದ್ಯೋಗ ಸಿಗುತ್ತದೆ. ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುವುದರಿಂದ ಈ ಭಾಗದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೇ, ಈ ಭಾಗದಲ್ಲಿ ಜಮೀನಿನ ಬೆಲೆಯೂ ಹೆಚ್ಚಾಗುತ್ತದೆ.
●ಕೆ.ಎಸ್‌.ಮಂಜುನಾಥಗೌಡ, ಜೆಡಿಎಸ್‌ ಅಭ್ಯರ್ಥಿ 

Advertisement

Udayavani is now on Telegram. Click here to join our channel and stay updated with the latest news.

Next