Advertisement

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಪರದಾಟ

04:50 PM Jun 27, 2022 | Team Udayavani |

ಚಿಕ್ಕೋಡಿ: ನಗರದ ಹೈಟೆಕ್‌ ಬಸ್‌ ನಿಲ್ದಾಣ ಬಳಿ ಪಾರ್ಕಿಂಗ್‌ಗಾಗಿ ಸಾರ್ವಜನಿಕರು ಮತ್ತು ಸಾರಿಗೆ ಸಂಸ್ಥೆ ಸಿಬ್ಬಂದಿ ನಡುವೆ ಪ್ರತಿದಿನ ಒಂದಿಲ್ಲಾ ಒಂದು ವಾಗ್ವಾದ ನಡೆಯುತ್ತಲೇ ಇದೆ. ಇದರಿಂದ ಬಸ್‌ ಚಾಲಕರಿಗೆ ನಿತ್ಯ ಕಿರಿಕಿರಿಯಾಗಿದೆ.

Advertisement

ಬಸ್‌ ನಿಲ್ದಾಣದೊಳಗೆ ಹೋಗುವ ಗೇಟ್‌ ಬಳಿಯೇ ಸಾರ್ವಜನಿಕರು ದ್ವಿಚಕ್ರ ವಾಹನ ನಿಲ್ಲಿಸುತ್ತಿರುವುದರಿಂದ ಬಸ್‌ ತೆಗೆದುಕೊಂಡು ಹೋಗುವ ಚಾಲಕರು ಸಂಕಷ್ಟ ಪಡುವಂತಾಗಿದೆ.

ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಇಕ್ಕಟ್ಟಾದ ರಸ್ತೆ ಇರುವುದರಿಂದ ಅಲ್ಲದೇ ಪಕ್ಕದಲ್ಲೇ ಅನಧಿಕೃತ ಪಾರ್ಕಿಂಗ್‌ ಮಾಡುವುದರಿಂದ ಬಸ್‌ ನಿಲ್ದಾಣಕ್ಕೆ ಪ್ರವೇಶಿಸುವ ಬಸ್‌ಗಳು ತಿರುವಿನಲ್ಲಿ ಭಾರೀ ಕಸರತ್ತು ಎದುರಿಸಬೇಕಾಗುತ್ತದೆ.

ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ ಇಲಾಖೆ: ಬಸ್‌ ನಿಲ್ದಾಣದ ಎಡ ಬದಿಯಲ್ಲಿ ಸಾರಿಗೆ ಇಲಾಖೆ ದ್ವಿಚಕ್ರ ವಾಹನಕ್ಕೆ 10ರೂ., ಕಾರುಗಳಿಗೆ 30ರೂ. ಹೀಗೆ ದರ ನಿಗದಿ ಮಾಡಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ ಹೆಚ್ಚೆಚ್ಚು ವಾಹನ ಸವಾರರು ಬಸ್‌ ನಿಲ್ದಾಣ ಮುಂಭಾಗದಲ್ಲಿಯೇ ಪಾರ್ಕಿಂಗ್‌ ಮಾಡುವುದರಿಂದ ಸಾರಿಗೆ ಸಿಬ್ಬಂದಿಗೆ ತಲೆನೋವಾಗಿದೆ.

ಕಬ್ಬಿನ ಸಲಾಕೆ ತೆರವಿಗೆ ಒತ್ತಾಯ: ಬಸ್‌ ನಿಲ್ದಾಣ ಬಲ ಬದಿಯಲ್ಲಿ ಬಸ್‌ ಹೋಗುವ ಪ್ರವೇಶ ದ್ವಾರ ಹೊರತುಪಡಿಸಿ ಉಳಿದ ಕಡೆ ಸಾಕಷ್ಟು ಖಾಲಿ ಜಾಗ ಇದೆ. ಅಲ್ಲಿ ದ್ವಿಚಕ್ರ ವಾಹನ ನಿಲ್ಲಲು ಅವಕಾಶವಿದೆ. 5 ರಿಂದ 10 ನಿಮಿಷ ಬಸ್‌ ನಿಲ್ದಾಣದೊಳಗೆ ಹೋಗಿ ಬರುವವರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರು ಒಳಗೆ ಬರದಂತೆ ಹಾಕಿರುವ ಕಬ್ಬಿನದ ಸಲಾಕೆ ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇಡೀ ದಿನ ವಾಹನ ನಿಲ್ಲಿಸಿ ಹೋಗುವ ನಾಗರಿಕರಿಗೆ ಪಾರ್ಕಿಂಗ್‌ ಸೌಲಭ್ಯ ಅನುಕೂಲ ಆದರೆ ಬಸ್‌ ನಿಲ್ದಾಣದ ಒಳಗಿರುವ ಬುಕ್‌ ಸ್ಟಾಲ್‌, ಝರಾಕ್ಸ್‌ ಮತ್ತು ಬೇಕರಿ ಅಂಗಡಿಗಳಿಗೆ ಕೇವಲ 5 ರಿಂದ 10 ನಿಮಿಷ ಹೋಗಿ ಬರುವ ನಾಗರಿಕರು 10 ರೂ. ಪಾರ್ಕಿಂಗ್‌ ಶುಲ್ಕ ಕಟ್ಟಲು ಸಾಧ್ಯವಿಲ್ಲ. ಬಸ್‌ ನಿಲ್ದಾಣದ ಮುಂಭಾಗ ಖಾಲಿ ಇರುವ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಬೇಕೆಂಬುದು ಜನರ ಬೇಡಿಕೆ.

Advertisement

ಹೈಟೆಕ್‌ ಬಸ್‌ ನಿಲ್ದಾಣದ ಮೇಲ್ಭಾಗದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ಕಚೇರಿ ಬರುವುದರಿಂದ ಬಸ್‌ ನಿಲ್ದಾಣದ ಮುಂಭಾಗ ಕಬ್ಬಿನ ಸಲಾಕೆ ಹಾಕಲಾಗಿದೆ. ಹೀಗಾಗಿ ಹೆಚ್ಚಿನ ಬೈಕ್‌ಗಳು ಬಸ್‌ ಪ್ರವೇಶ ದ್ವಾರದಲ್ಲಿ ನಿಲ್ಲುವುದರಿಂದ ಈ ಸಮಸ್ಯೆ ಎದುರಾಗಿದೆ. ಬರುವ 15 ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ. –ಸಂಗಪ್ಪ, ಘಟಕ ವ್ಯವಸ್ಥಾಪಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ.

ಬಸ್‌ ನಿಲ್ದಾಣದೊಳಗಿರುವ ಬುಕ್‌ ಸ್ಟಾಲ್‌ ಮತ್ತು ಇತರೆ ಅಂಗಡಿಗಳಿಗೆ ಹೋಗಿ ಬರಲು 4 ರಿಂದ 5 ನಿಮಿಷ ದ್ವಿಚಕ್ರ ವಾಹನ ನಿಲ್ಲಿಸಲು 10 ರೂ. ಶುಲ್ಕ ಕಟ್ಟಬೇಕು. ಇದು ಸಾಧ್ಯವಾಗದು. ಬಸ್‌ ನಿಲ್ದಾಣದ ಮುಂಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಇಂತಹ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ಕಬ್ಬಿನ ಸಲಾಕೆ ತೆರವು ಮಾಡಬೇಕು. –ಮಾರುತಿ ಎಚ್‌., ದ್ವಿಚಕ್ರ ವಾಹನ ಸವಾರ

„ಮಹಾದೇವ ಪೂಜೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next