ಉತ್ತರ ಪ್ರದೇಶ/ ಡೆಹ್ರಾಡೋನ್: ಭೀಕರ ರಸ್ತೆ ಅಪಘಾತದಲ್ಲಿ ವೃತ್ತಿಪರ ಬೈಕರ್, ಖ್ಯಾತ ಯೂಟ್ಯೂಬರ್ ವೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ಬುಧವಾರ ( ಮೇ. 3 ರಂದು) ನಡೆದಿದೆ.
ಯೂಟ್ಯೂಬ್ ನಲ್ಲಿ ತನ್ನ ʼಪ್ರೊ ರೈಡರ್ 1000ʼ ಎನ್ನುವ ಚಾನೆಲ್ ನಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಡೆಹ್ರಾಡೋನ್ ಮೂಲದ ಅಗಸ್ತ್ಯ ಚೌಹಾಣ್ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಯೂಟ್ಯೂಬ್ ನಲ್ಲಿ ಬೈಕ್ ಓಡಿಸುವ ವಿಡಿಯೋ, ಸ್ಟಂಟ್ ಗಳನ್ನು ವ್ಲಾಗ್ ರೀತಿ ಮಾಡಿ ಆಪ್ಲೋಡ್ ಮಾಡುತ್ತಿದ್ದ ಅಗಸ್ತ್ಯ ಚೌಹಾಣ್ 1.2 ಮಿಲಿಯ್ ಸಬ್ ಸ್ಕ್ರೈಬರ್ಸ್ ನ್ನು ಹೊಂದಿದ್ದರು. ಬೈಕ್ ಕುರಿತದ ವಿಡಿಯೋಗಳಿಂದಲೇ ಜನಪ್ರಿಯತೆ ಪಡೆದುಕೊಂಡಿದ್ದರು.
ಅಗಸ್ತ್ಯ ಚೌಹಾಣ್ ದೆಹಲಿಯಲ್ಲಿ ನಡೆಯಲಿದ್ದ ಬೈಕ್ ರೇಸಿಂಗ್ ವೊಂದರಲ್ಲಿ ಭಾಗವಹಿಸಲು ʼZX10R ನಿಂಜಾʼ ಸೂಪರ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ತನ್ನ ಯೂಟ್ಯೂಬ್ ಚಾನೆಲ್ ಗಾಗಿ ಮೊದಲ ಬಾರಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ಓಡಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ತಪ್ಪಲ್ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇ ದಾರಿ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅವರ ಹೆಲ್ಮೆಟ್ ಪುಡಿ ಪುಡಿಯಾಗಿದ್ದು, ತಲೆಗೆ ತೀವ್ರತರದ ಏಟಾಗಿ ಅಗಸ್ತ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಗಸ್ತ್ಯ ತನ್ನ ಪ್ರತಿಯೊಂದು ವಿಡಿಯೋದಲ್ಲಿಯೂ ಜಾಗ್ರತೆಯಿಂದ ಬೈಕ್ ಓಡಿಸಿ ಎಂದು ಸೂಚನೆಯನ್ನು ಹಾಕುತ್ತಿದ್ದರು. ಸಾವಿನ 16 ಗಂಟೆ ಮುಂಚೆಯೂ ವಿಡಿಯೋ ಆಪ್ಲೋಡ್ ಮಾಡಿದ್ದರು. ಅವರ ನಿಧನದ ಸುದ್ದಿಯಿಂದ ಅನೇಕರು ಕಂಬನಿ ಮಿಡಿದಿದ್ದಾರೆ. ಅವರ ಫಾಲೋವರ್ಸ್ ಗಳಿಗೆ ಇದು ಆಘಾತವನ್ನೀಡಿದೆ.