Advertisement

ಪಾಕ್‌ ಪರ ಘೋಷಣೆ: ಎಸ್‌ಐಟಿ ತನಿಖೆಗೆ

11:39 PM Feb 22, 2020 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನಾ ಸಮಾವೇಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

Advertisement

ಚಿಕ್ಕಪೇಟೆ ಎಸಿಪಿ, ಮಹಂತ ರೆಡ್ಡಿ ನೇತೃತ್ವದಲ್ಲಿ ಉಪ್ಪಾರಪೇಟೆ ಇನ್‌ಸ್ಪೆಕ್ಟರ್‌ ಸುರೇಶ್‌, ಚಾಮರಾಜಪೇಟೆ ಪಿಐ ಕುಮಾರಸ್ವಾಮಿ ಮತ್ತು ಕೆ.ಆರ್‌.ಮಾರುಕಟ್ಟೆ ಠಾಣೆ ಪಿಐ ಸತೀಶ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಈಗಾಗಲೇ ಒಂದು ತಂಡ ಚಿಕ್ಕಮಗಳೂರಿಗೆ ತೆರಳಿದೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ ಚಿಕ್ಕಮಗಳೂರಿನ ಅಮೂಲ್ಯ ಲಿಯೋನ್‌ ಮತ್ತು ಪಾಕ್‌ ಪರ ಬಿತ್ತಿ ಫ‌ಲಕ ಪ್ರದರ್ಶಿಸಿದ ಅರ್ದ್ರಾ ಪೋಷಕರನ್ನು ಎಸ್‌ಐಟಿ ವಿಚಾರಣೆ ನಡೆಸಲಿದೆ. ಜತೆಗೆ, ಇಬ್ಬರು ಯುವತಿಯ ಹಿಂದೆ ದೊಡ್ಡ ತಂಡವೇ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಮುಖವಾಗಿ ಅಮೂಲ್ಯ ಹಿಂದಿರುವ ಕೆಲ ವ್ಯಕ್ತಿಗಳ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ಎಲ್ಲರ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ: ಈ ಮಧ್ಯೆ, ಅಮೂಲ್ಯ ಲಿಯೋನ್‌ ತನ್ನ ಹಿಂದಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ನಾನು ಹೇಳುವ ಮಾತು ನನ್ನದಲ್ಲ. ನನ್ನ ಹಿಂದೆ ಸಲಹಾ ಮಂಡಳಿ ಇದೆ. ನನ್ನ ಭಾಷಣದ ಹಿಂದೆ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದೊಡ್ಡ ಗುಂಪು ಇದೆ. ಅವರೆಲ್ಲ ನಿಜವಾದ ಹಿರೋಗಳು. ಎಲ್ಲಿ? ಯಾವಾಗ? ಏನು ಮಾತನಾಡಬೇಕು? ಎಂಬುದನ್ನು ಅವರೇ ಸೂಚಿಸಿದ್ದಾರೆ. ಅಂದರಂತೆ ನಾನು ಮಾತನಾಡಿದ್ದೇನೆ’ ಎಂಬ ಹೇಳಿಕೆ ವೈರಲ್‌ ಆಗಿರುವ ವಿಡಿಯೋದಲ್ಲಿ ಇದೆ.

ಅಮೂಲ್ಯ ಪರಿಚಯ: ಇನ್ನು ಪುರಭವನದ ಎದುರು ಹಿಂದೂಪರ ಸಂಘಟನೆಯಲ್ಲಿ ಪಾಲ್ಗೊಂಡು, ಫ್ರೀ ಕಾಶ್ಮೀರ ನಾಮಫ‌ಲಕ ಪ್ರದರ್ಶಿಸಿ ಬಂಧನಕ್ಕೊಳಗಾಗಿರುವ ಖಾಸಗಿ ಕಂಪನಿ ಉದ್ಯೋಗಿ ಆರ್ದ್ರಾಳಿಗೆ ಈ ಮೊದಲೇ ಅಮೂಲ್ಯ ಪರಿಚಯವಾಗಿರುವ ಕುರಿತು ಮಾಹಿತಿ ಸಿಕ್ಕಿದೆ. ಆರ್ದ್ರಾಳ ಫೇಸ್‌ಬುಕ್‌ ಸ್ನೇಹಿತೆಯಾಗಿರುವ ಅಮೂಲ್ಯ ತನ್ನ ಹೋರಾಟದ ಬಗ್ಗೆ ಈಕೆಗೆ ಪ್ರಚೋದಿಸುತ್ತಿದ್ದಳು. ಅಲ್ಲದೆ, 370 ವಿಧಿ ರದ್ದತಿ ಮತ್ತು ಸಿಎಎ ವಿರುದ್ಧದ ಹೋರಾಟದಲ್ಲಿ ಪ್ರಚೋದನೆಗೊಂಡು ಪಾಲ್ಗೊಂಡಾಗ ಅಮೂಲ್ಯ ಇನ್ನಷ್ಟು ಆತ್ಮೀಯಳಾದಳು.

Advertisement

ಅಮೂಲ್ಯ ವಿರುದ್ಧ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟದ ದಿಕ್ಕು ಬದಲಿಸುವ ಉದ್ದೇಶದಿಂದಲೇ ಫ್ರೀ ಕಾಶ್ಮೀರ ನಾಮಫ‌ಲಕ ಪ್ರದರ್ಶಿಸಲಾಯಿತು. ಈ ಮಧ್ಯೆ, ಶನಿವಾರ ಆರ್ದ್ರಾ ಪೋಷಕರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪುತ್ರಿಗೆ ಅಗತ್ಯವಿರುವ ಔಷಧಿ ಕೊಡಲು ಹೋಗಿದ್ದರು. ಆದರೆ, ಅಧಿಕಾರಿಗಳು ಭೇಟಿಗೆ ನಿರಾಕರಿಸಿದರು ಎಂದು ಹೇಳಲಾಗಿದೆ.

ಜೈಲಿನಲ್ಲಿಯೂ ಕಿರಿಕ್‌: ಸದ್ಯ ದೇಶದ್ರೋಹ ಪ್ರಕರಣದಲ್ಲಿ ಜೈಲು ಸೇರಿರುವ ಅಮೂಲ್ಯ ಜೈಲಿನಲ್ಲಿಯೂ ಏರು ಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ್ದಾಳೆ. ತನ್ನ ಹೋರಾಟದ ಹಾದಿಯನ್ನು ಎಲ್ಲರೂ ತುಳಿಯುತ್ತಿದ್ದಾರೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.

ಇಮ್ರಾನ್‌ಪಾಷಾ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಪಾದರಾಯನಪುರ ವಾರ್ಡ್‌ನ ಜೆಡಿಎಸ್‌ ಸದಸ್ಯ ಇಮ್ರಾನ್‌ ಪಾಷಾನನ್ನು ಶನಿವಾರ ಸುಮಾರು ಎಂಟು ಗಂಟೆಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ್ದರು. ‌ “ಹಿಂದೂ-ಮುಸ್ಲಿಂ-ಸಿಖ್‌-ಇಸಾಯಿ ಫೌಂಡೇಶನ್’ ಸಹಯೋಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಅದರ ಉಸ್ತುವಾರಿಯನ್ನು ಇಮ್ರಾನ್‌ ಪಾಷಾ ವಹಿಸಿದ್ದರು. ಜತೆಗೆ, ಆಯೋಜನೆಗೆ ಸಹಕರಿಸಿದ ರಾಜಕೀಯ ಪಕ್ಷವೊಂದರ ಬೆಂಗಳೂರು ಘಟಕದ ಅಧ್ಯಕ್ಷ ಇಬ್ರಾಹಿಂ ಎಂಬುವರಿಗೂ ನೋಟಿಸ್‌ ನೀಡಲಾಗಿತ್ತು.

ಸದ್ಯ ಇಮ್ರಾನ್‌ ಪಾಷಾ ಶನಿವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ, ಅಮೂಲ್ಯಳಿಗೆ ಆಯೋಜಕರಿಂದ ನೇರವಾಗಿಯೇ ಅಹ್ವಾನ ಇತ್ತು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಈ ಮಧ್ಯೆ, ಸದ್ಯದಲ್ಲೇ ಅಮೂಲ್ಯ ಮತ್ತು ಆರ್ದ್ರಾರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ತೀರ್ಮಾನಿಸಿದ್ದು, ಸೋಮವಾರ ಅಥವಾ ಮಂಗಳವಾರ ಇಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಎಎನ್‌ಎಫ್ ಜತೆ ಸಂಪರ್ಕ: ಅಮೂಲ್ಯಳಿಗೆ ನಕ್ಸಲ್‌ ಜತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭಿಸಿರುವುದರಿಂದ ವಿಶೇಷ ತನಿಖಾ ತಂಡದ ಅಧಿಕಾರಿಗಳು ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಅಧಿಕಾರಿಗಳ ಜತೆ ಚರ್ಚಿ ಸುತ್ತಿದ್ದಾರೆ. ಜತೆಗೆ, ಅಮೂಲ್ಯಳ ಈ ಹಿಂದಿನ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next