ಹೊಸ ವರ್ಷ ಭರ್ಜರಿಯಾಗಿ ಎಂಟ್ರಿಕೊಟ್ಟಿದೆ. ಹೊಸ ವರ್ಷದಲ್ಲಿ ಸಾಕಷ್ಟು ಸ್ಟಾರ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ ಎಂಬುದು ನಿಮಗೆ ಗೊತ್ತಿದೆ. ಆದರೆ, ವರ್ಷಾರಂಭದಲ್ಲಿ, ಅದರಲ್ಲೂ ಮೊದಲು ತಿಂಗಳು (ಜನವರಿ)ಯಲ್ಲಿ ಕನ್ನಡ ಚಿತ್ರರಂಗದ ಯಾವುದೇ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಸಾಮಾನ್ಯವಾಗಿ ಹಬ್ಬ ಸಮಯದಲ್ಲಿ ಸಿನಿಮಾ ಬಿಡುಗಡೆ, ಮುಹೂರ್ತ ಜೋರಾಗಿರುತ್ತದೆ. ಆದರೆ, ಈ ಬಾರಿ ಸಂಕ್ರಾಂತಿಗೂ ಕನ್ನಡದಿಂದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಯಾವುದೇ ಸಿನಿಮಾಗಳು ತೆರೆಗೆ ಬರುತ್ತಿಲ್ಲ.
ಆದರೆ, ಪರಭಾಷೆ ಮಾತ್ರ ಧೂಳೆಬ್ಬಿಸಲು ಹೊರಟಿದೆ. ತಮಿಳು, ತೆಲುಗಿನಿಂದ ಸಾಲು ಸಾಲು ಸ್ಟಾರ್ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿವೆ. ರಜನಿಕಾಂತ್, ಮಹೇಶ್ ಬಾಬು, ಅಲ್ಲು ಅರ್ಜುನ್, ಧನುಶ್ … ಹೀಗೆ ತಮಿಳು, ತೆಲುಗು ಚಿತ್ರರಂಗದ ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳಷ್ಟೇ ಬಿಡುಗಡೆ ಯಾಗುತ್ತಿವೆಯೇ ಹೊರತು ಕನ್ನಡದಿಂದ ಯಾವ ಸ್ಟಾರ್ ಸಿನಿಮಾಗಳು ಕೂಡಾ ಬಿಡುಗಡೆಯಾಗುತ್ತಿಲ್ಲ. ಈ ಮೂಲಕ ವರ್ಷಾರಂಭದಲ್ಲಿ ಪರಭಾಷಾ ಸಿನಿಮಾಗಳ ಸದ್ದೇ ಜೋರಾಗಲಿದೆ.
ರಜನಿಕಾಂತ್ ಅಭಿನಯದ “ದರ್ಬಾರ್’ ಸಿನಿಮಾ ಮೂಲಕ ಪರಭಾಷೆ ಅಬ್ಬರ ಶುರುವಾಗಲಿದೆ. ಜನವರಿ 09ಕ್ಕೆ “ದರ್ಬಾರ್’, ಜನವರಿ 10ಕ್ಕೆ ಮಹೇಶ್ ನಟನೆಯ “ಸರಿಲೇರು ನೀಕೆವರು’, ಜನವರಿ 12ಕ್ಕೆ ಅಲ್ಲು ಅರ್ಜುನ್ ನಟನೆಯ “ಅಲಾ ವೈಕುಂಠಪುರಂಲೋ’ ಹಾಗೂ ಜನವರಿ 16ಕ್ಕೆ ಧನುಶ್ ಅಭಿನಯದ “ಪಟ್ಟಾಸ್’ ಚಿತ್ರಗಳು ಮುಖ್ಯವಾಗಿ ಬಿಡುಗಡೆಯಾಗುತ್ತಿವೆ. ಈ ಎಲ್ಲಾ ಚಿತ್ರಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದರಿಂದ ಬಹು ತೇಕ ಚಿತ್ರಮಂದಿರಗಳನ್ನು ಈ ಎಲ್ಲಾ ಚಿತ್ರಗಳು ಆವರಿಸಿಕೊಳ್ಳಲಿದೆ.
ಹಾಗಾದರೆ ಕನ್ನಡದಿಂದ ಸ್ಟಾರ್ ನಟರ ಚಿತ್ರಗಳು ಯಾವಾಗಿನಿಂದ ಬಿಡುಗಡೆಯಾಗಲಿವೆ ಎಂದರೆ ಫೆಬ್ರವರಿಯಿಂದ ಎನ್ನಬಹುದು. ಶಿವರಾಜಕುಮಾರ್ ಅವರ “ದ್ರೋಣ’ ಫೆಬ್ರವರಿಯಲ್ಲಿ ಬರುವ ಸಾಧ್ಯತೆ ಇದೆ. ಧ್ರುವ “ಪೊಗರು’ ಮಾರ್ಚ್, ಪುನೀತ್ “ಯುವರತ್ನ’ ಹಾಗೂ ಜಗ್ಗೇಶ್ “ತೋತಾಪುರಿ’ ಏಪ್ರಿಲ್‌ನಲ್ಲಿ ಬರುವ ಸಾಧ್ಯತೆ ಇದೆ. ಈ ಮೂಲಕ ಅಭಿಮಾನಿಗಳಿಗೆ ಸಿನಿಹಬ್ಬವಾಗಲಿದೆ. ಸದ್ಯ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಮತ್ತು ದರ್ಶನ್ ಅವರ “ಒಡೆಯ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿವೆ.
ರಜನಿ “ದರ್ಬಾರ್’ಗೆ ವಿರೋಧ”: ರಜನಿಕಾಂತ್ ಅಭಿನಯದ “ದರ್ಬಾರ್’ ಚಿತ್ರ ಕನ್ನಡ ಹೊರತಾಗಿ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರ ಕನ್ನಡಕ್ಕೆ ಡಬ್ ಆಗದೇ, ತಮಿಳು, ತೆಲುಗು, ಹಿಂದಿಯಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದನ್ನು ಕನ್ನಡಪರ ಸಂಘಟನೆಯಾದ ಕರ್ನಾಟಕ ರಣಧೀರ ಪಡೆ ವಿರೋಧಿಸಿದೆ. “ದರ್ಬಾರ್’ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕಾದರೆ ಇಲ್ಲಿ ಡಬ್ ಆಗಿಯೇ ಬರಬೇಕು, ಇಲ್ಲವಾದರೆ ಇಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದೆ.
ಒಂದು ವೇಳೆ ಬಿಡುಗಡೆಯಾದರೆ ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಹೇಳಿದೆ. ನರ್ತಕಿ ಚಿತ್ರಮಂದಿರದಲ್ಲಿ “ದರ್ಬಾರ್’ ಬಿಡುಗಡೆಯಾಗುತ್ತಿರುವುದನ್ನು ಕೂಡಾ ಸಂಘಟನೆ ವಿರೋಧಿಸಿದ್ದು, ಯಾವುದೇ ಕಾರಣಕ್ಕೂ ಕನ್ನಡ ಸೆಂಟರ್ ಆದ ನರ್ತಕಿಯಲ್ಲಿ ಪರಭಾಷಾ ಚಿತ್ರಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಪ್ರದರ್ಶನಕ್ಕೆ ಅವಕಾಶ ಕೊಟ್ಟರೆ ಚಿತ್ರಮಂದಿರಕ್ಕೆ ನುಗ್ಗಿ ಪ್ರದರ್ಶನವನ್ನು ತಡೆಯುವುದಾಗಿ ಎಚ್ಚರಿಕೆ ಕೊಟ್ಟಿದೆ.