Advertisement

ಮತ್ತೆ ಖಲಿಸ್ತಾನಿ ತೂಫಾನ್‌! ಪಂಜಾಬ್‌ನಲ್ಲಿ ತೀವ್ರಗೊಂಡ ಪ್ರತ್ಯೇಕತಾವಾದಿಗಳ ಚಟುವಟಿಕೆ

11:31 PM Feb 24, 2023 | Team Udayavani |

ಅಮೃತಸರ: ಪಂಜಾಬ್‌ನಲ್ಲಿ ಮತ್ತೆ ಖಲಿಸ್ತಾನಿ ಪ್ರತ್ಯೇಕತಾ ವಾದಿಗಳ ಕಾಟ ತೀವ್ರಗೊಂಡಿದೆ. ಅಪಹರಣ ಪ್ರಕರಣದ ಆರೋಪಿಯೊಬ್ಬನ ಬಂಧನ ಖಂಡಿಸಿ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್‌ನ ನೂರಾರು ಬೆಂಬಲಿಗರು ಗುರುವಾರ ನಡೆಸಿದ ಕೋಲಾಹಲಕ್ಕೆ ಪಂಜಾಬ್‌ ಪೊಲೀಸರು ಮತ್ತು ಆಡಳಿತವು ಮಂಡಿಯೂರುವಂತಾಗಿದೆ.

Advertisement

ಕತ್ತಿ, ಗನ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದು ನೂರಾರು ಪ್ರತಿಭಟನಾಕಾರರು ಅಜಾ°ಲಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತಿದ್ದರೆ, ಪೊಲೀಸರು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದು ಅಚ್ಚರಿಗೆ ಕಾರಣವಾಗಿದೆ. ಕೇವಲ 15 ದಿನಗಳಲ್ಲಿ ಪೊಲೀಸರ ಮೇಲೆ ನಡೆದ 2ನೇ ದಾಳಿ ಇದಾಗಿದೆ.

ಈ ದಾಂದಲೆಯ ಬೆನ್ನಲ್ಲೇ ಶುಕ್ರವಾರ ಪಂಜಾಬ್‌ನ ಅಜಾ°ಲಾ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿ ಲವ್‌ಪ್ರೀತ್‌ ತೂಫಾನ್‌ನನ್ನು ಬಿಡುಗಡೆಗೊಳಿಸಲಾಗಿದೆ. ಅಪಹರಣ ಪ್ರಕರಣ ನಡೆದಾಗ ಲವ್‌ಪ್ರೀತ್‌ ಸ್ಥಳದಲ್ಲೇ ಇರಲಿಲ್ಲ ಎಂದು ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್‌ ನೀಡಿರುವ ಸಾಕ್ಷ್ಯಾಧಾರಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು, ಅದರ ಆಧಾರದಲ್ಲಿ ಆರೋಪಿಯ ಬಿಡುಗಡೆಗೆ ಕೋರ್ಟ್‌ ಆದೇಶಿಸಿದೆ.

ಪೊಲೀಸರು, ಸಿಎಂ ಮೌನ: ಫೆ.8ರಂದು ಸಶಸ್ತ್ರಧಾರಿ ಪ್ರತಿ ಭಟನಾಕಾರರು ಸಿಖ್‌ ಕೈದಿಗಳ ಬಿಡುಗಡೆಗೆ ಒತ್ತಾಯಿಸಿ ನಡೆಸಿದ ರಂಪಾಟದಿಂದ 33 ಪೊಲೀಸರು ಗಾಯ ಗೊಂಡು, 12ಕ್ಕೂ ಹೆಚ್ಚು ಪೊಲೀಸ್‌ ವಾಹನಗಳು ಜಖಂ ಗೊಂಡಿದ್ದವು. ಎರಡೂ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಬಲಪ್ರಯೋಗ ಮಾಡದೇ, ಕೇವಲ ಜಲ ಫಿರಂಗಿಗೆ ಸೀಮಿತವಾಗಿದ್ದು ಕೂಡ ಹಲವು ಪ್ರಶ್ನೆಗಳನ್ನು ಮೂಡಿ ಸಿವೆ. ಜತೆಗೆ, ರಾಜ್ಯದಲ್ಲಿ ಇಷ್ಟೆಲ್ಲ ಗಲಾಟೆಗಳಾ ಗುತ್ತಿದ್ದರೂ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಏನು ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನಿಸುವಂತಾಗಿದೆ.

ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ನಡೆದ ಬಂಡುಕೋರರ ಚಳವಳಿಯಿಂದಾಗಿ ಪಂಜಾಬ್‌ ಹಲವು ದಶಕಗಳನ್ನು ಮತ್ತು ಒಂದಿಡೀ ತಲೆಮಾರನ್ನೇ ಬಲಿಕೊಟ್ಟಿದೆ. ಈಗ ಮತ್ತೆ ಪ್ರತ್ಯೇಕತಾವಾದದ ಕೂಗು ಹೆಚ್ಚುತ್ತಿರುವುದು ಪಂಜಾಬ್‌ನ ನಿದ್ದೆಗೆಡಿಸಿದೆ.

Advertisement

ಭಾರತೀಯ ದೂತವಾಸ
ಕಚೇರಿ ಮೇಲೆ ಖಲಿಸ್ತಾನಿ ಧ್ವಜ
ಬ್ರಿಸ್ಬೇನ್‌: ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಹಿಂದೂ ದೇಗುಲಗಳನ್ನು ಅಪವಿತ್ರಗೊಳಿಸಿದ ಖಲಿಸ್ತಾನಿ ಪ್ರತ್ಯೇಕವಾದಿಗಳು ಇದೀಗ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿ ಮೇಲೆ ದಾಳಿ ನಡೆಸಿ, ಖಲಿಸ್ತಾನಿ ಧ್ವಜವನ್ನು ಹಾರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ನೀಡಿದ ಬ್ರಿಸ್ಬೇನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ರಾಯಭಾರಿ ಅರ್ಚನ ಸಿಂಗ್‌, “ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್‌ನ‌ಲ್ಲಿರುವ ಕಚೇರಿ ಮೇಲೆ ಫೆ.21ರ ರಾತ್ರಿ ಕಿಡಿಗೇಡಿಗಳು ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದಾರೆ. ಫೆ.22ರಂದು ಕಚೇರಿಗೆ ಬಂದಾಗ ಈ ವಿಷಯ ಅರಿವಿಗೆ ಬಂತು. ಈ ಬಗ್ಗೆ ಆಸ್ಟ್ರೇಲಿಯಾ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಕಣ್ಗಾವಲು ಹೆಚ್ಚಿಸಿದ್ದು, ಭದ್ರತೆ ನೀಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಸಂಪೂರ್ಣ ನಂಬಿಕೆ ಇದೆ,’ ಎಂದು ಹೇಳಿದ್ದಾರೆ.

ತಾಕತ್ತಿದ್ದರೆ ನನ್ನನ್ನು ಬಂಧಿಸಿ
ವಾರಿಸ್‌ ಪಂಜಾಬ್‌ ದೇ ಎಂಬ ಸಂಘಟನೆಯ ಸ್ಥಾಪಕ, ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್‌ ತನ್ನನ್ನು ತಾನು “ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲಾ 2.0′ ಎಂದು ಬ್ರ್ಯಾಂಡ್‌ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಅಮೃತ್‌ಸರ ಎಸ್‌ಎಸ್‌ಪಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಶುಕ್ರವಾರ ವೈರಲ್‌ ಆಗಿದೆ. “ನಿನ್ನ ಮಕ್ಕಳೇ ಡ್ರಗ್ಸ್‌ ಸೇವಿಸುತ್ತಿದ್ದಾರೆ. ನೀವು ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನೀವು ನಮ್ಮನ್ನು ಹೆದರಿಸುತ್ತೀರಾ? ನಾನು ಪೊಲೀಸ್‌ ಠಾಣೆಗೇ ಬಂದಿದ್ದೇನೆ. ತಾಕತ್ತಿದ್ದರೆ ನನ್ನನ್ನು ಬಂಧಿಸಿ’ ಎಂದು ಸವಾಲು ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜತೆಗೆ, ನನ್ನ ವಿರುದ್ಧ ದೂರು ಕೊಟ್ಟವನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ಅವನು ಆಮ್‌ ಆದ್ಮಿ ಪಕ್ಷದ ಜತೆ ಸೇರಿಕೊಂಡು, ಸುದ್ದಿಗೋಷ್ಠಿ ನಡೆಸುತ್ತಾನೆ. ಇದನ್ನೆಲ್ಲ ನೋಡಿದರೆ, ಈ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇರುವುದು ನಿಮಗೆ ಕಾಣಿಸುತ್ತಿಲ್ಲವೇ ಎಂದೂ ಪ್ರಶ್ನಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next