Advertisement
ಇಡೀ ಪಂದ್ಯದಲ್ಲಿ ಭರ್ಜರಿ ಹೋರಾಟ ನಡೆಯಿತು. ಗೆಲುವಿಗಾಗಿ ಇತ್ತಂಡಗಳು ನಿಕಟವಾಗಿ ಸೆಣಸಿದವು. ಆದ್ದರಿಂದ ಫಲಿತಾಂಶ ಸಿಗಲು ಕಡೆಯವರೆಗೂ ಕಾಯಬೇಕಾಯಿತು. ಹರ್ಯಾಣ ಪರ ವಿಕಾಸ್ ಕಂಡೊಲ ಭರ್ಜರಿಯಾಗಿ ದಾಳಿ ನಡೆಸಿದರು. 20 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿಹೋದ ಅವರು 10 ಅಂಕಗಳಿಸಿದರು. ಇದು ತಂಡದ ಪರ ದಾಖಲಾದ ಅತ್ಯುತ್ತಮ ಪ್ರದರ್ಶನ. ಈ ಇಡೀ ಕೂಟದಲ್ಲಿ ಕಂಡೊಲ ಅತ್ಯುತ್ತಮವಾಗಿಯೇ ಆಡುತ್ತಿದ್ದಾರೆನ್ನುವುದನ್ನು ಇಲ್ಲಿ ಗಮನಿಸಬೇಕು. ರಕ್ಷಣೆಯಲ್ಲಿ ಹರ್ಯಾಣದ ಕೈಹಿಡಿದಿದ್ದು ಸುನೀಲ್. ಅವರು 6 ಯತ್ನಗಳಲ್ಲಿ 4 ಅಂಕ ಗಳಿಸಿದರು.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ದಬಾಂಗ್ ತಂಡ 60-40 ಅಂಕಗಳಿಂದ ಪುನೇರಿ ಪಲ್ಟಾನ್ ತಂಡವನ್ನು ಹೀನಾಯವಾಗಿ ಸೋಲಿಸಿತು. ಪುನೇರಿ ಮೇಲೆರಗಿ ಹೋದ ಡೆಲ್ಲಿ ದಾಳಿಗಾರರು ಸ್ವಲ್ಪವೂ ಕರುಣೆ ತೋರಿಸದೆ, ಎದುರಾಳಿಯನ್ನು ಹೊಸಕಿ ಹಾಕಿದರು. ಡೆಲ್ಲಿ ಪರ ದಾಳಿಯಲ್ಲಿ ನವೀನ್ ಕುಮಾರ್ 19 ಅಂಕಗಳಿಸಿದರೆ, ರಕ್ಷಣೆಯಲ್ಲಿ ರವೀಂದರ್ ಪಹಲ್ 6 ಅಂಕಗಳಿಸಿದರು.