Advertisement

ಪ್ರೊ ಕಬಡ್ಡಿ: ಶ್ರೀಕಾಂತ್‌ ಜಾದೂ, ಯುಪಿಗೆ ಜಯ

09:42 AM Sep 29, 2019 | Team Udayavani |

ಪಂಚಕುಲ: ಪ್ರೊ ಕಬಡ್ಡಿ 7ನೇ ಆವೃತ್ತಿ ಪಂಚಕುಲ ಚರಣದ ಮೊದಲ ದಿನದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ 37-30 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು.

Advertisement

ಇಲ್ಲಿನ ದೇವಿಲಾಲ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಅಬ್ಬರದ ಆಟಕ್ಕೆ ಇಳಿದವು. ಆದರೆ ಯುಪಿ ಯೋಧಾ ಎಲ್ಲ ವಿಭಾಗದಲ್ಲೂ ಮೆರೆದಾಡಿತು, ಆಲ್‌ರೌಂಡರ್‌ ಆಟವಾಡಿತು, ಪಂದ್ಯವನ್ನು ಅರ್ಹ ರೀತಿಯಿಂದ ಕೈವಶ ಮಾಡಿಕೊಂಡಿತು.

ಶ್ರೀಕಾಂತ್‌,ಗಿಲ್‌ ಗರ್ಜನೆ:
ಶ್ರೀಕಾಂತ್‌ ಜಾಧವ್‌ (11 ರೈಡಿಂಗ್‌ ಅಂಕ) ಹಾಗೂ ಸುರೇಂದ್ರ ಗಿಲ್‌ (7 ರೈಡಿಂಗ್‌ ಅಂಕ) ತಂಡವನ್ನು ರೈಡಿಂಗ್‌ ವಿಭಾಗದಲ್ಲಿ ಬಲಪಡಿಸಿದರು. ಶ್ರೀಕಾಂತ್‌ ಟಚ್‌ ಪಾಯಿಂಟ್‌ನಿಂದ 7 ಅಂಕ ತಂದರೆ 4 ಅಂಕವನ್ನು ಬೋನಸ್‌ ಗೆರೆಗೆ ಕಾಲಿಟ್ಟು ಪಡೆದರು. ಇವರಿಗೆ ಇನ್ನೊಂದು ಕಡೆಯಿಂದ ರೈಡಿಂಗ್‌ನಲ್ಲಿ ಉತ್ತಮ ಸಾಥ್‌ ನೀಡಿದ ಸುರೇಂದ್ರ ಗಿಲ್‌. ಅವರು 6 ಟಚ್‌ ಪಾಯಿಂಟ್‌ ತಂದರು, 1 ಅಂಕವನ್ನು ಬೋನಸ್‌ನಿಂದ ಪಡೆದರು. ಒಟ್ಟು 10 ಬಾರಿ ರೈಡ್‌ ಮಾಡಿದ ಗಿಲ್‌ ಮೂರು ಸಲ ಖಾಲಿ ಕೈಯಿಂದ ವಾಪಸ್‌ ಆಗಬೇಕಾಯಿತು.

ರಕ್ಷಣಾ ವಿಭಾಗದಲ್ಲಿ ನಿತೇಶ್‌ ಕುಮಾರ್‌ 7 ಅಂಕ ಅದ್ಭುತ ಟ್ಯಾಕಲ್‌ ನಡೆಸುವ ಮೂಲಕ ಹರ್ಯಾಣಕ್ಕೆ ಬಲವಾದ ಹೊಡೆತ ನೀಡಿದರು. ಉಳಿದಂತೆ ಸುಮಿತ್‌ (3 ಟ್ಯಾಕಲ್‌ ಅಂಕ), ಆಶು ಸಿಂಗ್‌ (1 ಟ್ಯಾಕಲ್‌ ಅಂಕ) ಸಾಧಾರಣ ಆಟ ಪ್ರದರ್ಶಿಸಿದರು.

ಕಳೆಗುಂದಿದ ವಿಕಾಸ್‌, ವಿನಯ್‌:
ಹರ್ಯಾಣ ತಂಡದ ತಾರಾ ರೈಡರ್‌ ವಿಕಾಸ್‌ ಕಂಡೋಲ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ರೈಡಿಂಗ್‌ನಿಂದ ವಿಕಾಸ್‌ ಒಟ್ಟಾರೆ 5 ಅಂಕ ಪಡೆಯಲಷ್ಟೇ ಶಕ್ತರಾದರು. 16 ಸಲ ರೈಡಿಂಗ್‌ ಮಾಡಿದ್ದ ವಿಕಾಸ್‌ 7 ಬಾರಿ ಖಾಲಿ ಕೈನಲ್ಲಿ ತಮ್ಮ ಕೋಟೆಗೆ ವಾಪಸ್‌ ಬಂದರೆ 4 ಸಲ ಎದುರಾಳಿಗೆ ಶರಣಾದರು. ಆದರೆ ಇರುವುದರಲ್ಲಿ ವಿನಯ್‌ (8 ರೈಡಿಂಗ್‌ ಅಂಕ) ಹಾಗೂ ರವಿ ಕುಮಾರ್‌ (5 ಟ್ಯಾಕಲ್‌ ಅಂಕ) ಸ್ವಲ್ಪ ಸಮಾಧಾನಕರ ಪ್ರದರ್ಶನ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next