ಹೈದರಾಬಾದ್: ಶುಕ್ರವಾರ ನಡೆದ ರೋಚಕ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 50-47 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಪಂದ್ಯದಲ್ಲಿ ಇತ್ತಂಡಗಳೂ ದೊಡ್ಡಮೊತ್ತವನ್ನೇ ಗಳಿಸಿದವು. ಹಾಗೆಯೇ ಡೆಲ್ಲಿ ಗೆಲುವಿನ ಅಂತರವೂ ಕಡಿಮೆಯಿತ್ತು. ಇವೆಲ್ಲ ನಿಕಟ, ಅಬ್ಬರದ ಹೋರಾಟವನ್ನು ತೋರಿಸಿವೆ.
ದಬಾಂಗ್ ಡೆಲ್ಲಿ ಪರ ಆಶು ಮಲಿಕ್ 10 ದಾಳಿಗಳಲ್ಲಿ 11 ಅಂಕ ಗಳಿಸಿದರು. ರಕ್ಷಣೆಯಲ್ಲೂ 1 ಅಂಕ ಪಡೆದರು. ಆಲ್ರೌಂಡರ್ ವಿಜಯ್ ಮಲಿಕ್ 14 ದಾಳಿಗಳಲ್ಲಿ 10 ಅಂಕ ಸಂಪಾದಿಸಿದರು. ಇನ್ನು ಖ್ಯಾತ ದಾಳಿಗಾರ ನವೀನ್ ಕುಮಾರ್ ಅವರು ನಿರೀಕ್ಷೆಗೆ ತಕ್ಕಂತೆ ಮಿನುಗಿದರು. 16 ದಾಳಿಗಳಲ್ಲಿ ಅವರದ್ದು 11 ಅಂಕದ ಸಾಧನೆ. ಇನ್ನು ಸಂದೀಪ್ ಧುಲ್ ರಕ್ಷಣೆಯಲ್ಲಿ ಮೆರೆದಾಡಿದರು. 7 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 4 ಅಂಕ ಸಂಪಾದಿಸಿದರು.
ಗುಜರಾತ್ ಪರ ಪ್ರತೀಕ್ ಧೈಯ್ಯ ಅವರದ್ದು ಏಕಾಂಗಿ, ಅದ್ಭುತ ಹೋರಾಟ. ಅವರ ದಾಳಿಯಲ್ಲಿ ಎಂತಹ ಅಬ್ಬರವಿತ್ತೆಂದರೆ 19 ಬಾರಿ ಎದುರಾಳಿಗಳ ಅಂಕಣಕ್ಕೆ ನುಗ್ಗಿ 20 ಅಂಕಗಳನ್ನು ದೋಚಿದರು. ಇವರಿಗೆ ಸೋನು ನೆರವು ನೀಡಿದರು. ಇದೇ ಯತ್ನವನ್ನು ಗುಜರಾತ್ ರಕ್ಷಣೆಯಲ್ಲೂ ಮಾಡಿದ್ದರೆ ಗೆಲುವು ಶತಃಸಿದ್ಧವಾಗಿತ್ತು.