ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ , ಗುಜರಾತ್ ಜೈಂಟ್ಸ್ ಗೆ ಗೆಲುವು
Team Udayavani, Oct 29, 2022, 10:56 PM IST
ಪುಣೆ: ಭರತ್ ಅವರ ಅಮೋಘ ಆಟದ ನಿರ್ವಹಣೆಯಿಂದ ಬೆಂಗಳೂರು ಬುಲ್ಸ್ ತಂಡವು ಪುಣೆಯಲ್ಲಿ ಸಾಗುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಶನಿವಾರದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವನ್ನು 47-43 ಅಂಕಗಳಿಂದ ರೋಮಾಂಚಕವಾಗಿ ಸೋಲಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 30-19 ಅಂಕಗಳಿಂದ ಮಣಿಸಿದೆ.
ಭರತ್ ಮತ್ತು ವಿಕಾಸ್ ಖಾಂಡೋಲ ಅವರ ಭರ್ಜರಿ ಆಟದಿಂದ ಬುಲ್ಸ್ ಮೇಲುಗೈ ಸಾಧಿಸಿತು. ಉತ್ತಮ ರೈಡ್ ಮಾಡಿದ ಭರತ್ 20 ಅಂಕ ಸಂಪಾದಿಸಿ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಈ ಗೆಲುವಿನಿಂದ ಬೆಂಗಳೂರು ಬುಲ್ಸ್ ತಂಡವು ಸದ್ಯ ಅಂಕಪಟ್ಟಿಯಲ್ಲಿ 29 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಪಂದ್ಯದ ಮೊದಲ ಅವಧಿ ಮುಗಿದಾಗ ಬುಲ್ಸ್ 26-14 ಅಂಕಗಳಿಂದ ಮುನ್ನಡೆಯಲ್ಲಿತ್ತು. ಆಬಳಿಕ ತಿರುಗೇಟು ನೀಡಿದ ಡೆಲ್ಲಿ ತಂಡ ಅಂಕ ಸಮಬಲಗೊಳಿಸಲು ಯಶಸ್ವಿಯಾಯಿತಲ್ಲದೇ ಆಬಳಿಕ ಸಮಬಲದ ಹೋರಾಟ ನೀಡುತ್ತ ಬಂತು. ಕೊನೆ ಹಂತದಲ್ಲಿ ಮತ್ತೆ ಬುಲ್ಸ್ ಮೇಲುಗೈ ಸಾಧಿಸಿ ಪಂದ್ಯವನ್ನು ಜಯಿಸಿತು.
ಗುಜರಾತ್‌ಗೆ ಗೆಲುವು: ರಾಕೇಶ್, ಸೌರವ್ ಗುಲಿಯ ಮತ್ತು ಪರ್ತೀಕ್ ದಹಿಯ ಅವರ ಉತ್ತಮ ಆಟದಿಂದಾಗಿ ಗುಜರಾತ್ ಗೆಲುವು ಸಾಧಿಸಿತು.