Advertisement

Pro Kabaddi: ಇಂದು ‘ಎಲಿಮಿನೇಟರ್‌’ ಹೋರಾಟ

11:28 PM Feb 25, 2024 | Team Udayavani |

ಹೈದರಾಬಾದ್‌: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 10ನೇ ಆವೃತ್ತಿಯ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಸೋಮವಾರದಿಂದ ನಾಕೌಟ್‌ ಹಂತದ ಪಂದ್ಯಗಳು ಆರಂಭವಾಗಲಿವೆ. ಹೈದರಾಬಾದ್‌ನ ಗಚ್ಚಿಬೌಲಿ ಮೈದಾನದಲ್ಲಿ ಸೋಮವಾರ ಎರಡು ಎಲಿಮಿನೇಟರ್‌ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್‌ ತಂಡಗಳು ಸೆಣಸಾಡಲಿವೆ. ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವು ಹರಿಯಾಣ ಸ್ಟೀಲರ್ ತಂಡವನ್ನು ಎದುರಿಸಲಿದೆ.

Advertisement

ಲೀಗ್‌ ಹಂತದಲ್ಲಿ ಆಡಿದ 22 ಪಂದ್ಯಗಳಲ್ಲಿ 13ರಲ್ಲಿ ಗೆಲುವು ದಾಖಲಿಸಿರುವ ದಬಾಂಗ್‌ ಡೆಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಇನ್ನು 22ರಲ್ಲಿ 11 ಪಂದ್ಯಗಳಲ್ಲಿ ಗೆದ್ದಿದ್ದ ಪಾಟ್ನಾ, 6ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತ್ತು.

ಮೊದಲ ಎಲಿಮಿನೇಟರ್‌ನಲ್ಲಿ ಡೆಲ್ಲಿ ಮತ್ತು ಪಾಟ್ನಾ ಮಧ್ಯೆ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆಯಿದ್ದು, ಇಲ್ಲಿ ಗೆಲ್ಲುವ ತಂಡ ಫೆ. 28ರಂದು ನಡೆಯುವ ಮೊದಲನೇ ಸೆಮಿಫೈನಲ್‌ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ ತಂಡದ ಸವಾಲನ್ನು ಸ್ವೀಕರಿಸಲಿದೆ.

ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಮತ್ತು ಹರಿಯಾಣ ಮುಖಾಮುಖೀಯಾಗಲಿವೆ. ಇದರಲ್ಲಿ ಗೆಲ್ಲುವ ತಂಡ ಫೆ. 28ರಂದು ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next