Advertisement

ರೈತ ಪರ ಬಜೆಟ್‌ ಮಂಡನೆ: ಸಿಎಂ ಬೊಮ್ಮಾಯಿ

09:27 PM Jan 31, 2023 | Team Udayavani |

ಧಾರವಾಡ: ರಾಜ್ಯದ 2023-24ನೇ ಸಾಲಿನ ಬಜೆಟ್‌ ರೈತ ಪರ ಆಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರ ದ ಕೃಷಿ ವಿವಿ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿವಿಯ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರೆಗೂ ರೈತರ ಪರ ಕೆಲಸ ಮಾಡುತ್ತೇನೆ. ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಲೆಂದೇ “ವಿದ್ಯಾಸಿರಿ’ ಯೋಜನೆ ಆರಂಭಿಸಿದೆ. ರಾಜ್ಯದ 51ಲಕ್ಷ ರೈತರ ಖಾತೆಗಳಿಗೆ 390 ಕೋಟಿ ರೂ.ಗಳನ್ನು “ರೈತ ಶಕ್ತಿ ಯೋಜನೆ’ಯಡಿ ಬಿಡುಗಡೆ ಮಾಡಿದ್ದೇನೆ. ಒಟ್ಟು 500 ಕೋಟಿ ರೂ.ಗಳನ್ನು ಈ ಯೋಜನೆಗೆ ಕಾಯ್ದಿರಿಸಿದ್ದೇನೆ.

“ವಿದ್ಯಾನಿಧಿ’ ಯೋಜನೆಯಡಿ 11ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ. ನೀಡಲಾಗಿದೆ. ಇನ್ನು ಹೊಸದಾಗಿ ಯಾರು ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆಯೋ ಅವರಿಗೂ ಈ ಯೋಜನೆ ಅನ್ವಯವಾಗಲಿದೆ. ಈ ಬಾರಿಯ ಬಜೆಟ್‌ನಲ್ಲೂ ರೈತಪರ ಯೋಜನೆಗಳಿಗೆ ಒತ್ತು ನೀಡುವುದಾಗಿ ರೈತ ಸಮೂಹಕ್ಕೆ ಭರವಸೆ ನೀಡಿದರು.

ಹಂಡೆಹಾಲು ಕುಡಿದ ಖುಷಿ: ರೈತ ಕೂಲಿ ಕಾರ್ಮಿಕರ ಪರವಾಗಿ ಮಾತನಾಡುತ್ತಿದ್ದ ಸಂದರ್ಭ ತೀವ್ರ ಭಾವೋದ್ವೇಗಕ್ಕೊಳಗಾದ ಸಿಎಂ, ಇಷ್ಟು ವರ್ಷಗಳವರೆಗೆ ಯಾವುದೇ ಸರ್ಕಾರ ತಿರುಗಿ ನೋಡದೇ ಉಳಿದುಕೊಂಡಿದ್ದ ರೈತ ಕೂಲಿ ಕಾರ್ಮಿಕರ ಮಕ್ಕಳಿಗೂ “ವಿದ್ಯಾನಿಧಿ’ ಯೋಜನೆ ವಿಸ್ತರಿಸಿದ್ದೇನೆ. 47 ಸಾವಿರ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ ಇದರ ಪ್ರಯೋ ಜನ ದೊರೆ ತಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ. ಬದಲಾವಣೆ ತಳಮಟ್ಟದಲ್ಲಿ ಆಗಬೇಕು. ಸಮಾಜದ ಕಟ್ಟಕಡೆ ವ್ಯಕ್ತಿ ಬಗ್ಗೆ ಯೋಚಿಸಬೇಕು. ಇದು ನನಗೆ ಹಂಡೆ ಹಾಲು ಕುಡಿದಷ್ಟು ಖುಷಿ ಕೊಟ್ಟಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಕಳೆದ ವರ್ಷ ಇದು 23 ಲಕ್ಷ ರೈತರಿಗೆ ಮಾತ್ರ ಇತ್ತು. ಕೇವಲ ಒಂದೇ ವರ್ಷದಲ್ಲಿ 10 ಲಕ್ಷ ರೈತರಿಗೆ ಇದನ್ನು ಹೆಚ್ಚಿಸಿದ್ದೇನೆ. ಕೃಷಿ ಸಾಲ ನೀತಿ ಬದಲಾಗಬೇಕು. ಅದನ್ನು ಸರಿ ಮಾಡುತ್ತೇನೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಡಲು ಯೋಜಿಸಿದ್ದೇನೆ. ಅದಕ್ಕಾಗಿ ಬೀಜ-ಕೃಷಿ ಉತ್ಪನ್ನ ಸಂರಕ್ಷಿಸಿಡುವ ಚಿಕ್ಕ ಗೋದಾಮುಗಳ ನಿರ್ಮಾಣಕ್ಕೆ ಒತ್ತು ಕೊಡುತ್ತೇವೆ ಎಂದು ಬೊಮ್ಮಾಯಿ ವಿವರಿಸಿದರು.

Advertisement

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ರೈತ ಸಮುದಾಯಕ್ಕೆ ಇಂದು ಖುಷಿಯ ದಿನ. ವಿವಿಧ ಯೋಜನೆಗಳ ಮೂಲಕ ನೇರವಾಗಿ ರೈತರು, ರೈತರ ಮಕ್ಕಳಿಗೆ ಸರ್ಕಾರ ಅಗತ್ಯ ನೆರವು ನೀಡಿದೆ. 11 ಕೋಟಿ ರೂ. ವೆಚ್ಚದಲ್ಲಿ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನಗಳನ್ನು ನೀಡಲಾಗಿದೆ. 4.55 ಲಕ್ಷ ರೈತರ ಮಕ್ಕಳಿಗೆ 241 ಕೋಟಿ ರೂ. “ವಿದ್ಯಾನಿಧಿ’ ಬಿಡುಗಡೆ ಮಾಡಲಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಕಳಪೆ ಬೀಜ ಪೂರೈಸಿದ್ದ 343 ಪ್ರಕರಣಗಳನ್ನು ದಾಖಲು ಮಾಡಿ 29 ಕೋಟಿ ರೂ. ಮೌಲ್ಯದ ಕಳಪೆ ಬೀಜ-ಗೊಬ್ಬರ ವಶಕ್ಕೆ ಪಡೆಯಲಾಗಿದೆ. 248 ಪರವಾನಗಿ ರದ್ದುಪಡಿಸಲಾಗಿದ್ದು, ನ್ಯಾಯಾಲಯ ಮೂಲಕ ಈ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 19.40 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಸಾಲಮನ್ನಾ ಕೂಗು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಲು ಬರುತ್ತಿದ್ದಂತೆ ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡ್ರ ಸೇರಿ ಅನೇಕರು, ರೈತರ ಬೆಳೆಹಾನಿ ಪರಿಹಾರ, ಬೆಳೆವಿಮೆ ಇನ್ನೂ ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಕೂಡಲೇ ಅದನ್ನು ಜಮಾ ಮಾಡಬೇಕೆಂದು ಆಗ್ರಹಿಸಿದರು. ಅಷ್ಟೇಯಲ್ಲ, ರೈತರು ಸಂಕಷ್ಟದಲ್ಲಿದ್ದು, ಕೂಡಲೇ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಕೊನೆಗೆ ಮುಖ್ಯಮಂತ್ರಿಗಳು ಮೈಕ್‌ ಹಿಡಿದು, ರೈತ ಬಾಂಧವರ ಸಮಸ್ಯೆಗಳೇನೇ ಇದ್ದರೂ ವೇದಿಕೆ ಪಕ್ಕದಲ್ಲಿ ನಿಂತುಕೊಳ್ಳಿ, ಕಾರ್ಯಕ್ರಮ ಮುಗಿಸಿ ಹೋಗುವಾಗ ಖಂಡಿತ ಸ್ಪಂದಿಸುತ್ತೇನೆಂದು ಶಾಂತಗೊಳಿಸಿದರು. ಕಾರ್ಯಕ್ರಮ ಮುಗಿದ ಮೇಲೆ ರೈತರಿಂದ ಮನವಿ ಸ್ವೀಕರಿಸಿ, ಕ್ರಮ ವಹಿಸುವ ಭರವಸೆ ನೀಡಿದರು.

ರೈತರಿಗೆ ಊಟದ ವ್ಯವಸ್ಥೆ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ರೈತರಿಗೆ ಕೃಷಿ ವಿವಿಯ ಮಳಿಗೆ ಸಾಲಿನ ಗೋದಾಮಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಗ್ರಾಮಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿದ್ದರಿಂದ ರೈತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಪಡೆದವರು ಕೃಷಿಗೆ ಅಪಾರ ಕೊಡುಗೆ ನೀಡಿದವರು. ಹೀಗಾಗಿ ಅಂತಹ ರೈತರು ಮತ್ತು ರೈತ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರವೇ ಅಗತ್ಯ ಹಣಕಾಸು ನೆರವು ಭರಿಸಲಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು.

ಕೃಷಿ ಪ್ರಶಸ್ತಿ ಪುರಸ್ಕೃತರ ಮಕ್ಕಳಿಗೆ ನೆರವು
ಧಾರವಾಡ: ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ಕೃಷಿ ಪ್ರಶಸ್ತಿ ಪುರಸ್ಕೃತರ ಮಕ್ಕಳ ಶಿಕ್ಷಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸ ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಕೃಷಿ ಇಲಾಖೆ ಹಾಗೂ ಕೃಷಿ ವಿ.ವಿ. ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿ ಪುರಸ್ಕೃತರು ಕೃಷಿಗೆ ಅಪಾರ ಕೊಡುಗೆ ನೀಡಿದವರು. ಹೀಗಾಗಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರವೇ ಅಗತ್ಯ ಹಣಕಾಸು ನೆರವು ಒದಗಿಸಲಿದೆ ಎಂದರು.

ಜತೆಗೆ ಈ ಬಾರಿ ರೈತರ ಪರವಾಗಿ ವಿಶೇಷವಾದ ಬಜೆಟ್‌ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next