Advertisement

Chikkodi; ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

05:30 PM Jun 24, 2024 | Team Udayavani |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡಿರುವ ಕು. ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ನವದೆಹಲಿಯ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಭರ್ತೃಹರಿ ಮಹತಾಬ್‌ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಿಯಾಂಕಾ ಜಾರಕಿಹೊಳಿ ಅವರು ಸಂವಿಧಾನ ಹೆಸರಿನಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.

ಪ್ರಮಾಣ ವಚನ ಸ್ವೀಕಾರ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸಿದ ಅವರು, 18ನೇ ಲೋಕಸಭೆಯ ಸದಸ್ಯೆಯಾಗಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನತೆಯ ಪ್ರತಿನಿಧಿಯಾಗಿ ಗೌರವಾನ್ವಿತ ಹಂಗಾಮಿ ಸಭಾಧ್ಯಕ್ಷರಾದ ಭರ್ತೃಹರಿ ಮಹತಾಬ್‌ ಅವರ ಸಮಕ್ಷಮದಲ್ಲಿ ನನ್ನ ಮಾತೃಭಾಷೆಯಾದ ಕನ್ನಡಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈ ಧನ್ಯತೆಯ ಕ್ಷಣಕ್ಕೆ ಕಾರಣಿಕರ್ತರಾದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲಾ ಸರ್ವರಿಗೂ ಹಾಗೂ ಸಮಸ್ತ ಕನ್ನಡಿಗರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ತಿಳಿಸಿದ್ದಾರೆ.

ಅಭಿವೃದ್ಧಿ ಮೂಲಮಂತ್ರ ಎಂದ ಸಂಸದೆ ಪ್ರಿಯಾಂಕಾ: ಅತ್ಯಂತ ಕಿರಿಯ ವಯಸ್ಸಿನಲ್ಲಿ ಜನಸೇವೆ ಮಾಡುವ ಅವಕಾಶ ನನಗೆ ದೊರಕಿದೆ. ರಾಜಕೀಯ ಅನುಭವ ಇರುವ ಸಂಸದರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರಕಿರುವುದು ನನಗೆ ಹೆಮ್ಮೆ ತಂದಿದೆ. ನನಗೆ ಅವಕಾಶ ಕಲ್ಪಿಸಿದ ಎಐಸಿಸಿ ಅಧ್ಯಕ್ಷರು ಮತ್ತು ಪಕ್ಷದ ಹಿರಿಯರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನನ್ನ ತಂದೆಯವರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ಶ್ರಮಿಸಿ ಲೋಕಸಭಾ ಚುನಾವಣೆಯಲ್ಲಿ ನನಗೆ ಪ್ರಚಂಡ ಬಹುಮತ ಬರುವಂತೆ ಮಾಡಿದ ಎಲ್ಲಾ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಲ್ಲ ಮತಕ್ಷೇತ್ರಗಳಿಗೆ ಭೇಟಿ ನೀಡಿ ಇಲ್ಲಿನ ಪ್ರಮುಖ ಬೇಡಿಕೆಗಳನ್ನ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next