ರಾಯ್‌ಬರೇಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ಚುನಾವಣಾ ಭಾಷಣದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. “ಉತ್ತರ ಪ್ರದೇಶಕ್ಕೆ ಯಾವುದೇ ದತ್ತುಪುತ್ರರ ಅಗತ್ಯವಿಲ್ಲ. ಈ ರಾಜ್ಯಕ್ಕೆ ಹೊರಗಿನವರನ್ನು ದತ್ತು ತೆಗೆದುಕೊಳ್ಳುವ ದುಃಸ್ಥಿತಿಯೂ ಬಂದಿಲ್ಲ’ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ಮೋದಿ, “ನಾನು ವಾರಾಣಸಿಯ ದತ್ತುಪುತ್ರ’ ಎಂದು ಹೇಳಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, “ಮೋದಿಯವರೇ, ಉತ್ತರ ಪ್ರದೇಶ ವನ್ನು ಆಳಲು ಸ್ವಂತ ಮಕ್ಕಳೇ ಸಾಕು. ಇಲ್ಲಿ ಯಾರೂ ಯುವಕರೇ ಇಲ್ಲ ಅಂತಂದುಕೊಂಡಿದ್ದೀರಾ? ರಾಹುಲ್ ಮತ್ತು ಅಖೀಲೇಶ್ ಯಾದವ್ ಈಗಾಗಲೇ ಇಲ್ಲಿನವರ ಹೃದಯದಲ್ಲಿ ನೆಲೆಯೂರಿದ್ದಾರೆ. ಇಲ್ಲಿನ ಪ್ರತಿ ಯುವಕರಿಗೂ ರಾಜ್ಯವನ್ನು ಪ್ರಗತಿ ದಾರಿಗೆ ಕೊಂಡೊಯ್ಯುವ ಕಸುವಿದೆ’ ಎಂದು ಹೇಳಿದ್ದಾರೆ.
ರಾಜೀವ್ ಮಾದರಿ: “ಮೋದಿ ಕ್ಷೇತ್ರ ವಾರಾಣಸಿಯ ಜನತೆಯನ್ನು ಕೇಳಿ, ಅಲ್ಲಿ ಹುಟ್ಟಿಕೊಂಡಿದ್ದು ಬರೀ ಪೊಳ್ಳು ಭರವಸೆಗಳೇ. ಪ್ರಧಾನಿಯಾಗಿ ನೀವು ಮೂರು ವರ್ಷದಿಂದ ಅಲ್ಲೇನು ಪ್ರಗತಿ ಮಾಡಿದ್ದೀರಿ? ಅದೇ ಅಮೇಠಿ ಜನರನ್ನು ಕೇಳಿ, ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಕ್ಷೇತ್ರವನ್ನು ಹೇಗೆಲ್ಲ ಪ್ರಗತಿಗೆ ಕೊಂಡೊಯ್ದಿದ್ದರು ಎಂದು ಅವರೇ ಹೇಳುತ್ತಾರೆ’ ಎಂದು ತಂದೆಯನ್ನು ಸ್ಮರಿಸುವ ಮೂಲಕ ಮೋದಿ ಅವರನ್ನು ವ್ಯಂಗ್ಯವಾಡಿದರು.
ಶಾರುಖ್‌ನಂತೆ ಭರವಸೆ ಕೊಟ್ಟ ಪಿಎಂ ಮೋದಿ: “ನರೇಂದ್ರ ಮೋದಿ ಆರಂಭದಲ್ಲಿ ಡಿಡಿಎಲ್‌ಜೆ ಸಿನಿಮಾದ ಶಾರುಖ್‌ಖಾನ್‌ನಂತೆ ಅಚ್ಛೇ ದಿನ್ ಭರವಸೆ ಕೊಟ್ಟರು. ಆದರೆ, ಆ ಭರವಸೆ ಯನ್ನು ಈಡೇರಿಸದೆ ಶೋಲೆಯ ಗಬ್ಬರ್‌ಸಿಂಗ್‌ನಂತೆ ಕಾಣಿಸುತ್ತಿದ್ದಾರೆ’! ಮೋದಿ ಅವರನ್ನು ಸಿನಿಮೀಯ ಮಾತಿ ನಲ್ಲಿ ಟೀಕಿಸಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ.
ದತ್ತುಪುತ್ರ’ಕ್ಕೆ ತಿರುಗೇಟು: “ಮೋದಿ ಎಲ್ಲಿಗೆ ಹೋಗಲಿ, ಆ ಪ್ರದೇಶಕ್ಕೆ ಹೋಲಿಸಿಕೊಂಡು ಮಾತಾಡುತ್ತಾರೆ. ವಾರಾಣಸಿಯ ದತ್ತುಪುತ್ರ ಎಂದು ಕರೆದುಕೊಂಡಿದ್ದಾರೆ. ಸಂಬಂಧ ಕಲ್ಪಿಸಿಕೊಳ್ಳುವುದರಿಂದ ಯಾವುದೇ ಅಭಿವೃದ್ಧಿ ಆಗದು’ ಎಂದು ಮೋದಿ ಅವರ “ದತ್ತುಪುತ್ರ’ ಹೇಳಿಕೆಗೆ ರಾಹುಲ್ ತಿರುಗೇಟು ನೀಡಿದ್ದಾರೆ.