ವಾಡಿ: ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಚಿತ್ತಾಪುರ ಶಾಸಕ, ರಾಜ್ಯದ ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ ಹೆಗಡೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿರುವುದು ಅವರಿಗೆ ಸಂಬಂಧಿಸಿದ ಖಾತೆ ಮೂಲಕ ಯುವ ಜನರಿಗೆ ಒಳಿತು ಮಾಡುವುದಕ್ಕಾಗಿ ಹೊರತು ಕೀಳುಮಟ್ಟದ ರಾಜಕಾರಣ ಮಾಡಲು ಅಲ್ಲ. ಕೋಮು ದ್ವೇಷ ಹುಟ್ಟು ಹಾಕುವ ಹಾಗೂ ಸಂವಿಧಾನವನ್ನು ಬೇರೆಯೇ ಬರೆಯುವ ಆಕಾಂಕ್ಷೆ ಇದ್ದಲ್ಲಿ ಅನಂತಕುಮಾರ
ಹೆಗಡೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾಷಣ ಮಾಡಿಕೊಂಡೇ ದೇಶ ಸುತ್ತುವುದು ಸರಿ ಎನಿಸುತ್ತದೆ ಎಂದು ಗುಡುಗಿದ್ದಾರೆ.
ಹೆಗಡೆ ಅವರು ಕೇಂದ್ರ ಸಚಿವರಾದ ದಿನದಿಂದಲೂ ತಮ್ಮ ಹೊಣೆಗಾರಿಕೆ ಹಾಗೂ ಜವಾಬ್ದಾರಿ ಅರಿಯದೆ ಆರೋಗ್ಯಕರವಾಗಿರುವ ಸಮಾಜವನ್ನು ಕಲುಷಿತಗೊಳಿಸುವ ಕ್ರಿಯೆಯಲ್ಲೇ ನಿರಂತರವಾಗಿ ತೊಡಗಿದ್ದಾರೆ. ಇಡೀ ದೇಶದ ಯುವಜನರ ಯೋಗಕ್ಷೇಮ ನೋಡಿಕೊಳ್ಳಬೇಕಾದ ಜವಾಬ್ದಾರಿಯುತ ಸಚಿವರಾದ ಅವರು, ಮಂತ್ರಿಯಾದ ನಂತರ ಒಂದು ದಿನವೂ ತಮ್ಮ ಖಾತೆಯಿಂದ ಯುವಜನರಿಗೆ ನೀಡಬಹುದಾದ ಸಹಾಯ, ಸೌಲಭ್ಯಗಳ ಬಗ್ಗೆ ಸೊಲ್ಲೆತ್ತದೆ ಹೋದ ಕಡೆಯಲೆಲ್ಲ ಕೋಮು ಭಾವನೆ ಕೆರಳಿಸುವ, ಸಂವಿಧಾನವನ್ನೇ ಬುಡಮೇಲು ಮಾಡಿ ಬಿಡುತ್ತೇನೆ ಎಂದು ಅಹಮ್ಮಿಕೆ ಹೇಳಿಕೆ ನೀಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದ್ದಾರೆ.
ದೇಶದಲ್ಲಿ ಶೇ.60ರಷ್ಟಿರುವ ಯುವಜನಾಂಗ ಇವರಿಂದ ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮುಂತಾದ ಭವಿಷ್ಯದ ಆಶಾಕಿರಣದ ಬೆಳಕು ಕಾಣಲು ಕಾತುರರಾಗಿದ್ದಾರೆಯೇ ಹೊರತು ಕೋಮು ವೈಷ್ಯಮ್ಯ, ಸಂವಿಧಾನ ತಿದ್ದುಪಡಿ, ಸಾಹಿತಿಗಳ ನಿಂದನೆಯಂತಹ ಕೀಳು ಅಭಿರುಚಿಯ ಹರಿಕಥೆ ಕೇಳಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಅನಂತಕುಮಾರ ಹೆಗಡೆ ಅರಿತರೆ ಕ್ಷೇಮ. ಯುವಜನರಿಗೆ ಬೇಕಿರುವುದು ಉದ್ಯೋಗ. ತಮ್ಮ ಖಾತೆ ಮೂಲಕ ಉದ್ಯೋಗ ಸೃಷ್ಟಿಸುವಂತಹ ವಿಫುಲ ಅವಕಾಶಗಳು ಅನಂತಕುಮಾರ ಹೆಗಡೆ ಅವರ ಮುಂದಿರುವಾಗ ತಮ್ಮ ಹೊಣೆಗಾರಿಕೆ ಮರೆತು ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಆತಂಕ ಸೃಷ್ಟಿಸುತ್ತಿರುವುದನ್ನು ನಮ್ಮ ಯುವಜನಾಂಗ ಗಂಭೀರವಾಗಿ ಪರಿಗಣಿಸಬೇಕಿದೆ. ತಮ್ಮ ಖಾತೆಗೆ ಸಂಬಂಧಿಸಿದ ಯಾವ ವಿಷಯವೂ ಅವರಿಗೆ ತಿಳಿದಿದೆಯೋ ಇಲ್ಲವೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ತಮ್ಮ ಖಾತೆ ಬಗ್ಗೆ ಅವರಿಗೆ ಏನಾದರೂ ಜ್ಞಾನವಿದ್ದಲ್ಲಿ ಅನಾವಶ್ಯಕವಾದ, ಕ್ಷುಲ್ಲಕ ವಿಷಯ ಮಾತನಾಡುವುದನ್ನು ಬಿಟ್ಟು ಯುವಜನರ ಆಶೋತ್ತರ ಬಿಂಬಿಸುವ ಕಾರ್ಯಕ್ರಮ ಹಾಕಿಕೊಳ್ಳಲಿ. ತಮ್ಮ ಕೌಶಲ್ಯ ಅಭಿವೃದ್ಧಿ ಸಚಿವಾಲಯ ಮೂಲಕ ಕರ್ನಾಟಕಕ್ಕೆ ಏನು ಕೊಡುಗೆ ನೀಡಬಲ್ಲರು ಎಂಬುದನ್ನು ಹೋದ ಕಡೆಯಲ್ಲೆಲ್ಲ ಹೇಳಲಿ ಎಂದು ಹೇಳಿದ್ದಾರೆ.