Advertisement

ಬರೇಲಿಯಿಂದ ಕಣಕ್ಕೆ?

12:30 AM Jan 24, 2019 | Team Udayavani |

ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿಯವರನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುತ್ತಿದ್ದಂತೆಯೇ, ಅವರು ಯಾವ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಪ್ರಶ್ನಿಸಲಾಯಿತಾದರೂ ಸದ್ಯಕ್ಕೆ ಆ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಸೋನಿಯಾ ಗಾಂಧಿಯ ಕ್ಷೇತ್ರ ರಾಯ್‌ ಬರೇಲಿಯಿಂದ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆಯಿದೆ. ಸೋನಿಯಾ ಅನಾರೋಗ್ಯದ ಕಾರಣದಿಂದ ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದು, ಅಲ್ಲಿಂದ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಬಿಜೆಪಿಗೆ, ಎಸ್‌ಪಿ-ಬಿಎಸ್ಪಿಗೆ ಸವಾಲು: 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ, ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರಲು ಎಷ್ಟರ ಮಟ್ಟಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ತಡವಾಗಿಯಾದರೂ ಕಾಂಗ್ರೆಸ್‌ ಅರ್ಥ ಮಾಡಿಕೊಂಡಿದೆ. ಹಾಗಾಗಿಯೇ, ಅಲ್ಲಿ ಬಿಎಸ್‌ಪಿ ಅಥವಾ ಎಸ್‌ಪಿ ಪಕ್ಷಗಳೊಡನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಬಿಎಸ್‌ಪಿ-ಎಸ್‌ಪಿ ಪರಸ್ಪರ ಕೈ ಜೋಡಿಸಿ, ಕಾಂಗ್ರೆಸ್ಸನ್ನು ದೂರವಿಟ್ಟವು. ಇದರಿಂದ ಮುಖಭಂಗಕ್ಕೀಡಾಗಿದ್ದ ಕಾಂಗ್ರೆಸ್‌, ಉತ್ತರ ಪ್ರದೇಶದಲ್ಲಿ ತನ್ನ ಕೈಲಾದ ಮಟ್ಟಿಗೆ ಪೈಪೋಟಿ ನೀಡಲು ನಿರ್ಧರಿಸಿದೆ. 

ರಾಯ್‌ ಬರೇಲಿ (ಸೋನಿಯಾ ಗಾಂಧಿ ಕ್ಷೇತ್ರ), ಅಮೇಥಿ ಕ್ಷೇತ್ರದ (ರಾಹುಲ್‌ ಗಾಂಧಿ ಕ್ಷೇತ್ರ) ವ್ಯಾಪ್ತಿಯಲ್ಲಿ ಹೇಗಿದ್ದರೂ ತಮ್ಮ ಪ್ರಭಾವ ಇದ್ದೇ ಇದೆ. ಅದನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವುದು ಪ್ರಿಯಾಂಕಾರನ್ನು ಚುನಾವಣಾ ಅಖಾಡಕ್ಕಿಳಿಸಿದ್ದರ ಉದ್ದೇಶ ಎನ್ನಲಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥರಿಗೂ ಇದು ಬಹುದೊಡ್ಡ ಸವಾಲಾಗಿದೆ. ಪ್ರಿಯಾಂಕಾ ನಿರ್ಧಾರವು ಉತ್ತರ ಪ್ರದೇಶದ ರಾಜಕೀಯ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ. 

ಬಿಜೆಪಿಗೆ ಹೊಸ ಅಸ್ತ್ರ
ಕಾಂಗ್ರೆಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬುದು ಬಿಜೆಪಿಯ ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಅಸ್ತ್ರ. ಇದಕ್ಕೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ. ಕಳೆದ ಲೋಕಸಭೆ ಹಾಗೂ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಹಾಗೂ ರಾಬರ್ಟ್‌ ವಾದ್ರಾ ವಿರುದ್ಧ ತೀವ್ರ ಟೀಕೆಯನ್ನು ಬಿಜೆಪಿ ಮಾಡಿತ್ತು. ಒಂದು ಹಂತದಲ್ಲಿ ಪ್ರಿಯಾಂಕ ಕಣ್ಣೀರಿಟ್ಟು, ನಮ್ಮ ಕುಟುಂಬವನ್ನು ಪ್ರಚಾರದಲ್ಲಿ ಎಳೆಯಬೇಡಿ ಎಂದು ಬೇಡಿಕೊಂಡಿದ್ದರು. ಈಗ ಮತ್ತೆ ಇದೇ ಪರಿಸ್ಥಿತಿ ನಿರ್ಮಾಣವಾಗುವುದಂತೂ ನಿಜ. ಅಷ್ಟೇ ಅಲ್ಲ, ಈ ಅಸ್ತ್ರವನ್ನು ಬಿಜೆಪಿ ಇನ್ನಷ್ಟು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ರಾಬರ್ಟ್‌ ಅಕ್ರಮದ್ದೇ ಚಿಂತೆ!
ಪ್ರಿಯಂಕಾ ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಂತೆಯೇ ಅವರ ಪತಿ ರಾಬರ್ಟ್‌ ವಾದ್ರಾ ವಿರುದ್ಧದ ಭೂ ಅಕ್ರಮ ವಹಿವಾಟು ಆರೋಪಗಳೂ ಮತ್ತಷ್ಟು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಡಿಎಲ್‌ಎಫ್ ಹಾಗೂ ಸ್ಕೈಲೈಟ್‌ ಹಾಸ್ಪಿಟಾಲಿಟಿ ಕಂಪೆನಿಗಳಲ್ಲಿ ರಾಬರ್ಟ್‌ ಅಕ್ರಮ ವಹಿವಾಟುಗಳ ಬಗ್ಗೆ ತನಿಖೆ ನಡೆಯುತ್ತಿದ್ದು, 2014ರ ಲೋಕಸಭೆ ಚುನಾವಣೆ¿ ಹಾಗೂ ನಂತರದ ವಿಧಾನಸಭೆ ಚುನಾವಣೆಯಲ್ಲಿ ಈ ವಿಚಾರಗಳು ಭಾರಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈ ಬಾರಿಯೂ ಇದು ಇನ್ನಷ್ಟು ಚರ್ಚೆಗೀಡಾಗುವ ಸಾಧ್ಯತೆಯಿದೆ.

Advertisement

ಇಂದಿರಾ ಗಾಂಧಿಗೆ ಪ್ರಿಯಾಂಕಾ ಹೋಲಿಕೆ
ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಹುಲ್‌ ಬದಲಿಗೆ ಪ್ರಿಯಾಂಕಾರನ್ನೇ ನಿಯೋಜಿಸಬೇಕು ಎಂಬ ಬೇಡಿಕೆ ಹಿಂದೊಮ್ಮೆ ವ್ಯಾಪಕವಾಗಿ ಕೇಳಿಬಂದಿತ್ತು. ರಾಹುಲ್‌ಗಿಂತ ಪ್ರಿಯಾಂಕಾ ಹೆಚ್ಚು ಸಮರ್ಥ ಎಂಬುದು ಕಾಂಗ್ರೆಸ್‌ ಮುಖಂಡರ ಮಟ್ಟದಲ್ಲೇ ಕೇಳಿಬಂದಿತ್ತು. ಆದರೆ ಆಗ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಈ ಬಗ್ಗೆ ಮನಸು ಮಾಡಲಿಲ್ಲ. ಬದಲಿಗೆ ಪ್ರಿಯಾಂಕಾ ಪರ ಧ್ವನಿಯನ್ನು ಹಂತ ಹಂತವಾಗಿ ಉಡುಗಿಸಿ, ರಾಹುಲ್‌ರನ್ನು ಅಧ್ಯಕ್ಷ ಹುದ್ದೆಗೆ ಏರಿಸಲಾಯಿತು.

ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂಬುದಕ್ಕೆ ಮೂಲ ಉದ್ದೇಶವೇ ಇಂದಿರಾ ಗಾಂಧಿಯಂತೆ ಕಾಣುವ ಅವರಿಗೆ ಇಂದಿರಾ ವರ್ಚಸ್ಸೂ ಇದೆ ಎಂಬುದಾಗಿದೆ. ಇಂದಿರಾ ಗಾಂಧಿಯನ್ನೇ ನೆನಪಿಸಿಕೊಂಡು ಪ್ರಿಯಾಂಕಾರಿಗೆ ಜನರು ಮತ ಹಾಕುತ್ತಾರೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ವಲಯದಲ್ಲಿ ಇಂದಿಗೂ ಕೇಳಿಬರುವ ಮಾತು. ಇಂದಿರಾರಂತೆ ಪ್ರಿಯಾಂಕಾ ಕೂಡ ಜನರೊಂದಿಗೆ ಸರಳವಾಗಿ ಬೆರೆಯಬಲ್ಲರು. ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮುಕ್ತವಾಗಿ ಮಾತನಾಡಬಲ್ಲರು. ಹೀಗಾಗಿ ರಾಹುಲ್‌ಗಿಂತ ಪ್ರಿಯಾಂಕಾ ಬಗ್ಗೆ ಕೈ ಕಾರ್ಯಕರ್ತರಲ್ಲಿ ಹೆಚ್ಚು ನಿರೀಕ್ಷೆಯಿದೆ. ಈ ಘೋಷಣೆಯಿಂದಾಗಿ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಖುಷಿ ಮನೆ ಮಾಡಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಂತೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇದು ಹೊಸ ಹುಮ್ಮಸ್ಸು ನೀಡಿದೆ. 

ಎರಡು ಕ್ಷೇತ್ರಗಳಿಂದ ರಾಹುಲ್‌ ಸ್ಪರ್ಧೆ?
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಾರಿಯ ಲೋಕಸಭೆ ಚುನಾವಣೆಗೆ ಅಮೇ ಥಿಯ ಜೊತೆಗೆ ಮಹಾರಾಷ್ಟ್ರದ ನಾಂದೇಡ್‌ ಅಥವಾ ಮಧ್ಯಪ್ರದೇಶದ ಛಿಂದ್ವಾರಾದಿಂದ ಸ್ಪರ್ಧಿಸುತ್ತಾರೆ ಎನ್ನ ಲಾ ಗಿದೆ. ಇತ್ತೀಚೆಗೆ ಅಮೇ ಥಿಯಲ್ಲಿ ಬಿಜೆಪಿಯ ಸ್ಮತಿ ಇರಾನಿ ತೀವ್ರ ಸಕ್ರಿಯವಾಗಿ ಕ್ಷೇತ್ರ ದಲ್ಲಿ ಸಂಚರಿಸು ತ್ತಿದ್ದು, ರಾಹುಲ್‌ ಸುರಕ್ಷಿತ ಕ್ಷೇತ್ರವೊಂ ದನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಯಿದೆ. 2014ರ ಚುನಾವಣೆಯಲ್ಲಿ ರಾಹುಲ್‌ ವಿರುದ್ಧ ಸ್ಮತಿ ಸೋಲುಂಡಿದ್ದರು. 
ಪ್ರಸ್ತುತ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್‌ ಚವಾಣ್‌ ನಾಂದೇಡ್‌ ಪ್ರತಿ ನಿಧಿ ಸು ತ್ತಿದ್ದಾರೆ. ಇನ್ನೊಂದೆಡೆ ಛಿಂದ್ವಾರಾ ದಲ್ಲಿ ಮ.ಪ್ರ ಸಿಎಂ ಕಮಲ್‌ನಾಥ್‌ ಸಂಸದರಾಗಿದ್ದಾರೆ. ಮುಖ್ಯ ಮಂತ್ರಿ ಹುದ್ದೆಗೇರಿದ್ದರಿಂದಾಗಿ ಅವರು ಸಂಸದ ಸ್ಥಾನವನ್ನು ತೊರೆಯುವ ಅನಿವಾರ್ಯವಿದೆ.

ಪ್ರಿಯಾಂಕಾ ಮನವೊಲಿಸಿದ್ದು ರಾಹುಲ್‌ ಗಾಂಧಿ?
ಪ್ರಿಯಾಂಕಾರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವ ಬಗ್ಗೆ ನಿರ್ಧಾರವಾಗಿದ್ದು ಕಳೆದ ವಾರ ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ದುಬೈಗೆ ತೆರಳಿದ್ದ ರಾಹುಲ್‌ ಅಲ್ಲಿಂದ ನೇರವಾಗಿ ಅಮೆರಿಕಕ್ಕೆ ರಾಹುಲ್‌ ಹೋಗಿದ್ದರು. ಅಲ್ಲಿಯೇ ಪ್ರಿಯಾಂಕಾ ರನ್ನು ರಾಹುಲ್‌ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘೋಷಣೆ ಅಧಿಕೃತವಷ್ಟೇ!
ಪ್ರಿಯಾಂಕಾ ಗಾಂಧಿ ಕಳೆದ ಹಲವು ವರ್ಷಗಳಿಂದಲೂ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಿಲ್ಲದಿದ್ದರೂ, ಉತ್ತರ ಪ್ರದೇಶದ ವಿಚಾರಕ್ಕೆ ಬಂದರೆ ಟ್ರಬಲ್‌ಶೂಟರ್‌ ರೀತಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದರಿಂದ ಆರಂಭಿಸಿ ಪಕ್ಷದ ಪ್ರತಿ ಚಟುವಟಿಕೆಯಲ್ಲೂ ಪ್ರಿಯಾಂಕಾ ಸಕ್ರಿಯವಾಗಿರುತ್ತಾರೆ. 1999ರಲ್ಲಿ ಅಮೇಥಿಯಿಂದ ಸೋನಿಯಾ ಗಾಂಧಿ ಪರ ಪ್ರಚಾರ ಮಾಡುವುದರೊಂದಿಗೆ ಪ್ರಿಯಾಂಕಾ ಮೊದಲ ಬಾರಿಗೆ ರಾಜಕೀಯವಾಗಿ ಕಾಣಿಸಿಕೊಂಡಿದ್ದರು. ಆಗಿನಿಂದಲೇ ಆಕೆ ಪಕ್ಷದ ಅಧ್ಯಕ್ಷ ಹುದ್ದೆಗೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅಂದಿನಿಂದಲೂ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಸಕ್ರಿಯವಾಗಿ ಪ್ರಿಯಾಂಕಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next