ಹೊಸದಿಲ್ಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬರ್ಲಿನ್‌ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಕಾರಣ ಮೋದಿ ಭೇಟಿ ವೇಳೆ ಪ್ರಿಯಾಂಕಾ ಧರಿಸಿದ್ದ ವಸ್ತ್ರ ಮತ್ತು ಕುಳಿತುಕೊಂಡ ಭಂಗಿ. ಮೊಣಕಾಲಿನವರೆಗೂ ಇದ್ದ ವಸ್ತ್ರ ಧರಿಸಿ ಮೋದಿಯನ್ನು ಭೇಟಿಯಾಗಿದ್ದಕ್ಕೆ ನೆಟಿಜನ್‌ಗಳು ಪ್ರಿಯಾಂಕಾರನ್ನು ಟ್ರೋಲ್ ಮಾಡಿದ್ದಾರೆ.
‘ದೇಶದ ಪ್ರಧಾನಿಯನ್ನು ಭೇಟಿಯಾಗಲು ಎಂಥ ಉಡುಗೆ ತೊಟ್ಟು ಹೋಗಬೇಕು ಎಂಬ ಸಾಮಾನ್ಯ ಅರಿವೂ ಪ್ರಿಯಾಂಕಾಗೆ ಇಲ್ಲವೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ನಿನ್ನೆಯವರೆಗೂ ನೀವು ನಮಗೆ ಪ್ರೇರಣೆಯಾಗಿದ್ದಿರಿ. ಆದರೆ ಪ್ರಧಾನಿ ಎದುರು ಹೇಗೆ ಕುಳಿತುಕೊಳ್ಳಬೇಕು ಎಂಬ ಪ್ರಜ್ಞೆಯೂ ನಿಮಗಿಲ್ಲ ಎಂದು ತಿಳಿದು ಬೇಸರವಾಗಿದೆ’ ಎಂದು ಮತ್ತೂಬ್ಬ ಯುವಕ ಟ್ವೀಟ್ ಮಾಡಿದ್ದಾನೆ. ‘ಪ್ರಿಯಾಂಕಾ ಮೊದಲು ನೀವು ಕನಿಷ್ಠ ನಡವಳಿಕೆಗಳನ್ನು ಬೆಳೆಸಿಕೊಳ್ಳಿ’ ಎಂದು ಮತ್ತೂಬ್ಬರು ಟ್ವೀಟಿಸಿದ್ದಾರೆ.
ಆದರೆ ಪ್ರಿಯಾಂಕಾ ಮಾತ್ರ ಈ ಎಲ್ಲ ಅವಹೇಳನಗಳಿಗೂ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬರ್ಲಿನ್‌ನಲ್ಲಿ ತಮ್ಮ ತಾಯಿಯ ಜತೆ ತೆಗೆಸಿಕೊಂಡಿರುವ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಇನ್ನೂ ಸಣ್ಣದಾದ ವಸ್ತ್ರ ಧರಿಸಿದ್ದು, ಅವರ ತಾಯಿ ಮಧು ಚೋಪ್ರಾ ಕೂಡ ಮಿನಿ ಸ್ಕರ್ಟ್ ತೊಟ್ಟಿದ್ದಾರೆ. ‘ಲೆಗ್ಸ್ ಫಾರ್ ಡೇಸ್..ಇಟ್ಸ್ ದ ಜೀನ್ಸ್ ವಿಥ್ ಮಧುಚೋಪ್ರಾ’ ಎಂದು ಅಡಿಬರಹವನ್ನೂ ನೀಡುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ಟಾಂಗ್ ನೀಡಿದ್ದಾರೆ.