ಚಿತ್ತಾಪುರ: ಪ್ರಸ್ತುತ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರ ಬಿಟ್ಟು ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗೆ ತೆರೆ ಎಳೆದು ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ 11 ಗಂಟೆಗೆ ನಾಗಾವಿ ಯಲ್ಲಮ್ಮ ದೇವಿಯ ಚಿತ್ತಾಶಾವಲಿ ದರ್ಗಾದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಂತರ ಪಟ್ಟಣದ ಚಿತ್ತಾವಲಿ ಚೌಕ್‌ನಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಪಟ್ಟಣದ ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ, ಬಸ್‌ನಿಲ್ದಾಣ, ಬಸವೇಶ್ವರ ಚೌಕ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿ ಎ. ಮಂಜುನಾಥ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರವಿದ್ದ ಟಿ-ಶರ್ಟ್ ತೊಟ್ಟ ಯುವಕರು ತಂಡದಿಂದ ಪ್ರಗತಿಗಾಗಿ ಪ್ರಿಯಾಂಕ್ ಖರ್ಗೆ ಎನ್ನುವ ಜಯಘೋಷ ಕೂಗಿದರು. ಕಾಂಗ್ರೆಸ್ ಧ್ವಜಗಳು ರಾರಾಜಿಸಿದವು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಮುಖಂಡರಾದ ತಿಪ್ಪಣಪ್ಪ ಕಮಕನೂರ್, ಅಜೀಜ್ ಸೇs… ರಾವೂರ, ರವಿ ರಾಠೊಡ ಸೂಚಕರಾಗಿದ್ದರು. ಮೆರವಣಿಗೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ ಸಾಹೇಬ್,
ಜೆಸ್ಕಾಂ ನಿರ್ದೇಶಕ ಮುಕ್ತಾರ ಪಟೇಲ್, ಶಿವರಾವ ಪಾಟೀಲ್ ಬೆಳಗುಂಪಾ, ಅನ್ನಪೂರ್ಣ ಹೋತಿನಮಡಿ, ಮಹ್ಮದ್ ರಸೂಲ್ ಮುಸ್ತಫಾ, ರಮೇಶ ಮರಗೋಳ, ಪ್ರಕಾಶ ಕಮಕನೂರ್, ಜಗದೇವರೆಡ್ಡಿ ಪಾಟೀಲ, ಶೀಲಾ ಕಾಶಿ, ಚಂದ್ರಶೇಖ ಕಾಶಿ, ನಾಗಯ್ಯ ಗುತ್ತೇದಾರ ಪಾಲ್ಗೊಂಡಿದ್ದರು.