Advertisement

ಮಾನವ ಕುಲವೇ ತಲೆತಗ್ಗಿಸುವಂಥ ಪ್ರಿಯಾಂಕ್ ಖರ್ಗೆ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ

09:27 PM Aug 13, 2022 | Team Udayavani |

ಬೆಂಗಳೂರು: ಇಡೀ ಮಾನವ ಕುಲವೇ ತಲೆತಗ್ಗಿಸುವಂಥ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ನೀಡಿದ್ದಾರೆ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಖಂಡಿಸಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರಿ ನೌಕರರು ಪಡೆಯಲು ಮಹಿಳೆಯರು ಮಂಚ ಏರಬೇಕು ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು. ಇಡೀ ರಾಜ್ಯದಲ್ಲಿ ಇಂದು ಹೆಣ್ಮಕ್ಕಳು ಸರಕಾರಿ ಅಥವಾ ಬೇರೆ ಕೆಲಸಕ್ಕೆ ಹೋಗಬೇಕೆಂದಿದ್ದರೆ ಅವರ ಬಗ್ಗೆ ಜನ ಏನು ಮಾತನಾಡಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇಡೀ ಹೆಣ್ಣುಕುಲಕ್ಕೇ ಕಳಂಕ ಹಚ್ಚುವ ಕೆಲಸವನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ ಎಂದು ಆಪಾದಿಸಿದರು.

ಇವರು ಕೇವಲ ಪ್ರಚಾರದ ಗೀಳು, ದಿನವೂ ಒಂದು ಪತ್ರಿಕಾ ಹೇಳಿಕೆ ಕೊಡಬೇಕೆಂಬ ಕಾರಣ ಇಟ್ಟುಕೊಂಡು ಈ ರೀತಿ ಸಣ್ಣ ಮಟ್ಟಕ್ಕೆ ಇಳಿಯುವ ಕೆಲಸವನ್ನು ಮಾಡಿದ್ದಾರೆ. ಇದು ಕೇವಲ ಅವರಿಗಷ್ಟೇ ಕಳಂಕವಲ್ಲ. ಕಾಂಗ್ರೆಸ್ ಪಕ್ಷಕ್ಕೂ ಕಳಂಕ ತಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಬ್ಬರು ಗೌರವಾನ್ವಿತ ವ್ಯಕ್ತಿ ಎಂದು ನಾವೆಲ್ಲ ಭಾವಿಸುತ್ತೇವೆ. ಆ ಕುಟುಂಬಕ್ಕೂ ಪ್ರಿಯಾಂಕ್ ಖರ್ಗೆ ಕಳಂಕ ತಂದಿದ್ದಾರೆ. ಆ ಕುಟುಂಬವೂ ಅವರ ಮಾತುಗಳನ್ನು ಕೇಳಿ ನೊಂದುಕೊಂಡಿರಬೇಕು ಎಂದು ತಿಳಿಸಿದರು.

ಲಂಚದ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಪ್ರಸ್ತಾಪಿಸಿ, ಮೊಟ್ಟೆ ಹಗರಣದಲ್ಲಿ ಜಯಮಾಲಾ ಅವರು ಸಿಲುಕಿದ ಕರ್ಮಕಾಂಡ ಕುರಿತು ಟಿವಿಯೊಂದು ನಿನ್ನೆ ವಿಷಯ ಬಿತ್ತರಿಸಿದೆ. ಅದನ್ನು ನೋಡಿದ ನಿಮ್ಮ ಉತ್ತರವೇನು ಎಂದು ಪ್ರಿಯಾಂಕ್ ಅವರನ್ನು ಪ್ರಶ್ನಿಸಿದರು. ವಿಜಯ ಬ್ಯಾಂಕಿನಲ್ಲಿ ಹಣ ಹೂಡಿದರೆ ಮಾತ್ರ ಕೆಲಸ ಆಗುತ್ತದೆ ಎಂದು ನಿಮ್ಮ ಅಧಿಕಾರಾವಧಿಯಲ್ಲಿ ಬಂದಿತ್ತಲ್ಲವೇ? ಯಾರ ಪ್ರಕರಣವದು? ಮಾನ್ಯ ಆಂಜನೇಯನವರ ಹೆಸರು ಹೇಳಿ ವಿಜಯ ಬ್ಯಾಂಕ್ ಎನ್ನುತ್ತಿದ್ದರಲ್ಲವೇ? ಅವರ ಮನೆಯಲ್ಲಿ ಹಣ ಸಿಕ್ಕಿತ್ತಲ್ಲವೇ? ಅದನ್ನು ಹೇಗೆ ಮುಚ್ಚಿ ಹಾಕಿದಿರಿ? ಇದು ಲಂಚದ ಅವತಾರದ ಮಾತುಗಳಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಇದೇ ವಿಧಾನಸೌಧದಲ್ಲಿ ಪುಟ್ಟರಂಗಶೆಟ್ಟಿಯವರ ಕಚೇರಿಯಲ್ಲಿ ಹಣ ಸಿಕ್ಕಿತ್ತಲ್ಲವೇ? ಅಲ್ಲಿಂದ ಅವರು ತಪ್ಪಿಸಿಕೊಂಡು ಹೋಗಿ ನೀವೆಲ್ಲ ಸೇರಿ ಅವರನ್ನು ಕಾಪಾಡಿದಿರಲ್ಲವೇ? ಇದು ಹಗರಣವಲ್ಲವೇ? ರೀಡೂ ಮಾಡಿದ್ದು, ಲೋಕಾಯುಕ್ತದಲ್ಲಿ ನಿಮ್ಮ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ 50 ಪ್ರಕರಣಗಳು ಇವತ್ತು ಕೂಡ ಇವೆ. ಅದೆಲ್ಲ ಲಂಚದ ಅವತಾರವಲ್ಲವೇ? ಎಂದು ಟೀಕಿಸಿದರು.

Advertisement

ಮಂಚದ ವಿಚಾರ ಪ್ರಸ್ತಾಪಿಸಿದ ಅವರು, ನಿಮ್ಮ ರಾಷ್ಟ್ರೀಯ ನಾಯಕ ವೇಣುಗೋಪಾಲ್ ಅವರ ಮೇಲೆ ಎಷ್ಟು ಕೇಸುಗಳಿವೆ ಅದರದು? ಇದಕ್ಕೆ ನಿಮ್ಮ ಉತ್ತರವೇನು? ಇಲ್ಲೂ ಕೂಡ ಕಾಂಗ್ರೆಸ್ ಕಚೇರಿಗೆ ಅವರು ಬಂದಾಗ ಅವರಿಂದ ದೂರ ಇರಿ ಎಂಬ ಮಾತುಗಳನ್ನಾಡಿದ್ದು ನಾವೆಲ್ಲರೂ ಕೇಳಿಲ್ಲವೇ? ಅಷ್ಟೇ ಯಾಕೆ ಮಾನ್ಯ ಮೇಟಿಯವರ ಕಥೆ ಏನಾಯಿತು? ಇದಕ್ಕೆಲ್ಲ ಪ್ರಿಯಾಂಕ್ ಖರ್ಗೆ ಅವರ ಬಳಿ ಉತ್ತರವಿದೆಯೇ ಎಂದು ವ್ಯಂಗ್ಯವಾಡಿದರು.

ಕೇವಲ ನಿಮ್ಮ ಮಾತಿನ ಚಟಕ್ಕೆ ಬಿಜೆಪಿ ಸರಕಾರವನ್ನು ನೀವು ಮೂದಲಿಸುವುದು ಸರಿಯೇ? ಎಂದ ಅವರು, ಜನರು ನೀವು ಆಡಳಿತ ಮಾಡುವ ಸಂದರ್ಭದಲ್ಲಿ ನಿಮಗೆ ಆಡಿದ ಮಾತುಗಳನ್ನು ತಿರುಚಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಪ್ರಾರಂಭಿಸಿದ್ದೀರಿ. ಪ್ರಬುದ್ಧತೆ ಇದ್ದರೆ ಪ್ರಿಯಾಂಕ್ ಖರ್ಗೆ ಇಂಥ ಮಾತುಗಳನ್ನು ಆಡುತ್ತಿರಲಿಲ್ಲ. ನೀವು ಪ್ರಬುದ್ಧತೆ ಇಲ್ಲದ ವ್ಯಕ್ತಿ. ಇನ್ನೂ ಅನುಭವ ಆಗಬೇಕಿದೆ. ನೀವು ರಾಜಕಾರಣಕ್ಕೆ ಹೊಸಬರು. ಆಗಲೇ ಹಿರಿಯ ರಾಜಕಾರಣಿಗಳಂತೆ ಮಾತನಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದೀರಿ ಎಂದು ಟೀಕಿಸಿದರು.

ಬಾಯಿ ಮುಚ್ಚಿಕೊಂಡು ಹಿರಿಯರನ್ನು ಅನುಸರಿಸಿ ಎಂದ ಅವರು, ರಾಷ್ಟ್ರೀಯ ನಾಯಕರಾದ ನಿಮ್ಮ ತಂದೆಯಿಂದ ಇದೇ ಕಲಿತಿದ್ದೀರಾ? ಆ ಗೌರವಾನ್ವಿತ ಕುಟುಂಬಕ್ಕೂ ನೀವು ಕಳಂಕ ಆಗಿ ಬಿಟ್ಟಿರಲ್ಲವೇ? ಎಂದು ಕೇಳಿದರು. ನಿಮ್ಮ ತಪ್ಪುಗಳೆಲ್ಲವೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೇರುತ್ತದೆ ಎಂದರಲ್ಲದೆ, ಪ್ರಿಯಾಂಕ್ ಖರ್ಗೆಯವರು ದೇಶ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಮುಂದಿನ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಇಂದಿನಿಂದ ಪ್ರಧಾನಿ ನರೇಂದ್ರ ಅವರ ಕರೆಯನ್ವಯ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮಾಚರಣೆ ನಡೆದಿದೆ. ಇಂಥ ಸಂಭ್ರಮದ ಸಂದರ್ಭದಲ್ಲಿ ನಿಮ್ಮ ಕೆಟ್ಟ ಪದಗಳ ಬಳಕೆ ಎಷ್ಟು ಸರಿ? ಹೊಲಸು ಕಾಲಿಗೂ ಮುಟ್ಟಬಾರದೆಂದು ನಾವೆಲ್ಲ ಪಾದರಕ್ಷೆ ಧರಿಸುತ್ತೇವೆ. ಆದರೆ, ನೀವು ಕಾಲಿಗೆ ಮಾತ್ರವಲ್ಲ, ನಾಲಿಗೆಗೂ ಹೊಲಸನ್ನು ಹಚ್ಚಿಕೊಂಡು ಬಿಟ್ಟಿದ್ದೀರಲ್ಲ ಎಂದು ಕಿಡಿಕಾರಿದರು. ಮಾಜಿ ಸಚಿವರಾಗಿ ನಿಮ್ಮ ಯೋಗ್ಯತೆಗೆ ಸರಿಯಾದ ಮಾತುಗಳೇ ಇವು? ಎಂದು ಆಕ್ಷೇಪಿಸಿದರು.

ಪ್ರಿಯಾಂಕ್ ಖರ್ಗೆಯವರು ತಕ್ಷಣ ರಾಜ್ಯದ ಜನರ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದರು. ಅವರು ಇನ್ನೂ ತಮ್ಮ ಹೇಳಿಕೆಯೇ ಸರಿ ಎಂದು ಟಿ.ವಿ. ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಇದು ಉದ್ಧಟತನ ಎಂದು ಟೀಕಿಸಿದರು.

ಇದನ್ನೂ ಓದಿ: ಅಂಗಾಂಗ ದಾನ: ಸಿಎಂ ಬೊಮ್ಮಾಯಿ ಸಹಿತ ಸಚಿವರ ನೋಂದಣಿ

ಕಾಂಗ್ರೆಸ್ ಪಕ್ಷದವರು ನಿನ್ನೆ- ಮೊನ್ನೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಬಿಜೆಪಿ ಬಾವುಟವನ್ನು ಎಲ್ಲೂ ಪ್ರದರ್ಶಿಸಿಲ್ಲ. ನಾವು ಮನೆಮನೆಗೆ ರಾಷ್ಟ್ರಧ್ವಜವನ್ನು ಕೊಟ್ಟಿದ್ದೇವೆ. ಜನರು ಪಾದಯಾತ್ರೆ ಮೂಲಕ ಅದನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‍ನವರು ಪೈಪೋಟಿಗೆ ಬಿದ್ದಹಾಗೆ 4 ರಾಷ್ಟ್ರಧ್ವಜ ಇದ್ದರೆ, ಇನ್ನೆಲ್ಲ ಕೂಡ ಕಾಂಗ್ರೆಸ್ ಧ್ವಜದೊಂದಿಗೆ ಕಾಂಗ್ರೆಸ್ ಪ್ರಚಾರಸಭೆ ಮಾಡಿದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಹುಶಃ ಸಿದ್ದರಾಮಯ್ಯರವರ ವಿರುದ್ಧ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಅವರು ದಾವಣಗೆರೆಯಲ್ಲಿ ಸಮಾರಂಭ ಮಾಡಿದ್ದರೋ ಅದಕ್ಕೆ ಉತ್ತರವೆಂಬಂತೆ ಕಾಂಗ್ರೆಸ್ ಉತ್ಸವ ಮಾಡುತ್ತಿದ್ದಾರೆ. ಇದು ದೇಶದ ಉತ್ಸವವಲ್ಲ. ಕಾಂಗ್ರೆಸ್‍ನ ನಿಜ ಬಣ್ಣವನ್ನು ಆಗಾಗ ಅವರೇ ತೆರೆದು ಇಡುತ್ತಿದ್ದಾರೆ. ಇದು ನಿಜವಾಗಿ ದೇಶದ ಹಬ್ಬ ಎಂಬುದನ್ನು ಅರಿತು ವರ್ತಿಸಲಿ ಎಂದು ಆಗ್ರಹಿಸಿದರು.

ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಕುರಿತು ಕೆಟ್ಟದಾಗಿ ಮಾತನಾಡುವ ಕೆಟ್ಟಚಾಳಿ ಕಾಂಗ್ರೆಸ್ಸಿಗರದು. ಕೆಟ್ಟ ಚಾಳಿ ಬಿಟ್ಟು ನಿಜ ದಾರಿಯಲ್ಲಿ ಬರಬೇಕು. ದೇಶದ ಜನರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next