Advertisement

ರಾಮ ಮಂದಿರ ಮುಂದೆ ಯುವಕರು ಭಿಕ್ಷೆ ಬೇಡ್ತಾರೆ : ಪ್ರಿಯಾಂಕ್

08:20 PM Jul 07, 2022 | Team Udayavani |

ವಾಡಿ : ಯುವಕರಿಗೆ ಉದ್ಯೋಗ ಕೊಡದೆ ಕೇವಲ ರಾಮ ಮಂದಿರ ನಿರ್ಮಿಸಿದರೆ, ಅದೇ ರಾಮ ಮಂದಿರದ ಮುಂದೆ ಯುವಕರು ಭಿಕ್ಷೆ ಬೇಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Advertisement

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಗ ಸಂಪೂರ್ಣ ಮಣ್ಣಾಗಿದೆ.

ಹಿಂದೆಂದೂ ಕಾಣದಷ್ಟು ನಿರುದ್ಯೋಗ ಸಮಸ್ಯೆ ಈಗ ಭುಗಿಲೆದ್ದಿದೆ. ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಬಿಜೆಪಿಯವರು ಅಯೋಧ್ಯಯ ರಾಮ ಮಂದಿರ ಕಡೆ ಕೈ ತೋರಿಸುತ್ತಿದ್ದಾರೆ. ರಾಮ ಮಂದಿರ ಕಟ್ಟುವುದರಿಂದ ಯುವಕರಿಗೆ ಅನ್ನ ಸಿಗುವುದಿಲ್ಲ. ಮೊದಲು ಉದ್ಯೋಗ ಕೊಡ್ರಿ. ಇಲ್ಲದಿದ್ದರೆ ಅದೇ ರಾಮ ಮಂದಿರದ ಮುಂದೆ ನಿರುದ್ಯೋಗಿ ಯುವಕರು ಭಿಕ್ಷೆ ಬೇಡಬೇಕಾಗುತ್ತದೆ. ಬದುಕಲು ಯುವಕರಿಗೆ ಉದ್ಯೋಗ ಕೊಟ್ಟ ನಂತರ ರಾಮ ಮಂದಿರ ಅಷ್ಟೇಯಲ್ಲ ಎಲ್ಲಾ ದೇವರುಗಳ ಮಂದಿರ ನಿರ್ಮಿಸಿರಿ ನಾನು ಬೇಡ ಅನ್ನಲ್ಲ ಎಂದರು.

ನನ್ನನ್ನು ಬಂಜಾರಾ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿಗರು ಮಾಡುತ್ತಿದ್ದಾರೆ. ವಾಸ್ತವದಲ್ಲಿ ನಾನು ಬಂಜಾರಾ ಜನರನ್ನು ಅತಿ ಹೆಚ್ಚು ಪ್ರೀತಿಸುತ್ತೇನೆ. ಸೇವಾಲಾಲ್ ಹೆಸರಿನಲ್ಲಿ ಯೋಜನೆಗಳನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದೇ ನಾನು. ನಾನು ಸಚಿವನಾಗಿದ್ದಾಗ ಸೇವಾಲಾಲ ಮಹಾರಾಜರ ಪುಣ್ಯಕ್ಷೇತ್ರ ಪೌರಾಘಢ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇನೆ.

ಇದನ್ನೂ ಓದಿ : ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು; ಜನ ಜಾಗೃತರಾಗಲು ಸೂಚನೆ

Advertisement

ಚುನಾವಣೆಯಲ್ಲಿ ನನಗೆ ಒಂದೋ ಎರಡೋ ಮತಗಳನ್ನು ಕೊಟ್ಟ ಪ್ರತಿ ತಾಂಡಾಗಳಿಗೂ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಂಸದ ಡಾ.ಉಮೇಶ ಜಾಧವ ಅವರು ಬಂಜಾರಾರರ ಧರ್ಮ ಗುರು ರಾಮರಾವ ಮಹಾರಾಜರ ನಕಲಿ ಸಹಿ ಮಾಡಿಸಿ ಬಂಜಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಕೊಟ್ಟು ಇಡೀ ಜನಾಂಗಕ್ಕೆ ಮೋಸ ಮಾಡಿದ್ದಾರೆ. ಆದರೂ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪ್ರಿಯಾಂಕ್, ಚಿತ್ತಾಪುರದಲ್ಲಿ ಅಭಿವೃದ್ಧಿ ವಿಷಯ ಕುರಿತು ಚರ್ಚೆಗೆ ಬರದೆ ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ಕೋಮು ಸಂಘರ್ಷ ಸೃಷ್ಠಿಸಲು ತಂತ್ರ ಹೆಣೆಯುತ್ತಿದ್ದಾರೆ. ಕೋಮು ಸೌರ್ಹಾಧತೆಯ ನಾಗಾವಿ ನಾಡಿನಲ್ಲಿ ಹುಳಿ ಹಿಂಡುವ ಹೇಡಿಗಳು ಕಾಲಿಟ್ಟಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಜಾಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಕಾಂಗ್ರೆಸ್ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ರಮೇಶ ಮರಗೋಳ, ಶಿವುರೆಡ್ಡಿಗೌಡ ಇರೆಡ್ಡಿ, ಶ್ರೀನಿವಾಸ ಸಗರ, ಅಬ್ದುಲ್ ಅಜೀಜ್‌ಸೇಠ, ಶಂಕ್ರಯ್ಯಸ್ವಾಮಿ ಮದರಿ, ಸುಭಾಷ ಯಾಮೇರ, ಶಿವುರುದ್ರ ಭೀಣಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಮಲ್ಲಿನಾಥಗೌಡ ಸನ್ನತಿ, ಶರಣಗೌಡ ಮಾಲಿಪಾಟೀಲ, ಜಗದೀಶ ಸಿಂಧೆ, ಸಾಯಬಣ್ಣ ಹೊಸಮನಿ, ಜುಮ್ಮಣ್ಣ ಪೂಜಾರಿ, ತಿಪ್ಪಣ್ಣ ವಗ್ಗರ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next