Advertisement

ದಿಕ್ಕು ತಪ್ಪಿದ ಪಿಎಸ್‌ಐ ಪರೀಕ್ಷಾ ಅಕ್ರಮ ತನಿಖೆ: ಪ್ರಿಯಾಂಕ್ ಖರ್ಗೆ ಆರೋಪ

02:21 PM May 13, 2022 | Team Udayavani |

ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ಕುರಿತು ಸರಕಾರ ನಡೆಸುತ್ತಿರುವ ಸಿಐಡಿ ತನಿಖೆಯ ದಿಕ್ಕು ತಪ್ಪಿದೆ. ರಾಜ್ಯದ ನಾನಾ ಕಡೆಗಳಲ್ಲಿ ಅಕ್ರಮಗಳು ಬಯಲಾಗುತ್ತಿದ್ದರೂ ತನಗೇನು ಸಂಬಂಧವೇ ಇಲ್ಲ ಎನ್ನುವಂತೆ ಸರಕಾರ ವರ್ತನೆ ಮಾಡುತ್ತಿದೆ. ರುದ್ರಗೌಡ ಸೇರಿದಂತೆ ಕಿಂಗ್‌ಪಿನ್‌ಗಳೇ ಸವಾಲು ಹಾಕುತ್ತಿದ್ದರೂ, ಮುಖ್ಯಮಂತ್ರಿಯಾದಿಯಾಗಿ ಗೃಹ ಸಚಿವರು ಸಮರ್ಪಕ ತನಿಖೆಗೆ ಆಸಕ್ತಿ ತೋರುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ನಡೆಸಿದವರು ನೇರವಾಗಿ ಸರಕಾರಕ್ಕೆ ಚಾಲೆಂಜ್ ಮಾಡುತ್ತಿದ್ದರೂ, ಸರಕಾರ ಕೈಲಾದಂತೆ ಸುಮ್ಮನೆ ಕುಳಿತಿದೆ. ವಿಚಾರಣೆ ವೇಳೆ ಉನ್ನತ ಅಧಿಕಾರಿಗಳು, ಮಂತ್ರಿಗಳ ಹೆಸರು ಹೇಳುತ್ತೇನೆ. ಬಂಧಿಸುತ್ತೀರಾ? ಎಂದು ರುದ್ರಗೌಡ ಪ್ರಶ್ನಿಸಿದ್ದಾನೆಂದು ಗೊತ್ತಾಗಿದೆ. ಆದರೂ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ತಂಡವನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಸರಕಾರ ಒಂದು ಅಕ್ರಮವನ್ನು ಸರಿಯಾಗಿ ತನಿಖೆ ಮಾಡದೆ ಮುಚ್ಚಿ ಹಾಕುವ ನಿಟ್ಟಿನಲ್ಲಿ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆಪಾದನೆ ಮಾಡಿದರು.

ಸರಕಾರ ಬೀಳುವ ಭಯ: ಬಂಧಿತರೇ ಸವಾಲು ಹಾಕುವಾಗ ಸರಕಾರ ಸುಮ್ಮನಿದ್ದರೆ ಹೇಗೆ? ಬಂಧಿತರು ಸರಕಾರ ಮಂತ್ರಿಗಳು, ಅಧಿಕಾರಿಗಳ ಹೆಸರು ಹೇಳಿದರೆ ಸರಕಾರ ಬಿದ್ದು ಹೋಗುವ ಭಯವಿದೆ ಎಂದು ಛೇಡಿಸಿದರು. ಬೆಂಗಳೂರಿನಲ್ಲಿನ ಮಹಾಕಿಂಗ್‌ಪಿನ್‌ ಗಳನ್ನು ಯಾಕೆ ಬಂಧಿಸುತ್ತಿಲ್ಲ. ನನಗೆ ಮೂರು ನೋಟೀಸು ಕೊಡುವ ಸರಕಾರ, ಅಧಿಕಾರಿಗಳಿಗೆ, ಮಂತ್ರಿಗಳಿಗೆ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದರು. ನೋಟೀಸ್‌ಗೆ ಏನು ಉತ್ತರ ಕೊಡಬೇಕು ಅದನ್ನು ಕಾನೂನು ಬದ್ಧವಾಗಿಯೇ ನೀಡಿದ್ದೇನೆ. ಆದರೂ, ಬಿಜೆಪಿಯವರಿಗೆ ಸುಮ್ಮೆ ಆಪಾದನೆ ಮಾಡುವುದೇ ದೊಡ್ಡ ಕೆಲಸವೆನ್ನುವಂತೆ ಬಿಂಬಿಸುತ್ತಿದ್ದಾರೆ ಎಂದರು.

ಉಳಿದ ತನಿಖೆ ಯಾವಾಗ?  ಪೇಪರ್ ಸೆಟ್ ಮಾಡೊದು, ಉತ್ತರ ಹೆಕ್ಕಿ ತೆಗೆಯುವುದು, ಸರಿಯಾದ ಉತ್ತರ ಟಿಕ್ ಮಡುವುದು, ನೇಮಕಾತಿ ಪಟ್ಟಿ ತಯಾರು ಮಾಡುವವರು ಯಾರು? ಎಂದು ಪ್ರಶ್ನಿಸಿದರು. ಕಲಬುರಗಿ, ಬೆಳಗಾವಿ, ಹಾಸನ, ವಿಜಯಪುರದಲ್ಲೂ ಅಕ್ರಮದ ಸದ್ದು ಎದ್ದಿದೆ. ಅದರ ತನಿಖೆ ಯಾರು ಮಾಡುತ್ತಾರೆ? ಉಳಿದ ಹಲವು ಎಲ್ಲಿದ್ದಾರೆ. ದಿವ್ಯಾ ಹಾಗರಗಿ ಪ್ರಕರಣದ ವಿಚಾರಣೆಯೇ ಸರಿಯಾಗಿ ನಡೆದಿಲ್ಲ. ಇದೆಲ್ಲವೂ ಸರಕಾರ ಬೇಕಂತಲೇ ಮಾಡಿ ಇಡೀ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ದೂರಿದರು.

ಇದನ್ನೂ ಓದಿ:ನಾನು ಹರಪನಹಳ್ಳಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿ: ಆರುಂಡಿ ನಾಗರಾಜ್

Advertisement

ಡಿವೈಎಸ್ಪಿ ಶಾಂತಕುಮಾರ್ ಬಂಧನ ವಿಚಾರ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಶಾಂತಕುಮಾರ್‌ ರನ್ನು ಬಂಧಿಸಿದೆಂದು ಗೊತ್ತಿಲ್ಲ. ಪ್ರಕರಣದ ಸಂಬಂಧ ಸೂತ್ರಧಾರಿಗಳು, ಪಾತ್ರಧಾರಿಗಳು, ನಿರ್ಮಾಪಕರು, ನಿರ್ದೇಶಕರು ಸರ್ಕಾರದಲ್ಲೇ ಇದ್ದಾರೆ. ಅವರನ್ನೇ ಕೇಳಬೇಕು. ದಿವ್ಯಾ ಜೈಲಿಗೆ ಹೋಗಿದ್ದರೂ, ದಿಶಾ ಸಮಿತಿ, ಕೆಎನ್‌ಸಿ ಬೋರ್ಡ್ ಸದಸ್ಯೆಯಾಗಿರುವುದು ಸರಕಾರಕ್ಕೆ ನಾಚಿಕೆಗೇಡಲ್ಲವೇ ಎಂದು ಪ್ರಶ್ನಿಸಿದರು.

ಆಜಾನ್ ಕಿರಿಕಿರಿ ಯಾರು ಮಾಡಿದ್ದು?: ಆಜಾನ್ ಕುರಿತು ಸರಕಾರದ ನಡೆ ಆಕ್ಷೇಪಿಸಿದ ಪ್ರಿಯಾಂಕ್, ಮೊದಲು ಸುಖಾಸಮುಮ್ಮನೆ ಕಿರಿಕಿರಿ ಆರಂಭಿಸಿದ್ದುಯಾರು?. ಆಜಾನ್ ಬಗ್ಗೆ ಸುಪ್ರೀಂ ಕೋರ್ಟ್ ಗೈಡ್‌ಲೈನ್ ಇದೆ. ಸುಪ್ರೀಂ ಕೋರ್ಟ್ ಆದೇಶ ಇಂಪ್ಲಿಮೆಂಟ್ ಮಾಡಲು ಸರ್ಕಾರಕ್ಕೆ ಯಾಕೆ ಕಷ್ಟವಾಗ್ತಿದೆ. ಆಜಾನ್ ನೀಡಲು ಇಷ್ಟೇ ಡೆಸಿಬಲ್ ಶಬ್ದ ಬಳಸಬೇಕೆಂದು ರೂಲ್ ಮಸೀದಿ, ಮಂದಿರ, ಚರ್ಚ್ಗಳಿಗೂ ಅನ್ವಯಿಸುತ್ತದೆ. ಹೆಚ್ಚಿದ್ದರೆ, ಅನುಮತಿ ಪಡೆಯದಿದ್ದರೆ ನೋಟೀಸ್ ಕೊಡಿ. ಅದನ್ನು ಬಿಟ್ಟು ಇಷ್ಟು ದೊಡ್ಡ ಡ್ರಾಮಾ ಆಡುವ, ಆಡಿಸುವ ಅಗತ್ಯವಿರಲಿಲ್ಲ ಎಂದು ಚಾಟಿ ಬೀಸಿದರು.

ಆರ್‌ಎಸ್‌ಎಸ್ ಅಜಂಡಾ ಆಗಿರುವ ಮತಾಂತರ ಕಾಯಿದೆ ಜಾರಿಗೆ ತರಲು ತೋರುತ್ತಿರುವ ಉತ್ಸುಕತೆ, ಪಿಎಸ್‌ಐ ಅಕ್ರಮ ಬಯಲಿಗೆಳೆಯುವಲ್ಲಿ ಇಲ್ಲ ಎಂದ ಅವರು, ಅಶ್ವಥ್ ನಾರಾಯಣ ಅವರು ಎಂ.ಬಿ.ಪಾಟೀಲ ಅವರನ್ನು ಭೇಟಿ ಆಗಿರುವ ಕುರಿತು ನನಗೆ ಹೆಚ್ಚು ಗೊತ್ತಿಲ್ಲ. ಈ ಕುರಿತು ಡಿಕೆಶಿ ಅವರು ಆಗಲೇ ಹೇಳಿಕೆ ನೀಡಿದ್ದಾರಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next