ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಮಾಡಿದಾಗ ಸಚಿವರ ಸಹಿತ ಬಿಜೆಪಿ ನಾಯಕರು ಸುಳ್ಳು ಎಂದು ಹೇಳಿದ್ದರು. ಆದರೆ, ತನಿಖಾಧಿಕಾರಿಗಳೇ ಅಕ್ರಮ ನಡೆದಿರುವುದು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ನಿರಂತರವಾಗಿ ಹಗರಣ ನಡೆದಿಲ್ಲ ಎಂದು ಹೇಳುತ್ತಿದೆ. ಮೇ.20ರಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ ಎಂದಿದ್ದರು. ಆದರೆ, ಮೇ 11ರಂದು ಈ ಪ್ರಕರಣದಲ್ಲಿನ ತನಿಖಾಧಿಕಾರಿಗಳಾದ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯಕಾರ್ಯಾಚರಣೆ ಅಧಿಕಾರಿ ಪ್ರಾಥಮಿಕ ವರದಿ ಸಲ್ಲಿಸಿದ್ದು, ಭ್ರಷ್ಟಾಚಾರ ಆಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಮಂತ್ರಿಗಳಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿಲ್ಲವೇ ಅತವಾ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆಯೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ನಿಗಮಗಳು ಎಲ್ಲ ದಾಖಲೆ ನೀಡಿಲ್ಲ. ಕೊಟ್ಟಿರುವ ಕೆಲವು ದಾಖಲೆಗಳನ್ನೇ ಆಧರಿಸಿ ಈ ತನಿಖೆ ಮಾಡಿದ್ದು, ತನಿಖಾಧಿಕಾರಿಗಳು ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸುತ್ತಾರೆ. ಈ ವರದಿ ನೀಡಿರುವುದು ಸರ್ಕಾರ ನೇಮಿಸಿರುವ ಅಧಿಕಾರಿಗಳೇ ನೀಡಿದ್ದಾರೆ. ನಿಮ್ಮ ಬಳಿ ದಾಖಲೆ ಇಲ್ಲ ಎಂದರೆ ನಿಮ್ಮ ಅಧಿಕಾರಿಗಳಿಂದ ನೋಟೀಸ್ ಕೊಡಿಸಿ, ನಾನೇ ನಿಮಗೆ ಈ ದಾಖಲೆಗಳನ್ನು ನೀಡುತ್ತೇನೆ ಎಂದು ಸವಾಲು ಹಾಕಿದರು.
ಈ ವರದಿ ಸಂಕ್ಷಿಪ್ತ ಸಾರಾಂಶ ಏನೆಂದರೆ, 3 ಕಡೆಗಳಲ್ಲಿ ಲೋಪವಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Related Articles
ಇದು ಒಂದಲ್ಲ ಎರಡಲ್ಲ, 431 ಕೋಟಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸೇರಿದ ಹಣ. ಅವರು ಸಮಾಜದ ಮುಖ್ಯವಾಹಿನಿಗೆ ಬರುವ ಹಣ. ಈ ಬಗ್ಗೆ ಗಂಭೀರತೆ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಇಲಾಖೆಯ ಆಂತರಿಕ ತನಿಖೆಯಲ್ಲೇ ಭ್ರಷ್ಟಾಚಾರ ನಡೆದಿರುವ ಮಾಹಿತಿ ಬಂದಿದೆ ಎಂದರೆ, ನ್ಯಾಯಾಂಗ ತನಿಖೆಗೆ ಕೊಟ್ಟರೆ ಎಲ್ಲರ ಹೆಸರೂ ಬರುತ್ತದೆ ಎಂದು ಹೇಳಿದರು.
ಕಟೀಲ್ ಅವರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಬಿಟ್ ಕಾಯಿನ್, ಪಿಎಸ್ ಐ ಹಗರಣ, ಗಂಗಾ ಕಲ್ಯಾಣ ಹಗರಣದ ಬಗ್ಗೆ ಮಾತನಾಡಿದರೆ ಮೌನವಾಗುತ್ತಾರೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದರು.