Advertisement

ಅಪೌಷ್ಟಿಕ ಮಕ್ಕಳ ಮರು ಸಮೀಕ್ಷೆಗೆ ಪ್ರಿಯಾಂಕ್‌ ಒತ್ತಾಯ

07:27 PM Jun 18, 2021 | Team Udayavani |

ಕಲಬುರಗಿ: ಕೊರೊನಾ ಮಹಾಮಾರಿ ಸೋಂಕಿನ ಸಂಭವನೀಯ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಿನಿಂದಲೇ ಕಾರ್ಯೋನ್ಮುಖವಾಗಬೇಕು. ಮೂರನೇ ಅಲೆ ವ್ಯಾಪಿಸಿದರೆ ಅಪೌಷ್ಟಿಕ ಮಕ್ಕಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

Advertisement

ಆದ್ದರಿಂದ ತಕ್ಷಣವೇ ರಾಜ್ಯಾದ್ಯಂತ ಅಪೌಷ್ಟಿಕ ಮಕ್ಕಳ ಮರು ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಬೇಕು. ಎಲ್ಲ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಗತ್ಯ ಆಹಾರ ಪೂರೈಕೆಗೆ ಮುಂದಾಗಬೇಕೆಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊರೊನಾ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೂ ಡಾ| ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಮಕ್ಕಳನ್ನು ಬಾಧಿ  ಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.

ಹೀಗಾಗಿ ಕೂಡಲೇ ಮಕ್ಕಳ ರಕ್ಷಣೆ ಕುರಿತ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಐಸಿಯು ಬೆಡ್‌, ವೆಂಟಿಲೇಟರ್‌ ಬೆಡ್‌ ಹೆಚ್ಚಳಕ್ಕೆ ಖರೀದಿ ಮಾಡಬೇಕು ಎಂದು ಹೇಳುವುದನ್ನು ಬಿಟ್ಟು, ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳುವ ಮುನ್ನಚ್ಚರಿಕೆಯನ್ನು ಸರ್ಕಾರ ವಹಿಸಬೇಕು ಎಂದರು.

ಈಗ ಸರ್ಕಾರದ ಬಳಿ ಅಂಗನವಾಡಿಯಲ್ಲಿ ದಾಖಲಾದ ಮಕ್ಕಳ ಬಗ್ಗೆ ಮಾತ್ರ ಮಾಹಿತಿ ಇದೆ. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಂಗನವಾಡಿಗಳಿಂದ ದೂರ ಉಳಿದ ಸಾಕಷ್ಟು ಮಕ್ಕಳು ಇದ್ದಾರೆ. ಉದಾಹರಣೆಗೆ ಜಿಲ್ಲಾದ್ಯಂತ ಒಟ್ಟು ಅಂಗನವಾಡಿ ಕೇಂದ್ರಗಳಲ್ಲಿ 2,23,241 ಮಕ್ಕಳ ಮಾಹಿತಿ ಇದೆ. ಈ ಪೈಕಿ 29 ಸಾವಿರಕ್ಕೂ ಅಧಿ ಕ ಮಕ್ಕಳು ತೀವ್ರ ಮತ್ತು ಮಧ್ಯಮ ಹಂತದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ಅಪೌಷ್ಟಿಕ ಮಕ್ಕಳ ಪತ್ತೆಗೆ ಮರು ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ ಎಂದರು. ಅಂಗನವಾಡಿಗಳಿಂದ ಹೊರಗುಳಿದ ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಿ, ಅವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಪೂರಕ ಆಹಾರ ನೀಡಬೇಕು. ಈಗಿನಿಂದಲೇ ಇಂತಹ ಕಾರ್ಯ ಆರಂಭಿಸಿದರೆ, ಆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕನಿಷ್ಟ 30 ದಿನ ಬೇಕಾಗುತ್ತದೆ.

Advertisement

ಹೀಗಾಗಿ ಮೂರನೇ ಅಲೆ ಶುರುವಾಗುವ ಮುನ್ನವೇ ಪೂರಕವಾದ ಮುನ್ನೆಚ್ಚರಿಕೆ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಲಸಿಕೆ ವಿತರಣೆಯಲ್ಲಿ ಹಿಂದೆ: ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಕಾರ್ಯ ಸರ್ಮಪಕವಾಗಿ ನಡೆಸುತ್ತಿಲ್ಲ. ಮೊದಲ ಡೋಸ್‌ ಪಡೆದವರಿಗೆ ಎರಡನೇ ಲಸಿಕೆ ಸೂಕ್ತ ಕಾಲಕ್ಕೆ ಸಿಗುತ್ತಿಲ್ಲ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯರ್ತರಿಗೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನೀಡಲು ಸರ್ಕಾರದ ಕೈಯಲ್ಲಿ ಆಗಿಲ್ಲ. ಆದರೂ, ರಾಜ್ಯ ಸರ್ಕಾರ ಲಸಿಕೆ ವಿತರಣೆ ಬಗ್ಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ ಎಂದು ಪ್ರಿಯಾಂಕ್‌ ಟೀಕಿಸಿದರು.

ಸರ್ಕಾರ ಲಸಿಕೆ ವಿತರಣೆಯಲ್ಲಿ ತಾರತ್ಯಮ ಧೋರಣೆ ತೋರುತ್ತಿದೆ. ಬೆಂಗಳೂರು, ಮಂಗಳೂರು ಭಾಗಕ್ಕೆ ಪೂರೈಸಿದಷ್ಟು ಲಸಿಕೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಪೂರೈಸುತ್ತಿಲ್ಲ. ಕಲಬುರಗಿ ಜಿಲ್ಲೆಯ ಜನಸಂಖ್ಯೆ ಅಂದಾಜು 25 ಲಕ್ಷ ಇದೆ. ಇದರಲ್ಲಿ ಕೊರೊನಾ ವಾರಿಯರ್ಸ್‌, ಮುಂಚೂಣಿ ಕಾರ್ಯರ್ತರು ಸೇರಿ 6,05,979 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಆದರೂ, ಇದುವರೆಗೆ 2,75,055 ಜನರಿಗೆ ಮಾತ್ರ ಮೊದಲ ಡೋಸ್‌ ಲಸಿಕೆ ಸಿಕ್ಕಿದೆ.

ಎರಡನೇ ಡೋಸ್‌ ಲಸಿಕೆ ಕೇವಲ 44,218 ಮಂದಿಗೆ ನೀಡಲಾಗಿದೆ. ಇದೇನಾ ವಿತರಣೆಯಲ್ಲಿ ಸರ್ಕಾರ ಮಾಡಿದ ಸಾಧನೆ ಎಂದು ಪ್ರಶ್ನಿಸಿದರು. ಈ ಲಸಿಕೆ ನೀಡುವ ಗುರಿ ಯಾರು ನಿರ್ಧರಿಸುತ್ತಾರೆ ಎನ್ನುವ ಮಾಹಿತಿಯೂ ಇಲ್ಲ. ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಬೇಕಾದರೆ ಎರಡೂ ಡೋಸ್‌ ಲಸಿಕೆ ಪಡೆಯಬೇಕೆಂದು ತಜ್ಞರು ಹೇಳುತ್ತಾರೆ. ಹೀಗೆ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಕಾರ್ಯ ನಡೆಯದಿದ್ದರೆ, ಮೂರನೇ ಅಲೆಯಲ್ಲಿಯೂ ಜನರು ತೊಂದರೆಗೆ ತುತ್ತಾಗುವ ಸಾಧ್ಯತೆಯಿದೆ.

ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊರೊನಾ ಲಸಿಕಾ ಅಭಿಯಾನವನ್ನು ಸರ್ಕಾರ ಸಮರ್ಪಕವಾಗಿ ನಡೆಸಬೇಕೆಂದು ಮನವಿ ಮಾಡಿದರು. ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂಎಲ್‌ ಸಿಗಳಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಡಾ| ಕಿರಣ ದೇಶಮುಖ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಚೇತನಕುಮಾರ ಗೋನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next