Advertisement

ವೈಶಿಷ್ಟ್ಯತೆಗಳ ನಡುವೆ ವಿಷ್ಣುಪ್ರಿಯ

10:53 AM Sep 06, 2019 | Nagendra Trasi |

“ಪಡ್ಡೇಹುಲಿ’ ಚಿತ್ರದ ಬಳಿಕ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ಸೆಟ್ಟೇರಲು ರೆಡಿಯಾಗುತ್ತಿದೆ. ಕೆಲ ದಿನಗಳ
ಹಿಂದಷ್ಟೇ ತಮ್ಮ ಪುತ್ರನ ನೂತನ ಚಿತ್ರಕ್ಕೆ “ವಿಷ್ಣುಪ್ರಿಯ’ ಎಂದು ಹೆಸರಿಟ್ಟಿದ್ದ ನಿರ್ಮಾಪಕ ಕೆ. ಮಂಜು, ಇದೀಗ ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಚಯಿಸಿದ್ದಾರೆ.

Advertisement

ಇನ್ನು “ವಿಷ್ಣುಪ್ರಿಯ’ ಕೆ. ಮಂಜು ನಿರ್ಮಾಣದ 45ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ಮಲೆಯಾಳಿ ಚೆಲುವೆ ಪ್ರಿಯಾ ಪ್ರಕಾಶ್‌ ವಾರಿಯರ್‌ ಜೋಡಿಯಾಗುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿದಂತೆ ಸುಮಾರು ನಾಲ್ಕೈದು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಚಿತ್ರಗಳು, ಸುಮಾರು 1200 ಕ್ಕೂ ಹೆಚ್ಚು ಆ್ಯಡ್‌ ಫಿಲಂಗಳಿಗೆ ಕೆಲಸ ಮಾಡಿರುವ ಅನುಭವವಿರುವ ಕೆ. ಪ್ರಕಾಶ್‌, “ವಿಷ್ಣುಪ್ರಿಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕೆ. ಮಂಜು, “ವಿಷ್ಣುಪ್ರಿಯ ಅನ್ನೋದು ಹೃದಯಾಂತರಾಳದಿಂದ ಬಂದಂತಹ ಹೆಸರು. ಈ ಚಿತ್ರದಲ್ಲಿ ಪ್ರೀತಿ ಎಂದರೇನು ಎಂಬುದನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರಿಗೆ ಮಕ್ಕಳು ಯಾವ ರೀತಿ ಗೌರವ ಕೊಡಬೇಕು, ಹಿರಿಯರಾದವರು ಯುವ ಪ್ರೇಮಿಗಳಿಗೆ ಹೇಗೆ ಬೆಂಬಲವಾಗಿ ನಿಲ್ಲಬೇಕು, ಎಂಬ ಹತ್ತಾರು ಸಂಗತಿಗಳು ಚಿತ್ರದಲ್ಲಿದೆ.

ಕೃತಕವಲ್ಲದ 90ರ ದಶಕದ ಪ್ರೀತಿಯನ್ನ ಚಿತ್ರದಲ್ಲಿ ನೋಡಬಹುದು. ಚಿತ್ರದ ಕಥೆಯಲ್ಲಿ ಸಂಬಂಧಗಳ ಮೌಲ್ಯಗಳು ಇರಲಿದೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಧಾರವಾಡದ ಸಿಂಧೂಶ್ರೀ ಎನ್ನುವ ಹುಡುಗಿಯ ಕಾದಂಬರಿಯನ್ನು ಈ ಚಿತ್ರದ ಮೂಲಕ ತೆರೆಮೇಲೆ
ತರುತ್ತಿದ್ದೇವೆ. ಸುಮಾರು ಮೂರು ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎನ್ನುವ ಮಾಹಿತಿ ನೀಡಿದರು.

Advertisement

“ವಿಷ್ಣುಪ್ರಿಯ’ ಚಿತ್ರದಲ್ಲಿ ನಾಯಕ ಶ್ರೇಯಸ್‌ ವಿಷ್ಣು ಎನ್ನುವ ಹೆಸರಿನ ಹುಡುಗನಾಗಿ, ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಯಕಿ ಪ್ರಿಯಾ ವಾರಿಯರ್‌, ಪ್ರಿಯ ಎನ್ನುವ ಹೆಸರಿನ ಸಂಕೀರ್ಣ ಮನಸ್ಥಿತಿಯ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಸುಚೇಂದ್ರ ಪ್ರಸಾದ್‌, ಬಿರದಾರ್‌, ಅಚ್ಯುತ್‌ ಕುಮಾರ್‌, ಅಶ್ವಿ‌ನಿ ಗೌಡ, ನವೀನ್‌ ಪಡೀಲ್‌, ನಿಹಾಲ್‌ ಮುಂತಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ತೆಲುಗಿನಲ್ಲಿ ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಗೋಪಿ ಸುಂದರ್‌ “ವಿಷ್ಣುಪ್ರಿಯ’ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ, ರವಿ ಶ್ರೀವತ್ಸ ಸಂಭಾಷಣೆ ಇದೆ. ಚಿತ್ರಕ್ಕೆ ವಿನೋದ್‌ ಭಾರತಿ ಛಾಯಾಗ್ರಹಣ, ಸುರೇಶ್‌ ಅರಸ್‌ ಸಂಕಲನವಿದೆ. ಚಿತ್ರದಲ್ಲಿ ಲವ್‌, ಸೆಂಟಿಮೆಂಟ್‌ ಜೊತೆಗೆ ಭರ್ಜರಿ ಆ್ಯಕ್ಷನ್‌ ದೃಶ್ಯಗಳು ಕೂಡ ಇರಲಿದ್ದು, ಜಾನಿ, ರವಿವರ್ಮ, ವಿನೋದ್‌ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರೆ. “ವಿಷ್ಣುಪ್ರಿಯ’ ಚಿತ್ರವನ್ನು
ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಮೊದಲಾದ ಕಡೆಗಳಲ್ಲಿ ಎರಡು ಹಂತದಲ್ಲಿ ಚಿತ್ರೀಕರಿಸಲು ನಿರ್ಮಾಪಕ ಕೆ. ಮಂಜು ಪ್ಲಾನ್‌ ಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next