Advertisement

ಬೆಳಗಾವಿಯ ಪೃಥ್ವಿ ಡ್ಯಾನ್ಸ್‌ “ರಾಜ”

09:14 PM Oct 12, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಪ್ರತಿಭೆಗೆ ಬಡತನವಿಲ್ಲ. ಅದು ರಾಜನಂತೆ ಯಾವಾಗಲೂ ಮೆರೆಯುತ್ತಲೇ ಇರುತ್ತದೆ. ಅವಕಾಶ ಸಿಕ್ಕರೆ ಸಾಕು ಎಂಥವರನ್ನೂ ಬೆರಗುಗೊಳಿಸುತ್ತದೆ. ಪ್ರತಿಭೆಗೆ ಇರುವ ಮಹತ್ವವೇ ಹಾಗೆ. ಇದಕ್ಕೆ ಬೆಳಗಾವಿಯ ಪೃಥ್ವಿರಾಜ್‌ ಉತ್ತಮ ನಿದರ್ಶನ.

ಈ ಬಾಲ ಪ್ರತಿಭೆಗೆ ಕಿತ್ತು ತಿನ್ನುವ ಬಡತನ ಇದೆ. ಅದರಲ್ಲೇ ಅಚ್ಚರಿಪ‌ಡುವಂತಹ ಪ್ರತಿಭೆಯೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಹೆಮ್ಮೆಯಿಂದ ಹೇಳುವಂತೆ ಹೆಸರಿನ ಮುಂದೆ ರಾಜ್‌ ಇದೆ. ಬಡತನವನ್ನು ಸವಾಲಾಗಿ ಸ್ವೀಕರಿಸಿರುವ ಈ ಒಂಬತ್ತು ವರ್ಷದ ಪೋರ ಪೃಥ್ವಿರಾಜ್‌ ಅಶೋಕ ಕೊಂಗಾರಿ ಈಗ ಅದ್ಭುತ ಡ್ಯಾನ್ಸ್‌ ಮೂಲಕ ಇಡೀ ದೇಶಕ್ಕೆ ತನ್ನ ಪ್ರತಿಭೆಯ ಪರಿಚಯ ಮಾಡಿದ್ದಾನೆ. ಇಂತಹ ಅದ್ಭುತ ಪ್ರತಿಭೆಗೆ ಈಗ ನೃತ್ಯದಲ್ಲಿ ಪ್ರತಿಯೊಬ್ಬರೂ ಹೆಮ್ಮೆಪಡುವಂತಹ ಪ್ರಶಸ್ತಿ ಸಿಕ್ಕಿದೆ. ಪ್ರತಿಷ್ಠಿತ ಖಾಸಗಿ ಚಾನಲ್‌ನ ನೃತ್ಯ ಸ್ಪರ್ಧೆ (ರಿಯಾಲಿಟಿ ಶೋ)ಯಲ್ಲಿ ಮೊದಲ ರನ್ನರ್‌ ಅಪ್‌ ಪ್ರಶಸ್ತಿ ಪಡೆಯುವ ಮೂಲಕ ಪೃಥ್ವಿರಾಜ್‌ ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿದ್ದಾನೆ.

ಪೃಥ್ವಿರಾಜ್‌ ಅವನದ್ದು ಅತ್ಯಂತ ಬಡ ಕುಟುಂಬ. ನೇಕಾರಿಕೆ ಇವರ ಮೂಲ ವೃತ್ತಿ. ಕಡು ಬಡತನದಲ್ಲಿ ಅವರು ಎಲ್ಲ ಕಷ್ಟಗಳನ್ನು ನೋಡಿದ್ದಾರೆ. ಒಂದೇ ಮಾತಲ್ಲಿ ಹೇಳುವದಾದರೆ ಕಷ್ಟಗಳ ಸರಮಾಲೆಯನ್ನೇ ಈ ಕುಟುಂಬ ಎದುರಿಸಿದೆ. ಇಷ್ಟಾದರೂ ಕಷ್ಟಗಳು ಇನ್ನೂ ಮುಗಿದಿಲ್ಲ. ಆದರೆ ಇದರಲ್ಲಿ ಹೆಮ್ಮೆಯಿಂದ ಹೇಳಬೇಕಾದ ಅಂಶ ಎಂದರೆ ತಂದೆ ತಮ್ಮ ಮಗನ ಆಸೆ ಹಾಗೂ ಪ್ರತಿಭೆ ಪ್ರದರ್ಶನಕ್ಕೆ ಯಾವತ್ತೂ ಬಡತನ ಅಡ್ಡಿ ಬರದಂತೆ ನೋಡಿಕೊಂಡಿದ್ದಾರೆ.

ತಂದೆಯ ಕನಸು ಸಾಕಾರ: ಬೆಳಗಾವಿಯ ವಡಗಾವಿ ಪ್ರದೇಶದ ಮಲಪ್ರಭಾ ನಗರದಲ್ಲಿರುವ ಕುಟುಂಬ ಕಳೆದ ಎರಡು ದಶಕಗಳಿಂದ ಮಗ್ಗಗಳ ಮೇಲೆಯೇ ಜೀವನ ನಡೆಸಿದೆ. ಬಡ ಕುಟುಂಬಕ್ಕೆ ನಿತ್ಯದ ದುಡಿಮೆಯೇ ಆಸರೆ. ತನ್ನಂತೆ ಮಗನೂ ಸಹ ಕಷ್ಟ ಪಡುವಂತಾಗಬಾರದು. ಜೀವನದಲ್ಲಿ ಎಲ್ಲರೂ ಹೆಮ್ಮೆಪಡುವಂತಹ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂಬ ಆಸೆಯಿಂದ ಅಶೋಕ ಕೊಂಗಾರಿ ತಮ್ಮ ಮಗುವಿಗೆ ಪೃಥ್ವಿರಾಜ ಎಂಬ ಹೆಸರಿಟ್ಟಿದ್ದರಂತೆ. ಅವರ ಬಡತನ ಗಮನಿಸಿದ ಅನೇಕರು ಕುಟುಂಬದ ನೆರವಿಗಾಗಿ ಮಗನನ್ನೂ ಮಗ್ಗದ ಕೆಲಸಕ್ಕೆ ಸೇರಿಸುವಂತೆ ಸಲಹೆ ನೀಡಿದರು. ಆದರೆ ಮಗನಿಗೆ ಉತ್ತಮ ಭವಿಷ್ಯ ರೂಪಿಸುವ ಕನಸು ಕಂಡಿದ್ದ ತಂದೆ ಎಷ್ಟೇ ಕಷ್ಟ ಬಂದರೂ ಮಗನಿಗೆ ನೇಕಾರಿಕೆ ಕೆಲಸ ಹಚ್ಚಲಿಲ್ಲ. ಪೃಥ್ವಿರಾಜ್‌ ಸಹ ತಂದೆಯ ಕನಸು ನನಸು ಮಾಡಲು ನೃತ್ಯದಲ್ಲಿ ತನ್ನ ಭವಿಷ್ಯ ಕಂಡುಕೊಂಡ.

Advertisement

ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್‌ ಶೋಗಳನ್ನು ನೋಡಿ ಅದರಿಂದ ಪ್ರೇರಿತನಾದ. ತಾನೂ ಸಹ ಇದೇ ರೀತಿ ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಗುರಿ ಬೆಳೆಸಿಕೊಂಡ. ಪೃಥ್ವಿರಾಜ್‌ನ ಪ್ರತಿಭೆಯ ಮೇಲೆ ಯಾವುದೇ ಕಾರಣಕ್ಕೂ ಬಡತನದ ನೆರಳು ಬಿ‌ ಳದಂತೆ ತಂದೆ ನೋಡಿಕೊಂಡರು. ತಂದೆ, ತಾಯಿಯ ಶ್ರಮ, ತ್ಯಾಗ ಜತೆಗೆ ಗುರುವಿನ ಕಠಿಣ ಮಾರ್ಗದರ್ಶನ ಇವತ್ತು ಪೃಥ್ವಿರಾಜ್‌ನನ್ನು ರಾಷಮಷ್ಟ್ರದ ಪ್ರತಿಭೆಯಾಗಿ ಬೆಳಗುವಂತೆ ಮಾಡಿದೆ. ರಿಯಾಲಿಟಿ ಶೋನಲ್ಲಿ ಪ್ರಶಸ್ತಿ ಗೆದ್ದು ಬೆಳಗಾವಿಗೆ ಬಂದ ಪೃಥ್ವಿರಾಜ್‌ಗೆ ನಿರೀಕ್ಷೆಯಂತೆ ಅದ್ದೂರಿ ಸ್ವಾಗತ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next