ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಮುಖ್ಯಕಚೇರಿ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಖಾಸಗಿ ಭದ್ರತಾ ಎಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ನೈಋತ್ಯ ರೈಲ್ವೆ ವಲಯ ಈಗಾಗಲೇ ತನ್ನ ಕೇಂದ್ರೀಯ ವೈದ್ಯಕೀಯ ಆಸ್ಪತ್ರೆಯಲ್ಲಿ ಖಾಸಗಿ ಭದ್ರತಾ ಎಜೆನ್ಸಿ ಮೂಲಕ ಭದ್ರತಾ ವ್ಯವಸ್ಥೆ ಆಯೋಜಿಸಿದೆ. ಇದೇ ಮಾದರಿಯನ್ನು ನೈಋತ್ಯ ರೈಲ್ವೆಯ ಜನರಲ್ ಸ್ಟೋರ್ಸ್, ಕಾರ್ಯಾಗಾರ (ವರ್ಕ್ ಶಾಪ್), ಡೀಸೆಲ್ ಶೆಡ್ ಸೇರಿದಂತೆ ಇನ್ನಿತರೆಡೆಯೂ ನಿಯೋಜಿಸಲು ಚಿಂತಿಸಲಾಗಿದೆ.
ರೈಲ್ವೆ ಮಂಡಳಿ ನೈಋತ್ಯ ರೈಲ್ವೆ ವಲಯದ ಜನರಲ್ ಸ್ಟೋರ್ಸ್, ವರ್ಕ್‌ಶಾಪ್, ಡೀಸೆಲ್ ಶೆಡ್ ಸೇರಿದಂತೆ ಯಾವ್ಯಾವ ವಿಭಾಗಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಹುದು ಎಂಬುದನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್) ಸಿಬ್ಬಂದಿ ಸದ್ಯ ಇಲ್ಲಿನ ಗದಗ ರಸ್ತೆಯ ಕೇಂದ್ರೀಯ ರೈಲ್ವೆ ಆಸ್ಪತ್ರೆ ಹೊರತುಪಡಿಸಿ ಇಲಾಖೆಯ ವಲಯದ ಪ್ರಧಾನ ಕಚೇರಿ, ಮಹಾ ಪ್ರಬಂಧಕರ ಕಚೇರಿ, ವಿಭಾಗೀಯ ವ್ಯವಸ್ಥಾಪಕರ ಕಚೇರಿ ಹಾಗೂ ಅವರ ನಿವಾಸ, ಕಾರ್ಯಾಗಾರ, ಡೀಸೆಲ್ ಶೆಡ್, ಜನರಲ್ ಸ್ಟೋರ್ಸ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಆದರೆ ಎಲ್ಲೆಡೆಯು ಆರ್‌ಪಿಎಫ್ ನಿಯೋಜಿಸುವುದು ಇಲಾಖೆಗೆ ಕಷ್ಟವಾಗುತ್ತಿದೆ. ಆರ್‌ಪಿಎಫ್ ಸಿಬ್ಬಂದಿ ಕೊರತೆ ಹಾಗೂ ಸೇವಾನಿವೃತ್ತಿ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದ್ದ ಸಿಬ್ಬಂದಿಯಲ್ಲೇ ಕೆಲವರು ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಹೊಸದಾಗಿ ನೇಮಕಾತಿ ಆಗಿಲ್ಲ. ಹೀಗಾಗಿ ಇಲಾಖೆಗೆ ಎಲ್ಲ ವಿಭಾಗಗಳಲ್ಲಿ ಆರ್‌ಪಿಎಫ್ ಸಿಬ್ಬಂದಿ ನಿಯೋಜಿಸುವುದು ದುಸ್ತರವಾಗುತ್ತಿದೆ. ಇದರಿಂದಾಗಿ ಖಾಸಗಿ ಎಜೆನ್ಸಿಗಳ ಮೂಲಕ ಭದ್ರತಾ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ನೈಋತ್ಯ ರೈಲ್ವೆ ವಲಯದ ಕಾರ್ಯಾಗಾರ, ಡೀಸೆಲ್ ಶೆಡ್, ಜನರಲ್ ಸ್ಟೋರ್ಸ್ ಸೇರಿದಂತೆ ಇನ್ನಿತರೆಡೆ ಎಷ್ಟೆಷ್ಟು ಪ್ರಮಾಣದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಅವಶ್ಯ ಇದೆ ಎಂಬುದರ ಕುರಿತು ವಲಯದ ಮಹಾ ಪ್ರಬಂಧಕರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಮ್ಮ ಕೆಳ ಹಂತದ ಅಧಿಕಾರಿಗಳಿಂದ ವರದಿ ಬಂದ ನಂತರ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಭದ್ರತಾ ವ್ಯವಸ್ಥೆಗೆ ಮಂಡಳಿಯಿಂದ ಅನುಮೋದನೆ ದೊರೆತ ಕೂಡಲೇ ವಲಯದಿಂದ ಖಾಸಗಿ ಭದ್ರತಾ ಎಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
-ಶಿವಶಂಕರ ಕಂಠಿ