Advertisement

ಜ.17ರಿಂದ ಖಾಸಗಿ ಶಾಲೆ-ಕಾಲೇಜು ಬಂದ್‌

10:46 AM Dec 22, 2019 | Team Udayavani |

ಹುಬ್ಬಳ್ಳಿ: ಖಾಸಗಿ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.17ರಿಂದ ಅನಿರ್ದಿಷ್ಟಾವಧಿಗೆ ಶಾಲೆ-ಕಾಲೇಜುಗಳನ್ನು ಬಂದ್‌ ಮಾಡಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

Advertisement

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳು ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಮ್ಮತ ನಿರ್ಣಯ ಕೈಗೊಳ್ಳಲಾಯಿತು. ಪ್ರತಿಭಟನಾ ಮೆರವಣಿಗೆ ಮೂಲಕ ಧಾರವಾಡದಲ್ಲಿ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಕಪ್ಪು ಪಟ್ಟಿ ಧರಿಸಿ, ಪತ್ರ ಚಳುವಳಿ ಹಾಗೂ ತಾಲೂಕು-ಜಿಲ್ಲಾ ಕೇಂದ್ರಗಳಲ್ಲಿ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ, ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲವಾದ್ದರಿಂದ ಹೋರಾಟಕ್ಕೆ ನಿರ್ಧರಿಸಲಾಗಿದೆ. 2002ರಲ್ಲಿ ನಡೆದ ಪ್ರತಿಭಟನೆಯ ಮಾದರಿಯಲ್ಲೇ ಹೋರಾಟ ಕೈಗೊಳ್ಳಲು ಸಮಗ್ರ ರೂಪರೇಷೆ ತಯಾರಿಸುವ ಕುರಿತು ಚರ್ಚಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಸಂಘಟನೆಗಳು ಬಲ ಕಳೆದುಕೊಳ್ಳುತ್ತಿರುವ ಪರಿಣಾಮ ಶಿಕ್ಷಕರ ಹೋರಾಟವನ್ನು ಸರಕಾರ ಹಗುರವಾಗಿ ಪರಿಗಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಒಗ್ಗಟ್ಟಾಗಿ ನಾಲ್ಕನೇ ಹಾಗೂ ಅಂತಿಮ ಹೋರಾಟಕ್ಕೆ ಸಜ್ಜುಗೊಳ್ಳಬೇಕು. ಎಲ್ಲಾ ಶಾಲೆ-ಕಾಲೇಜುಗಳನ್ನು ಸಂಪೂರ್ಣ ಬಂದ್‌ ಮಾಡಬೇಕು. ನಿಮ್ಮ ಭಾಗದ ಮಠಾಧೀಶರನ್ನು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟಕ್ಕೆ ಮುಂದಾಗಬೇಕು. ಜ.20ರಂದು ವಿಧಾನಸಭೆ ಅಧಿವೇಶನ ಆರಂಭವಾಗುವುದರಿಂದ ಈ ಹೋರಾಟವನ್ನು ಆಡಳಿತ ಮಂಡಳಿ-ಶಿಕ್ಷಕರು ಗಂಭೀರವಾಗಿ ತೆಗೆದುಕೊಂಡು ಸರಕಾರವನ್ನು ಎಚ್ಚರಿಸುವ ಕೆಲಸ ಆಗಬೇಕು ಎಂದರು.

ಈ ಹಿಂದೆ 2006ರಲ್ಲಿ 1987ರಿಂದ 1995ರವರೆಗಿನ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಾಗ ಯಾವುದೇ ಕಾನೂನು ತೊಂದರೆಯಾಗಿಲ್ಲ. ಹೊಸ ಶಾಲೆಗಳಿಗೆ ಅನುಮತಿ ನೀಡುವಾಗ ಅನುದಾನ ಕೇಳುವುದಿಲ್ಲ ಎಂದು ಆಡಳಿತ ಮಂಡಳಿಗಳಿಂದ ಬಾಂಡ್‌ ಪಡೆಯಲಿದೆ.

Advertisement

ಆದರೆ ಸರಕಾರ ಅನುದಾನ ನೀಡಬಾರದೆಂದು ಯಾವ ನ್ಯಾಯಾಲಯ ಹೇಳಿಲ್ಲ. 1995ರ ನಂತರದ ಶಾಲೆ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಬೇಕಾಗುವ ಅನುದಾನ ಕುರಿತು ಸರಕಾರ ಸುಳ್ಳು ಅಂಕಿ ಅಂಶಗಳನ್ನು ನೀಡಿದೆ. ಮಹಾರಾಷ್ಟ್ರದಲ್ಲಿರುವ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿದರೆ ಶಾಶ್ವತ ಪರಿಹಾರ ಒದಗಿಸಬಹುದಾಗಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳನ್ನು ಮುಚ್ಚುವುದಕ್ಕಾಗಿ ಇರುವುದೆಂಬ ಅನುಮಾನ ಅಧಿಕಾರಿಗಳ ಕಾರ್ಯವೈಖರಿಯಿಂದ ಮೂಡಿಸುತ್ತದೆ. ವೇತನ ಬಿಲ್‌ ಪಾವತಿಗೂ ಕೆಲ ಆಡಳಿತ ಮಂಡಳಿಗಳು ಲಂಚ ನೀಡುತ್ತಿವೆ. ಕೆಲವರು ಅಧಿಕಾರಿಗಳ ಏಜೆಂಟ್‌ರಂತೆ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಹಂದಿಗುಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಅನುದಾನ ರಹಿತ ಎನ್ನುವ ಪದವೇ ಮೂರ್ಖತನವಾಗಿದ್ದು. ಮೊದಲು ಇದನ್ನು ತೆಗೆದು ಹಾಕಬೇಕು. ಮಠಗಳು, ಸಂಘ-ಸಂಸ್ಥೆಗಳು ಭಿಕ್ಷೆ ಬೇಡಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿವೆ. ನಮ್ಮೆ ಬೇಡಿಕೆಗಳ ಬಗ್ಗೆ ಇಲ್ಲಿಯವರೆಗೆ ಶಾಂತಿಯುತ ಹೋರಾಟ ಮಾಡಿರುವುದು ಸಾಕು. ಮುಂದೆ ಏನಿದ್ದರೂ ತೀವ್ರ ಹೋರಾಟ. ಮುಂದಾಗುವ ಎಲ್ಲಾ ಪರಿಣಾಮಗಳಿಗೂ ಸರಕಾರವೇ ನೇರ ಹೊಣೆಯಾಗುತ್ತದೆ ಎಂದರು.

ಬಸವರಾಜ ಧಾರವಾಡ ಮಾತನಾಡಿದರು. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಸ್ವಾಮೀಜಿ, ಬೂದಿಹಾಳ ಪ್ರಭುಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್‌ಕೆರೂರ ಸಿದ್ಧಲಿಂಗ ಸ್ವಾಮೀಜಿ, ಕೊಣ್ಣೂರ ವಿಶ್ವಪ್ರಭು ಸ್ವಾಮೀಜಿ, ಬೀಳಗಿ ಚನ್ನಬಸವೇಶ್ವರ ಸ್ವಾಮೀಜಿ, ಬೀಳಗಿ ಶಿವಬಸವ ಸ್ವಾಮೀಜಿ, ಕೂಡಲಸಂಗಮ ಚನ್ನಬಸವಾನಂದ ಸ್ವಾಮೀಜಿ, ಎಂ.ಬಿ. ನಾಥು, ಜಿ.ಸಿ.ಶಿವಪ್ಪ, ಜಿ.ಆರ್‌. ಭಟ್ಟ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next