Advertisement

ಕಬ್ಬಿನಾಲೆ: ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್‌ ಕುಸಿತ

10:32 PM Jul 29, 2019 | Team Udayavani |

ಹೆಬ್ರಿ: ಕಬ್ಬಿನಾಲೆ ಗ್ರಾಮದಲ್ಲಿ ಖಾಸಗಿ ಮೊಬೈಲ್‌ ಕಂಪೆನಿಯ ಪೈಪ್‌ಲೈನ್‌ ಕಾಮಗಾರಿ ಸಂದರ್ಭ ಶಾಲಾ ಕಾಂಪೌಂಡಿನ ಹತ್ತಿರದಲ್ಲೇ ಭಾರೀ ಆಳದ ಅಗೆತ ಮಾಡಿದ ಪರಿಣಾಮ ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್‌ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಕಂಪೆನಿಯ ನಿರ್ಲಕ್ಷ
ಶಾಲೆಯ ಆವರಣಗೋಡೆಯ ಸಮೀಪ ಹೊಂಡಗಳನ್ನು ಮಾಡುತ್ತಿರುವಾಗಲೇ ಗೋಡೆ ಸ್ವಲ್ಪ ಕುಸಿತಕಂಡಿದ್ದು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಲ್ಲನ್ನು ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ ಮತ್ತೆ ಅಲ್ಲಿಯೇ ಹೊಂಡಗಳನ್ನು ತೋಡಿದ್ದರಿಂದ ಕಾಂಪೌಂಡ್‌ ಮತ್ತೆ ಸಂಪೂರ್ಣ ಕುಸಿತಗೊಂಡಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ಖಾಸಗಿ ಕಂಪೆನಿಯಾಗಲಿ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತವಾಗಲಿ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯ ಬದಿಯಲ್ಲಿ ಶಾಲೆ ಇರುವುದರಿಂದ ನಿತ್ಯ ವಾಹನ ಸಂಚಾರದಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಊರಿನವರು ಶ್ರಮದಾನದಿಂದ ಈ ಶಾಲೆಗೆ ಅಗಲವಾದ ಮೈದಾನ ಹಾಗೂ ಕಂಪೌಂಡ್‌ ನಿರ್ಮಾಣ ಮಾಡಿದ್ದರು.

ದುರಸ್ತಿಗಾಗಿ ಶಾಲೆಯಿಂದ ಮನವಿ
ಕಾಂಪೌಂಡ್‌ ದುರಸ್ತಿಗಾಗಿ ಶಾಲೆಯಿಂದ ಪಂಚಾಯತ್‌ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆದರೆ ಅದರ ದುರಸ್ತಿಗೆ ಬೇಕಾಗುವಷ್ಟು ಅನುದಾನ ಪಂಚಾಯತ್‌ನಿಂದ ಲಭ್ಯವಿಲ್ಲದ ಕಾರಣ ಪ್ರಕೃತಿ ವಿಕೋಪದ ಅಡಿಯಲ್ಲಿಯೇ ದುರಸ್ತಿ ಮಾಡಬೇಕಾಗುತ್ತದೆ.
-ಶಶಿಕಲಾ ಡಿ. ಪೂಜಾರಿ, ಅಧ್ಯಕ್ಷರು ಗ್ರಾ.ಪಂ. ಮುದ್ರಾಡಿ

ಬೇಜವಾಬ್ದಾರಿಯಿಂದ ಕಾಂಪೌಂಡ್‌ ಕುಸಿತ
ಖಾಸಗಿ ಕಂಪೆನಿಯವರು ಶಾಲಾ ಕಾಂಪೌಂಡ್‌ನ‌ ಹತ್ತಿರದಲ್ಲೇ ಅಗೆತ ಮಾಡುತ್ತಾರೆ ಎಂದು ಗೊತ್ತಿದ್ದರೂ ಶಾಲಾ ಸಿಬಂದಿ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಪಂಚಾಯತ್‌ಗಳಾಗಲೀ ಈ ಬಗ್ಗೆ ಮುತುವರ್ಜಿ ವಹಿಸಿ ಕಾಂಪೌಂಡ್‌ನಿಂದ ಸ್ವಲ್ಪ ದೂರದಲ್ಲಿ ಅಗೆಯುವಂತೆ ವಿನಂತಿಸಿದ್ದರೆ ಹೀಗಾಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆ ಹಾಗೂ ಮುಖಂಡರ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ.
-ಶ್ರೀಕರ ಭಾರಧ್ವಜ್‌ ಕಬ್ಬಿನಾಲೆ,
ಸಾಮಾಜಿಕ ಕಾರ್ಯಕರ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next