ಬೆಂಗಳೂರು: ನಗರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಇಚ್ಛೆಗೆ ಅನುಗುಣವಾಗಿ ಕೋವಿಡ್ ಸೋಂಕಿತರಿಗೆ ಶೇ.50 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಗಿನ ಮಾತುಕತೆಯ ನಂತರ ಕಂದಾಯ ಸಚಿವ ಆರ್. ಅಶೋಕ್ ಅವರು ಸುದ್ದಿಗಾರರೊಂದಿಗೆ ಈ ಮಾಹಿತಿಯನ್ನು ನೀಡಿದರು.
ಇಂದಿನ ಮಾತುಕತೆಯ ನಂತರ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಸೋಂಕಿತರಿಗಾಗಿ ಶೇ.50 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ಒಪ್ಪಿಗೆ ನೀಡಿದೆ. ಹಂತ ಹಂತವಾಗಿ ನೀಡಲಾಗುತ್ತದೆ. ಶೀಘ್ರವಾಗಿ ಅಂದರೆ ನಾಳೆಗೆ 750 ಹಾಸಿಗೆಗಳು ಹಸ್ತಾಂತರವಾಗಲಿದ್ದು, ಒಂದು ವಾರದ ಒಳಗೆ 2500 ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳನ್ನು ನೀಡಲಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ್ ಅವರ ನೇತೃತ್ವದಲ್ಲಿ ಐವರ ಸಮಿತಿಯನ್ನು ರಚಿಸಲಾಗಿದ್ದು, ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ಬೆಂಗಳೂರಿನ ಉಳಿದ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಯುತ್ತೇವೆ. ವ್ಯಕ್ತಿಗೆ ಸೋಂಕು ಕಂಡುಬಂದ ಎಂಟು ಗಂಟೆಯ ಒಳಗೆ ಚಿಕಿತ್ಸೆ ನೀಡುವಂತೆ ಆಗಬೇಕು. ಅದಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.