Advertisement

ಸೌದಿ ಅರೇಬಿಯಾ, ಯುಎಇಯಿಂದ ಖಾಸಗಿ ವಿಮಾನ ವ್ಯವಸ್ಥೆ

10:15 AM Jun 01, 2020 | mahesh |

ಮಂಗಳೂರು: ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಕೊರೊನಾ ಪ್ರಯುಕ್ತ ಸಂತ್ರಸ್ತರಾಗಿರುವ ಕರ್ನಾಟಕ ಕರಾವಳಿಯ ಜನರನ್ನು ಭಾರತಕ್ಕೆ ಕರೆ ತರಲು ಸರಕಾರದ ವತಿಯಿಂದ ಸಾಕಷ್ಟು ವ್ಯವಸ್ಥೆ ಇಲ್ಲದ ಕಾರಣ ಖಾಸಗಿ (ಚಾರ್ಟರ್‌) ವಿಮಾನದ ಮೂಲಕ ಕರೆ ತರಲು ಪ್ರಯತ್ನಗಳು ನಡೆದಿವೆ.

Advertisement

ಸೌದಿ ಅರೇಬಿಯಾದಿಂದ 167 ಜನರನ್ನು ಮಂಗಳೂರಿಗೆ ಕರೆ ತರಲು ಸೌದಿಯಲ್ಲಿರುವ ಮಂಗಳೂರಿನ ಇಬ್ಬರು ಉದ್ಯಮಿಗಳು ಸಿದ್ಧತೆ ನಡೆಸಿದ್ದು, ವಿಮಾನ ಯಾನಕ್ಕೆ ಕೇಂದ್ರ ಸರಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಸಾದ್‌ ಅಲ್‌ ಖತಾನಿ ಕಾಂಟ್ರಾಕ್ಟಿಂಗ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಲ್ತಾಫ್‌ ಉಳ್ಳಾಲ್‌ ಮತ್ತು ಸಿಇಒ ಬಶೀರ್‌ ಸಾಗರ್‌ ಅವರು ತಮ್ಮದೇ ಖರ್ಚಿನಲ್ಲಿ 167 ಮಂದಿಯನ್ನು ಕರೆ ತರಲು ಖಾಸಗಿ ವಿಮಾನವನ್ನು ಈಗಾಗಲೇ ಬುಕ್‌ ಮಾಡಿದ್ದಾರೆ. ಸೌದಿ ಅರೇಬಿಯಾದಿಂದ ವಂದೇ ಭಾರತ್‌ಮಿಶನ್‌ನಡಿ ಕರ್ನಾಟಕಕ್ಕೆ ವಿಮಾನ ವ್ಯವಸ್ಥೆ ಮಾಡದಿರುವ ಕಾರಣ ತಾವು ಈ ವ್ಯವಸ್ಥೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರತಿ ಪ್ರಯಾಣಿಕನಿಗೆ 20,000 ರೂ. ಟಿಕೆಟ್‌ ದರದಂತೆ ಒಟ್ಟು 45 ಲಕ್ಷ ರೂ. ಇದಕ್ಕಾಗಿ ಖರ್ಚು ತಗಲುತ್ತದೆ. ಈ ಮೊತ್ತವನ್ನು ಸಂಪೂರ್ಣವಾಗಿ ಈ ಇಬ್ಬರು ಉದ್ಯಮಿಗಳು ಭರಿಸಲಿದ್ದಾರೆ. ಇದೇ ವೇಳೆ ಅನಿವಾಸಿ ಉದ್ಯಮಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ತನ್ನ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್‌ ಸಂಸ್ಥೆಯ ಉದ್ಯೋಗಿಗಳನ್ನು ಸ್ವದೇಶಕ್ಕೆ ಕರೆ ತರಲು ಯುಎಇಯಿಂದ ಮಂಗಳೂರಿಗೆ ಸ್ಪೈಸ್‌ ಜೆಟ್‌ ಸಂಸ್ಥೆಯ ಚಾರ್ಟರ್‌ವಿಮಾನದ ವ್ಯವಸ್ಥೆ ಮಾಡಿದ್ದು, ಅದು ಜೂನ್‌ 1 ರಂದು ಮಂಗಳೂರಿಗೆ ಬರುವ ನಿರೀಕ್ಷೆ ಇದೆ.

ಈ ವಿಮಾನದಲ್ಲಿ ಫಾರ್ಚೂನ್‌ ಸಂಸ್ಥೆಯ ಹೊಟೇಲ್‌ ಉದ್ಯೋಗಿಗಳಲ್ಲದೆ ಬೇರೆ ಕೆಲವು ಹೊಟೇಲ್‌ಗ‌ಳ ಉದ್ಯೋಗಿಗಳೂ ಪ್ರಯಾಣಿಸುವ ಸಾಧ್ಯತೆ ಇದೆ. ಅವರೆಲ್ಲರ ಪ್ರಯಾಣ ವೆಚ್ಚವನ್ನು ಪ್ರವೀಣ್‌ ಶೆಟ್ಟಿ ಅವರೇ ಭರಿಸಲಿ ದ್ದಾರೆ. ಈ ವಿಮಾನ ಹಾರಾಟದ ಬಗ್ಗೆ ದುಬಾೖ ಕಾನ್ಸುಲೇಟ್‌ ಜನರಲ್‌ ಮತ್ತು ಭಾರತ ಸರಕಾರದ ಅನುಮತಿಯನ್ನು ಪಡೆಯಲಾಗಿದೆ ಎಂದು ಪ್ರವೀಣ್‌ ಶೆಟ್ಟಿ ಅವರು ಸಾಮಾಜಿಕ ಜಾಲ ತಾಣದ ಮೂಲಕ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next