ಬಾಗಲಕೋಟೆ: ಕೋಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಹಾಗೂ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವ ಕಾನೂನು ರೂಪಿಸುವಂತೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ವೈದ್ಯರು, 24 ಗಂಟೆಗಳ ಮುಷ್ಕರ ನಡೆಸಿದ್ದು, ಚಿಕಿತ್ಸೆ ದೊರೆಯದೇ ಕೆರೂರಿನ ವ್ಯಕ್ತಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ನಗರ ಹಾಗೂ ಜಿಲ್ಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಎಲ್ಲಾ ಆಸ್ಪತ್ರೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಹೊರ ರೋಗಿಗಳ ಚಿಕಿತ್ಸೆ ವಿಭಾಗ ಬಂದ್ ಮಾಡಿದ್ದವು. ತುರ್ತು ವಿಭಾಗ ಹಾಗೂ ಒಳ ರೋಗಿಗಳ ಚಿಕಿತ್ಸೆ ಲಭ್ಯವಿತ್ತಾದರೂ ಅದು ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎನ್ನಲಾಗಿದೆ.
ಜ್ವರ-ಅಸ್ತಮಾ ರೋಗದಿಂದ ಬಳಲುತ್ತಿದ್ದ ಕೆರೂರಿನ ದಾವಲಸಾಬ ಕೊಣ್ಣೂರ ಎಂಬ ವ್ಯಕ್ತಿ, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದು, ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟರು. ಕೊಣ್ಣೂರ ಅವರ ಸಾವಿಗೆ ವೈದ್ಯರ ಮುಷ್ಕರವೇ ಕಾರಣ ಎಂದು ಕುಟುಂಬದವರು ಆರೋಪಿಸಿದರು.
ಶಾಂತಿ ನಡಿಗೆ: ಬೆಳಗ್ಗೆಯಿಂದ ವೈದ್ಯಕೀಯ ಸೇವೆ ನೀಡದೇ ಮುಷ್ಕರ ನಡೆಸಿದ ವೈದ್ಯರು, ಸಂಜೆ ನಗರದ ವಲ್ಲಭಬಾಯಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಶಾಂತಿ ನಡಿಗೆ ನಡೆಸಿದರು. ಬಳಿಕ ತಲೆಗೆ ಬಿಳಿ-ಕೆಂಪು ಬಣ್ಣದ ವಸ್ತ್ರ, ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಖಾಸಗಿ ವೈದ್ಯರು ನಿರ್ಭಯವಾಗಿ ರೋಗಿಗಳ ಸೇವೆ ಮಾಡಲು ಮಾದರಿ ಕೇಂದ್ರೀಯ ಆರೋಗ್ಯ ಸುರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷೆ ಡಾ| ಜಯಶ್ರೀ ತೆಲಸಂಗ, ಕಾರ್ಯದರ್ಶಿ ಜ್ಯೋತಿ ಪಾಟೀಲ, ಡಾ| ದೇವರಾಜ ಪಾಟೀಲ, ಡಾ| ಬಾಬುರಾಜೇಂದ್ರ ನಾಯಕ, ಡಾ| ಎಚ್.ಆರ್. ಕಟ್ಟಿ, ಡಾ| ಕವಿತಾ ಕಟ್ಟಿ, ಡಾ| ಸುಭಾಸ ಪಾಟೀಲ, ಡಾ| ಶಂಕರ ಪಾಟೀಲ, ಡಾ| ಕಿರಣ ಕಲಬುರಗಿ, ಡಾ| ಗಿರೀಶ ಮೇಟಿ, ಡಾ| ಕ್ಷಮಿತಾ ಪಾಲ್ಗೊಂಡಿದ್ದರು.