ಮಹಾನಗರ: ಗೃಹ ಬಳಕೆ ವಸ್ತುಗಳು, ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಕಾಲ ಸನ್ನಿಹಿತವಾಗಿದೆ. ಏಕೆಂದರೆ, ಕರಾವಳಿ ಭಾಗದಲ್ಲಿ ಸಂಚರಿಸುವ ಖಾಸಗಿ ಸರ್ವಿಸ್ ಮತ್ತು ಸಿಟಿ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡುವಂತೆ ಇದೀಗ ಬಸ್ ಮಾಲಕರ ಒಕ್ಕೂಟವು ರಾಜ್ಯ ಸರಕಾರದ ಮೊರೆ ಹೋಗಿದೆ.
ಕೊರೊನಾ ಪರಿಣಾಮ ಬಸ್ ಮಾಲಕರು ಸಂಕಷ್ಟಲ್ಲಿದ್ದು, ವಾಹನ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಒಂದೆಡೆ, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ದೈನಂದಿನ ಖರ್ಚು-ವೆಚ್ಚ ನಿರ್ವಹಣೆಯು ಬಸ್ ಮಾಲಕರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಹೀಗಾಗಿ, ಮತ್ತೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮಾಡಬೇಕೆಂದು ಮನವಿ ಮಾಡಲಾಗಿದೆ. ಒಂದು ವೇಳೆ, ಬಸ್ ದರ ಏರಿಕೆಗೆ ಸರಕಾರದ ಸ್ಪಂದನೆ ದೊರೆತರೆ ಈಗಾಗಲೇ ಬೆಲೆಯೇರಿಕೆ ಬಿಸಿಯಿಂದ ಹೈರಾಣಗೊಂಡಿರುವ ಜನರ ಮೇಲೆ ಪ್ರಯಾಣ ದರ ಹೆಚ್ಚಳದ ಹೊರೆಯೂ ಬೀಳುವ ಸಾಧ್ಯತೆಯಿದೆ.
ಕೊರೊನಾ ಸಂಕಷ್ಟ ಸಹಿತ ನಾನಾ ಕಾರಣದಿಂದಾಗಿ 2020ರಲ್ಲಿ ಖಾಸಗಿ-ಸಿಟಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಇದೀಗ ಮತ್ತೆ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ರಾಜ್ಯ ಸರಕಾರ ಇದಕ್ಕೆ ಒಪ್ಪಿಕೆ ನೀಡಿದರೆ ಶೀಘ್ರದಲ್ಲೇ ಈ ಬಗ್ಗೆ ಸಾರಿಗೆ ಇಲಾಖೆ ಅಧೀನದಲ್ಲಿ ಬಸ್ ಮಾಲಕರ ಸಂಘದ ಸಭೆ ನಡೆಯುವ ಸಾಧ್ಯತೆಯಿದೆ. ಆ ಸಭೆ ಬಳಿಕ ದರ ಏರಿಕೆ ನಿಗದಿಯಾದರೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸುವುದರೊಂದಿಗೆ ಪರಿಷ್ಕೃತ ದರ ಜಾರಿಗೆ ಬರಲಿದೆ.
ರಾಜ್ಯ ಸರಕಾರವು 2013ರಿಂದ 2020ರ ವರೆಗೆ ಸರ್ವಿಸ್ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಿಲ್ಲ. ಡೀಸೆಲ್ ಮೇಲಿನ ಸೆಸ್ ದರ ಆಧಾರದಲ್ಲಿ 2018ರ ಎಪ್ರಿಲ್ ತಿಂಗಳಿನಲ್ಲಿ ನಗ ರ ದಲ್ಲಿ ಓಡಾಡುವ ಸಿಟಿ ಬಸ್ ದರವನ್ನು ಮೊದಲ ಸ್ಟೇಜ್‌ಗೆ ಒಂದು ರೂ. ನಂತೆ ಹೆಚ್ಚಳ ಮಾಡಲಾಗಿತ್ತು. ಅದೇ ರೀತಿ ಟೋಲ್ ದರ ಹೆಚ್ಚಳವಾದ ಕಾರಣಕ್ಕೆ ಟೋಲ್ ಮುಖೇನ ಸಾಗುವ ಸರ್ವಿಸ್ ಬಸ್ ದರವನ್ನು ಈ ಹಿಂದೆ ಪ್ರಥಮ ಸ್ಟೇಜ್‌ಗೆ ಒಂದು ರೂ. ಹೆಚ್ಚಳ ಮಾಡಲಾಗಿತ್ತು. ಇನ್ನು 2020ರಲ್ಲಿ ಬಸ್ ಪ್ರಯಾಣ ದರ ಮತ್ತೆ ಏರಿಕೆ ಕಂಡಿತ್ತು. ಈ ಕುರಿತು ರಾಜ್ಯ ಸರಕಾರ ಈಗಾಗಲೇ ಅಧಿಸೂಚನೆಯನ್ನೂ ಹೊರಡಿಸಿದೆ.
ದರ ಹೆಚ್ಚಳ ಪ್ರಸ್ತಾವ ಕುರಿತಂತೆ ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ “2020ರಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವಾಗ ಒಂದು ಲೀಟರ್ ಡಿಸೇಲ್‌ಗೆ 64 ರೂ. ಇತ್ತು. ಈಗ 83 ರೂ. ಇದೆ. ಇಂಧನ ದರ ಏರಿಕೆಯಿಂದ ಬಸ್ ಮಾಲಕರಿಗೆ ನಷ್ಟ ಉಂಟಾಗುತ್ತಿದ್ದು, ಖಾಸಗಿ ವಲಯದಲ್ಲಿ ಸಾರಿಗೆ ಉದ್ಯಮ ಉಳಿಯಲು ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ. ಕೆಎಸ್ಸಾರ್ಟಿಸಿ ಬಸ್‌ಗಳ ನಷ್ಟ ಸರಿದೂಗಿಸಲು ರಾಜ್ಯ ಸರಕಾರ ನೆರವಾಗುತ್ತದೆ. ಆದರೆ ನಮ್ಮ ಪರಿಸ್ಥಿತಿ ಕೇಳುವವರಿಲ್ಲ’ ಎನ್ನುತ್ತಾರೆ.
ರಸ್ತೆ ತೆರಿಗೆಯಷ್ಟೇ ಟೋಲ್ ದರ !
“ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದರೆ ಹೊಸ ಬಸ್ ಖರೀದಿ ಮಾಡುವವರ ಸಂಖ್ಯೆ ಇಳಿಕೆಯಾಗಿದೆ. ರಸ್ತೆ ತೆರಿಗೆ ಕೂಡ ಏರಿಕೆಯಾಗಿದ್ದು, ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗೆ ಮೂರು ತಿಂಗಳಿಗೆ 50,000 ರೂ. ರಸ್ತೆ ತೆರಿಗೆ ಪಾವತಿ ಮಾಡಬೇಕು. ಅದೇ ರೀತಿ, ಟೋಲ್ ದರ ಕೂಡ ಹೆಚ್ಚಳವಾಗಿದ್ದು, ಮಂಗಳೂರು-ಮಣಿಪಾಲ ನಡುವಣ ಮೂರು ಬಾರಿಯ ಟ್ರಿಪ್‌ಗೆ ಸುಮಾರು 1,200 ಟೋಲ್ ದರ ಪಾವತಿ ಮಾಡಬೇಕಾಗುತ್ತದೆ. ರಸ್ತೆ ತೆರಿಗೆಗಿಂತ ಟೋಲ್ ದರವೇ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಬಸ್ ಮಾಲಕರು.
ಸರಕಾರಕ್ಕೆ ಪ್ರಸ್ತಾವ
ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಪ್ರತೀ ಟ್ರಿಪ್‌ನಲ್ಲಿ ಸರಾಸರಿ 40ರಿಂದ 50 ಮಂದಿ ಪ್ರಯಾಣಿಕರು ಇರದಿದ್ದರೆ ಅಪಾರ ನಷ್ಟ ಉಂಟಾಗುತ್ತದೆ. ಸದ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೇ ವಿನಾ ಮಧ್ಯಾಹ್ನ ಖಾಲಿ ಬಸ್ ಸಂಚರಿಸುತ್ತಿದೆ. ಹೀಗಿದ್ದಾಗ ದರ ಪರಿಷ್ಕರಣೆ ಅನಿವಾರ್ಯ. ಈ ಕಾರಣಕ್ಕೆ ದರ ಏರಿಕೆ ಕುರಿತಂತೆ ರಾಜ್ಯ ಸರಕಾರಕ್ಕೆ ಕೆಲವು ದಿನಗಳ ಹಿಂದೆ ಪ್ರಸ್ತಾವ ಸಲ್ಲಿಸಲಾಗಿದೆ.
– ರಾಜವರ್ಮ ಬಲ್ಲಾಳ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ