Advertisement

ಖಾಸಗಿ ಬಸ್‌ ಪರವಾನಿಗೆ ಸ್ಥಗಿತ ನಿರ್ಧಾರ: ವಿರೋಧ

12:30 AM Mar 10, 2019 | |

ಮಂಗಳೂರು: ರಾಜ್ಯದಲ್ಲಿ ಎಲ್ಲ ಸಾರಿಗೆ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಿ ಸರಕಾರ ಹೊರಡಿಸಿರುವ ಆದೇಶ ಮತ್ತು ರಾಜ್ಯದಲ್ಲಿ ಖಾಸಗಿ ಬಸ್‌ಗಳಿಗೆ ಹೊಸದಾಗಿ ಪರ್ಮಿಟ್‌ ನೀಡದಿರುವ ನಿರ್ಧಾರವನ್ನು ರಾಷ್ಟ್ರೀಯ ಬಸ್‌ ಹಾಗೂ ಕಾರು ನಿರ್ವಾಹಕರ ಒಕ್ಕೂಟ (ಬೊಕಿ) ವಿರೋಧಿಸಿದೆ.

Advertisement

ಒಕ್ಕೂಟದ ಅಧ್ಯಕ್ಷ ಪ್ರಸನ್ನ ಪಟವರ್ಧನ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವ ಪರಿಕಲ್ಪನೆ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯ ಸರಕಾರ ಎಲ್ಲ ಸಾರಿಗೆ ಮಾರ್ಗಗಳನ್ನು ರಾಷ್ಟ್ರೀಕರಣ ಮಾಡಹೊರಟಿರುವುದು ಆಶ್ಚರ್ಯವುಂಟು ಮಾಡಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಸ್ಪರ್ಧೆ ಇದ್ದಾಗ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಸಿಗಲು ಸಾಧ್ಯವಾಗುತ್ತದೆ ಎಂದರು.

ಉತ್ತರ ಕರ್ನಾಟಕ ಸೇರಿದಂತೆ ಕೆಲವು ಭಾಗಗಳ ಮಾರ್ಗಗಳಲ್ಲಿ ಸರಕಾರಿ ಬಸ್‌ಗಳ ಏಕಸ್ವಾಮ್ಯ ಇದೆ. ಆದರೆ ಅವು ನಷ್ಟದಲ್ಲಿ ಸಾಗುತ್ತಿವೆ ಎಂಬುದನ್ನು ಗಮನಿಸಬೇಕಾಗಿದೆ. ಸರಕಾರಿ ಬಸ್‌ಗಳಿಗೆ ಇಲಾಖೆ ಕೆಲವು ರಿಯಾಯಿತಿಗಳನ್ನು ನೀಡಲಾಗುತ್ತದೆ. ಆದರೆ ಖಾಸಗಿ ಬಸ್‌ಗಳಿಗೆ ಇದ್ಯಾವುದನ್ನೂ ನೀಡುತ್ತಿಲ್ಲ. ಬದಲಿಗೆ ಹೆಚ್ಚುವರಿಯಾಗಿ ಆನೇಕ ನಿಯಮಗಳನ್ನು ಹೇರಲಾಗುತ್ತದೆ ಎಂದವರು ಹೇಳಿದರು.

ಜು.25-17ರಂದು ಸಿಡ್ಕೊ
ನವಿಮಂಬಯಿಯ ಸಿಡ್ಕೊ ಕನ್ವೆನ್ಶನ್‌ ಸೆಂಟರ್‌ನಲ್ಲಿ ಜು. 25ರಿಂದ 27ರ ವರೆಗೆ ಬಸ್‌ ಹಾಗೂ ಕಾರು ಟ್ರಾವೆಲ್‌ ಶೋ ಪ್ರವಾಸ್‌ ಎರಡನೇ ಬಾರಿಗೆ ಆಯೋಜನೆಗೊಳ್ಳುತ್ತಿದೆ. ದೇಶಾದ್ಯಂತದ ಬಸ್‌ ಹಾಗೂ ಕಾರು ನಿರ್ವಾಹಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಚಾರಸಂಕಿರಣಗಳನ್ನು ಹಮ್ಮಿಕೊಂಡಿದ್ದು, ಬಸ್‌ ನಿರ್ವಾಹಕರು ಹಾಗೂ ಕಾರು ನಿರ್ವಾಹಕರು ಎದುರಿಸುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಚರ್ಚೆಯಾಗುವ ಒಟ್ಟು ವಿಚಾರಗಳನ್ನು ಕ್ರೋಢೀಕರಿಸಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವಶ್ಯ ಪರಿಹಾರ ಕ್ರಮಗಳನ್ನು ಒಳಗೊಂಡ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದವರು ತಿಳಿಸಿದರು.

ಪ್ರಸ್ತುತ ಸರಕಾರಗಳು ಸಾರಿಗೆ ಸುಧಾರಣೆಗೆ ಒತ್ತು ನೀಡುತ್ತಿವೆ. ಇದರ ಬದಲಿಗೆ ಪ್ರಯಾಣಿಕರನ್ನು ಕೇಂದ್ರೀಕರಿಸಿಕೊಂಡು ಸುಧಾರಣೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ರೈಲ್ವೇ, ವಿಮಾನ, ಬಸ್‌ ಸಂಚಾರಗಳನ್ನು ಒಳಗೊಂಡು ಒಂದು ಸಮಗ್ರ ವ್ಯವಸ್ಥೆ ರೂಪುಗೊಳ್ಳುವುದು ಅವಶ್ಯ. ಪ್ರಸ್ತುತ ನಮ್ಮಲ್ಲಿ ರೈಲ್ವೇ, ಬಸ್‌, ವಿಮಾನ ಸಾರಿಗೆ ವ್ಯವಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾರ್ಯಾಚರಿಸುತ್ತಿವೆ. ರೈಲ್ವೇ, ವಿಮಾನ ನಿಲ್ದಾಣಗಳಿಂದ ನಗರಗಳಿಗೆ ಬಸ್‌ ಸಂಪರ್ಕ ಇರುವುದಿಲ್ಲ. ಆದರೆ ವಿದೇಶಗಳಲ್ಲಿ ಇವು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂದರು. ಒಕ್ಕೂಟದ ಚೇರ್‌ಮನ್‌ ಕೆ.ಟಿ. ರಾಜಶೇಖರ್‌, ಪ್ರಧಾನ ಕಾರ್ಯದರ್ಶಿ ಎ. ಅಫ್ಜಲ್‌ ಉಪಸ್ಥಿತರಿದ್ದರು.

Advertisement

ಮಾಹಿತಿ ಸಭೆ
ಪ್ರವಾಸ್‌ ಬಗ್ಗೆ ಮಂಗಳೂರಿನ ಮರವೂರಿನಲ್ಲಿ ಮಾಹಿತಿ ಸಭೆ ಶುಕ್ರವಾರ ಜರಗಿತು. ರಾಷ್ಟ್ರೀಯ ಬಸ್‌ ಹಾಗೂ ಕಾರು ನಿರ್ವಾಹಕರ ಒಕ್ಕೂಟ (ಬೊಕಿ) ಅಧ್ಯಕ್ಷ ಪ್ರಸನ್ನ ಪಟವರ್ಧನ್‌, ಚೆಯರ್‌ಮ್ಯಾನ್‌ ಕೆ.ಟಿ. ರಾಜಶೇಖರ್‌, ಪ್ರ. ಕಾರ್ಯದರ್ಶಿ ಎ. ಅಫ್ಜಲ್‌, ಒಕ್ಕೂಟದ ಪದಾಧಿಕಾರಿಗಳು, ರಾಜ್ಯ ಬಸ್‌ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಮಾಜಿ ಸಚಿವ ಅಭಯಚಂದ್ರ, ಸದಾನಂದ ಛಾತ್ರ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಉಪಸ್ಥಿತರಿದ್ದರು. ಖಾಸಗಿ ಬಸ್‌ ಮಾಲಕರು, ಕಾರು ನಿರ್ವಾಹಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next