ಕಲಬುರಗಿ: ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ನಗರದ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪೈಪೋಟಿ ಮಾಡುವ ನಿಟ್ಟಿನಲ್ಲಿ ಉಂಟಾಗಿರುವ ತಾರತಮ್ಯ ಧೋರಣೆ ತೊಲಗಿಸಿ ಹೆಚ್ಚಿನ ಕೃಪಾಂಕಕ್ಕಾಗಿ ಆಗ್ರಹಿಸಿ ವಿಧಾನಸಭೆಯಲ್ಲಿ ಕೂಡಲೇ ಖಾಸಗಿ ಮಸೂದೆ ಮಂಡಿಸುವುದಾಗಿ ಆಳಂದ ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಿಂದೆ ಉಳಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಸರಿಯಾಗಿ ಶಿಕ್ಷಣವಾಗಲಿ, ಸಮಯಕ್ಕೆ ಉದ್ಯೋಗವಾಗಲಿ ದೊರೆಯುವುದಿಲ್ಲ. ಇದರಿಂದಾಗಿ ಈ ವ್ಯತ್ಯಾಸ ಉಂಟಾಗಿದೆ.
ಈಗಿರುವ ಗ್ರಾಮೀಣ ಕೃಪಾಂಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಉದ್ಯೋಗ ಹಾಗೂ ಶೈಕ್ಷಣಿಕ ಲಾಭ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಲಾಗುವುದು. ಇದರಿಂದ ವ್ಯಾಪಕ ಚರ್ಚೆ ನಡೆದು ಸರಕಾರ ಅಂತಿಮ ನಿಣರ್ಯ ಕೈಗೊಳ್ಳವಂತಾದರೆ ಸಾಕು ಎಂದರು.
ಜೀವನದ ಸಂಧ್ಯಾಕಾಲದಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವಿಧವೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿಯನ್ನು ರೈತರಿಗೂ ನೀಡಬೇಕು ಎನ್ನುವುದನ್ನು ಮಸೂದೆಯಲ್ಲಿ ಮಂಡಿಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗಬೇಕು. ಅದು ಸರಕಾರಕ್ಕೆ ತಲುಪಿ ಆಶಾದಾಯಕ ಫಲಿತಾಂಶ ಹೊರಬರಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ಮೇ 4ರಂದು ಸಭೆ: ಬೆಂಗಳೂರಿನ ಶಾಸಕರ ಭವನದಲ್ಲಿ ಮೇ 4ರಂದು ಮಾಜಿ ಸ್ಪೀಕರ ಕೃಷ್ಣ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಎಸ್.ಆರ್. ಹಿರೇಮಠ, ಡಾ| ನಿರಂಜನ ಆರಾಧ್ಯ, ಮಾಜಿ ಸಚಿವ ಎಸ್.ಕೆ. ಕಾಂತಾ ಅಲ್ಲದೆ, ಇತರೆ ಸಮಾನ ಮನಸ್ಕರ ಸಭೆ ನಡೆಸಲಾಗುವುದು. ಗಣೇಶ ಪಾಟೀಲ, ಉಸ್ಮಾನ ಡಾಂಗೆ, ವಿಠuಲ ಸುದ್ದಿಗೋಷ್ಠಿಯಲ್ಲಿದ್ದರು.