ಬೆಂಗಳೂರು: ಗುಜರಾತ್ ಮೂಲದ ವಿದ್ಯಾರ್ಥಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 4.5 ಲಕ್ಷ ರೂ. ಪಡೆದು ವಂಚಿಸಿದ್ದ ಮೂವರು ವಂಚಕರನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸಂದೀಪ್ ಕುಮಾರ್ ಹಾಗೂ ವಿಕಾಸ್ ಕುಮಾರ್, ಬಿಹಾರದ ರಜನೀಶ್ ಬಂಧಿತರು. ಆರೋಪಿಗಳಿಂದ ದಂಧೆಗೆ ಬಳಕೆ ಮಾಡುತ್ತಿದ್ದ ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿದ್ದು, ಇವರ ಹಿಂದೆ ದೊಡ್ಡ ಜಾಲವೇ ಅಡಗಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ರಾಜ್ಯದಲ್ಲಿ ಮೆಡಿಕಲ್ ಸೀಟು ಹುಡುಕುತ್ತಿರುವ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ವಂಚಿಸಿದ್ದಾರೆ. ಗುಜರಾತ್ ಮೂಲದ ವಿಕ್ರಂರಾಯ್ ಅವರನ್ನು ಆನ್‌ಲೈನ್ ಮೂಲಕ ಪರಿಚಯಿಸಿಕೊಂಡಿದ್ದ ಆರೋಪಿಗಳು, ಅವರ ಮಗ ವೈಷ್ಣವ ಸಿಂಗ್‌ಗೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿದ್ದ.
ಸೀಟ್‌ಗೆ ಪ್ರತಿಯಾಗಿ ಆ.25ರಂದು 4.5 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಅದೇ ರೀತಿ ಆ.29ರಂದು ವಿಕ್ರಂ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಆರೋಪಿಗಳು, ಹೋಟೆಲ್ ಒಂದರಲ್ಲಿ ಅವರನ್ನು ಭೇಟಿಯಾಗಿ, ಮತ್ತೆ 50 ಸಾವಿರ ರೂ. ಪಡೆದುಕೊಂಡಿದ್ದರು.
ಹಣ ತೆಗೆದುಕೊಂಡ ನಂತರ, ಸ್ವಲ್ಪ ಸಮಯ ಬಿಟ್ಟು ಬರುತ್ತೇವೆ ಎಂದು ತಿಳಿಸಿ ಹೋಟೆಲ್‌ನಿಂದ ಹೊರಗೆ ಹೋದ ಆರೋಪಿಗಳು ಮತ್ತೆ ವಾಪಸ್ ಬಂದಿರಲಿಲ್ಲ. ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ ಎಂದು ಬಂದಿದ್ದರಿಂದ ಮೋಸ ಹೋಗಿರುವುದನ್ನು ಅರಿತ ವಿಕ್ರಂ ರಾಯ್, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯೂಶನ್‌ನಿಂದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ!: ಮೆಡಿಕಲ್ ಸೀಟು ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿರುವ ಜಾಲವೇ ಆರೋಪಿಗಳ ಹಿಂದಿದ್ದು, ಆರೋಪಿಗಳು ತಮಗೆ ಅಗತ್ಯವಿರುವ ವಿದ್ಯಾರ್ಥಿಗಳ ಮಾಹಿತಿಯನ್ನು, ಈ ಜಾಲದ ಮೂಲಕ ಟ್ಯೂಶನ್ ಕೇಂದ್ರಗಳಿಂದ ಪಡೆದುಕೊಳ್ಳುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಬೆಂಗಳೂರು ಸೇರಿ ಇತರೆಡೆಯ ಟ್ಯೂಶನ್ ಸೆಂಟರ್‌ಗಳಲ್ಲಿ ಅಭ್ಯಾಸ ಮಾಡಿ, ಮೆಡಿಕಲ್ ಮಾಡುವ ಅಭಿಲಾಷೆ ಹೊಂದಿರುವ ವಿದ್ಯಾರ್ಥಿಗಳ ವಿವರಗಳನ್ನು ಸಂಗ್ರಹಿಸಿ, ಬಳಿಕ ಪೋನ್ ಮೂಲಕ ಸಂಪರ್ಕಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮತ್ತೂಂದೆಡೆ ಕಬ್ಬನ್ ಪಾರ್ಕ್ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜು ತಿಳಿಸಿದ್ದಾರೆ.