Advertisement

ಮಂಗಳೂರು ಜೈಲಿನಲ್ಲಿ  ಕೈದಿಗಳ ಪಾರ್ಟಿ !

07:40 AM Jul 20, 2017 | Team Udayavani |

ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಎಳೆ ಎಳೆಯಾಗಿ ಬೆಳಕಿಗೆ ಬರುತ್ತಿದ್ದಂತೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲೂ ವಿಚಾರಣಾಧೀನ ಕೈದಿಗಳ ಗುಂಪೊಂದು ಸಾಮೂಹಿಕವಾಗಿ ಮಾಂಸದೂಟ ಸವಿಯುವ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಕೈದಿಗಳ ಭೇಟಿಗಾಗಿ ಬರುತ್ತಿರುವ ಅವರ ಸಂಬಂಧಿಕರು ಮತ್ತು ಹಿತೈಷಿಗಳು ಮೀನು, ಮಾಂಸದೂಟ, ಬಿರಿಯಾನಿ ಇತ್ಯಾದಿಗಳನ್ನು ಜೈಲು ಸಿಬಂದಿ ಮೂಲಕ ಕೈದಿಗಳಿಗೆ ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ವೈರಲ್‌ ಆಗಿರುವ ಚಿತ್ರ ಇದನ್ನು ಪುಷ್ಟೀಕರಿಸುತ್ತಿದೆ.

Advertisement

ಇಲ್ಲಿ ಎಲ್ಲವೂ ಲಭ್ಯ !: ಕೈದಿಗಳಿಗೆ ಪೂರೈಸುವ ಆಹಾರದ ಪೊಟ್ಟಣದಲ್ಲಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳು, ಮೊಬೈಲ್‌ ಫೋನ್‌, ಮೊಬೈಲ್‌ ಚಾರ್ಜರ್‌, ಚಾಕು, ಬ್ಲೇಡ್‌ ಮತ್ತಿತರ ಮಾರಕಾಯುಧಗಳೂ ರವಾನೆಯಾಗುತ್ತಿದ್ದ ವಿದ್ಯಮಾನ ಈ ಹಿಂದೆ ನಡೆದಿದ್ದು, ಇದರಿಂದ ಜೈಲಿನಲ್ಲಿ ಕೈದಿಗಳ ಮಾರಾಮಾರಿ ಮಾತ್ರವಲ್ಲದೆ ಇಬ್ಬರ ಕೊಲೆಯೂ ಸಂಭ ವಿಸಿತ್ತು. ಪೊಲೀಸರು ಹಲವು ಬಾರಿ ಜೈಲಿಗೆ ದಾಳಿ ಮಾಡಿ ಮೊಬೈಲ್‌ ಫೋನ್‌, ಚಾರ್ಜರ್‌, ಸಿಮ್‌ ಕಾರ್ಡ್‌, ಬ್ಲೇಡು, ಚಾಕು, ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯ ಸಂದರ್ಭ ಪೊಲೀಸರ ಮೇಲೆ ಪ್ರತಿ ದಾಳಿ ನಡೆದದ್ದೂ ಇದೆ. ಜೈಲು ಸಿಬಂದಿ ಮೇಲೂ ದಾಳಿ ನಡೆದಿತ್ತು. 

ಹಳೆಯ ವೀಡಿಯೋ
ಪ್ರಸ್ತುತ ವಿಜಯ್‌ ರೋಡ್‌ಕರ್‌ ಅವರು ಜೈಲು ಅಧೀಕ್ಷಕರಾಗಿದ್ದು, ಹದಿನೈದು ದಿನಗಳ ಹಿಂದೆಯಷ್ಟೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನಾನು ಅಧಿಕಾರ ವಹಿಸಿಕೊಂಂಡ ಬಳಿಕ ಕೈದಿಗಳ ಭೇಟಿಗೆ ಬರುವ ಸಂದರ್ಶಕರು ತರುವ ಪೊಟ್ಟಣಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಿ ಒಳಗೆ ಕೊಡಲಾಗುತ್ತದೆ ಎಂದವರು ತಿಳಿಸಿದ್ದಾರೆ. “ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವ ಫೋಟೊ ಇತ್ತೀಚಿನದ್ದಲ್ಲ. ಆ ಚಿತ್ರದಲ್ಲಿರುವ ಇಬ್ಬರು ಕೈದಿಗಳು ಎರಡೂವರೆ ತಿಂಗಳ ಹಿಂದೆ ಬಿಡುಗಡೆ ಹೊಂದಿ ಹೋಗಿದ್ದಾರೆ. ವೈರಲ್‌ ಆಗಿರುವ ಫೋಟೊ 3 ತಿಂಗಳ ಹಿಂದಿನದ್ದಾಗಿರಬೇಕು’ ಎಂದವರು ವಿವರಿಸಿದ್ದಾರೆ.

ಮಂಗಳವಾರ ಮೊಟ್ಟೆ, ಶುಕ್ರವಾರ ಚಿಕನ್‌/ ಮಟನ್‌
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಪ್ರತೀ ಮಂಗಳವಾರ ಕೋಳಿ ಮೊಟ್ಟೆ ಹಾಗೂ ಪ್ರತೀ ಶುಕ್ರವಾರ ಚಿಕನ್‌/ ಮಟನ್‌ ನೀಡಲಾಗುತ್ತದೆ. (ಓರ್ವಕೈದಿಗೆ ಚಿಕನ್‌ ಮತ್ತು ಮಟನ್‌ ಎರಡನ್ನೂ ಕೊಡಲಾಗುತ್ತಿಲ್ಲ. ಯಾವುದಾದರೂ ಒಂದು ಮಾಂಸದ ಪದಾರ್ಥವನ್ನು ಮಾತ್ರ ಕೊಡಲಾಗುತ್ತದೆ). ಸರಕಾರ ಕೈದಿಗಳ ಮಾಂಸದೂಟ್ಕಾಗಿ ಅನುದಾನ ಒದಗಿಸುತ್ತಿದೆ.
– ವಿಜಯ್‌ ರೋಡ್‌ಕರ್‌

Advertisement

Udayavani is now on Telegram. Click here to join our channel and stay updated with the latest news.

Next