ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ಜತೆ ಗಲಾಟೆ ಮಾಡುತ್ತಿದ್ದುದ್ದನ್ನು ಪ್ರಶ್ನಿಸಿದ ಹೋಮ್ ಗಾರ್ಡ್ ಮತ್ತು ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಾಧಾನ ಕಾರ್ಯದರ್ಶಿ ಚಿ.ನಾ.ರಾಮು ಪುತ್ರ ಸೇರಿ ನಾಲ್ವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿ.ನಾ.ರಾಮು ಪುತ್ರ ಕಾರ್ಲ್ಮಾರ್ಕ್ಸ್(21), ಈತನ ಸ್ನೇಹಿತರಾದ ಶ್ರೇಯಸ್ (22), ಚೇತನ್ (20) ಮತ್ತು ಕೇಶವ (23) ಬಂಧಿತ ಆರೋಪಿಗಳು. ನೀರಿನ ಬಾಟಲಿ ವಿಚಾರಕ್ಕೆ ಆರೋಪಿಗಳು ಬಾರ್‌ನ ಕ್ಯಾಶಿಯರ್ ಜತೆ ಜಗಳವಾಡಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.ಮಲ್ಲೇಶ್ವರ ಠಾಣೆ ಪೇದೆ ಉಮೇಶ್‌ಗೆ ತಲೆ ಮತ್ತು ಕೈ, ಕಾಲಿಗೆ ಗಂಭೀರ ಗಾಯವಾಗಿದ್ದು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಗಾರ್ಡ್ ರುದ್ರೇಶ್‌ಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಶನಿವಾರ ರಾತ್ರಿ ಕಾರ್ಲ್ಮಾರ್ಕ್ಸ್ ತನ್ನ ಮೂವರು ಸ್ನೇಹಿತರ ಜತೆ ಮಲ್ಲೇಶ್ವರದ 8ನೇ ಮುಖ್ಯರಸ್ತೆಯಲ್ಲಿರುವ ವೈಕಿಂಗ್ ಬಾರ್‌ಗೆ ಮದ್ಯ ಸೇವಿಸಲು ಹೋಗಿದ್ದ. ಬಳಿಕ ತಡರಾತ್ರಿ 1.30ರ ಸುಮಾರಿಗೆ ನೀರಿನ ಬಾಟಲಿ ವಿಚಾರಕ್ಕೆ ಆರೋಪಿಗಳು ಬಾರ್‌ನ ಕ್ಯಾಶಿಯರ್ ಜತೆ ಜಗಳ ತೆಗೆದಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಕೈ ಮಿಲಾಯಿಸಿದ್ದಾರೆ. ಇದೇ ವೇಳೆ ಗಸ್ತಿನಲ್ಲಿದ್ದ ಪೇದೆ ಉಮೇಶ್ ಮತ್ತು ಹೋಂ ಗಾರ್ಡ್ ರುದ್ರೇಶ್ ಗಲಾಟೆ ಕಂಡು ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ನಂತರ ಠಾಣೆಗೆ ಬರುವಂತೆ ಸೂಚಿಸಿದ್ದರು.
ನಾನು ಯಾರ ಮಗ ಗೊತ್ತಾ?: ಇದಕ್ಕೆ ಕೋಪಗೊಂಡ ಕಾರ್ಲ್ಮಾರ್ಕ್ಸ್ “ನಾನು ಯಾರ ಮಗ ಗೊತ್ತಾ?’ ಪರಿಣಾಮ ನೆಟ್ಟಗಿರುವುದಿಲ್ಲ ಎಂದೆಲ್ಲ ಧಮಕಿ ಹಾಕಿದ್ದಾರೆ. ಮದ್ಯದ ಅಮಲಿನಲ್ಲಿ ಪೇದೆ ಉಮೇಶ್‌ಗೆ ನಿಂದಿಸಿದ್ದಾರೆ. ಆಗ ಉಮೇಶ್ ಆರೋಪಿಗಳ ಪೈಕಿ ಒಬ್ಬನಿಗೆ ಲಾಠಿಯಲ್ಲಿ ಹೊಡೆದಿದ್ದಾರೆ. ಆಗ ಇನ್ನಷ್ಟು ಆಕ್ರೋಶಗೊಂಡ ಆರೋಪಿಗಳು ಉಮೇಶ್ ಬಳಿಯಿದ್ದ ಲಾಠಿಯನ್ನು ಕಸಿದುಕೊಂಡು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿದ ಬಾರ್‌ನ ಸಿಬ್ಬಂದಿ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೂ ಬಿಡದ ಆರೋಪಿಗಳು ಉಮೇಶ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೆ ಕುಸಿದು ಬಿದ್ದಿದ್ದರು. ಈ ವೇಳೆ ಪೇದೆ ಉಮೇಶ್ ಎಡಕಣ್ಣು, ಕತ್ತಿನ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೇದೆ ಜತೆಗಿದ್ದ ರುದ್ರೇಶ್ ಹೊಯ್ಸಳ ಮತ್ತು ಠಾಣೆಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಉಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ನಾಲ್ವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ, ಮಾರಣಾಂತಿಕ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾಗೆಯೇ ತಡರಾತ್ರಿಯಾದರೂ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.