Advertisement

ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದವನ ಸೆರೆ

11:21 AM Jul 14, 2017 | Team Udayavani |

ಬೆಂಗಳೂರು: ಕಳೆದ ಐದು ದಿನಗಳ ಹಿಂದೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ಪ್ರಶಾಂತ್‌ ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಅವರ ಪಿ.ಎ.ವಿನಯ್‌ ಅಪಹರಣದಲ್ಲಿ ಭಾಗಿಯಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಶಾಂತ್‌ ಜುಲೈ 9ರಂದು ತಪ್ಪಿಸಿಕೊಂಡು, ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ.

Advertisement

ಈ ನಡುವೆ ಪ್ರಶಾಂತ್‌ನನ್ನು ಹುಡುಕಿಕೊಡುವಂತೆ ಆತನ ಪತ್ನಿ ಬುಧವಾರ ಕೋರ್ಟ್‌ನಲ್ಲಿ ಹೆಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಹೀಗಿರುವಾಗಲೇ ಆತನ ಬಂಧನಕ್ಕಾಗಿಯೇ ರಚಿಸಲಾಗಿದ್ದ ವಿಶೇಷ ತಂಡ ಗುರುವಾರ ಸಂಜೆ ಆತನನ್ನು ಬಂಧಿಸಿ ಕರೆತಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 5ದಿನಗಳ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಶಾಂತ್‌ ವಿರುದ್ಧ ವಿನಯ್‌ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಕೊಲೆಯತ್ನ, ಕೊಲೆ ಸೇರಿದಂತೆ  ಒಟ್ಟು ನಾಲ್ಕು ಪ್ರಕರಣಗಳಲ್ಲಿ ಬಂಧಿಸಲಾಗಿದ್ದು. ವಿಚಾರಣೆಗೊಳಪಡಿಸಲಾಗುತ್ತಿದೆ. ಆರೋಪಿಯ ವಿಚಾರಣೆಯಲ್ಲಿ ಆತನ ಮತ್ತಷ್ಟು ಕೃತ್ಯಗಳು ಬೆಳಕಿಗೆ ಬರಬಹುದು ಎಂದು ಪೊಲೀಸರು ತಿಳಿಸಿದರು.

ತಮಿಳುನಾಡಿಗೆ ಪರಾರಿಯಾಗಿದ್ದ ಪ್ರಶಾಂತ 
ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ ಪ್ರಶಾಂತ್‌ ಮೊದಲು ತಮಿಳುನಾಡು ಬಸ್‌ ಹತ್ತಿದ್ದ. ಅಲ್ಲಿಯೇ ಎರಡು ದಿನ ಉಳಿದುಕೊಂಡು ಮೈಸೂರಿಗೆ ಪ್ರಯಾಣ ಬೆಳೆಸಿದ್ದ. ಬಸ್‌ ಹತ್ತುತ್ತಿದ್ದಾಗ ಟಿವಿಗಳಲ್ಲಿ ಈತನನ್ನು ನೋಡಿದ್ದ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ್ದ ಮಾಹಿತಿ ಆಧರಿಸಿ ಮೈಸೂರಿಗೆ ವಿಶೇಷ ತಂಡ ತೆರಳಿತ್ತು. ಗುರುವಾರ ಸಂಜೆ ಚಾಮುಂಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಮಫ್ತಿಯಲ್ಲಿದ್ದ ಸಿಬ್ಬಂದಿ ಬಂಧಿಸಿ ಕರೆತಂದಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next