ಬೆಂಗಳೂರು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಕೂಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಬಳಿಕ ಮಾತನಾಡಿದ ಅವರು, ಬೆಳಗಾವಿ ಹಿಂಡಲಗಾ ಜೈಲಿನಿಂದ ನಾಗಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಜ.14ರಂದು ಬೆದರಿಕೆ ಕರೆ ಹೋಗಿತ್ತು.ಆ ಪ್ರಕರಣದಲ್ಲಿ ಒಬ್ಬ ಕೈದಿಯನ್ನು ವಶಕ್ಕೆ ಪಡೆಯಲಾಗಿದೆ. ಕೈದಿಗೆ ಮೊಬೈಲ್ ಕೊಟ್ಟಿದ್ದು ಯಾರು? ನಂಬರ್ ಹೇಗೆ ಸಿಕ್ಕಿತ್ತು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಾಜ್ಯದಲ್ಲೂ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿಚಾರಣೆ ವೇಳೆ ತಾನು ಕರೆ ಮಾಡಿಲ್ಲ ಎಂದು ಕೈದಿ ಹೇಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್, ನಾಲ್ವರು ಜೈಲರ್‌ಗಳು, ಇಬ್ಬರು ವಾರ್ಡನ್‌ಗಳು ಸೇರಿ ಏಳು ಮಂದಿಗೆ ನೊಟೀಸ್ ಜಾರಿ ಮಾಡಲಾಗಿದೆ. ಏಳು ಜನ ಮೂರು ದಿನದೊಳಗೆ ಉತ್ತರಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಸ್ಯಾಂಟ್ರೋ ವಿರುದ್ಧ ದೂರು ನೀಡಬಹುದು-ಆರಗ :
Related Articles
ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ಈಗಷ್ಟೇ ವಿಚಾರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಸ್ಯಾಂಟ್ರೋ ರವಿ ವಿರುದ್ದ ಏನೇ ಆರೋಪವಿದ್ದರೂ ಮಾಹಿತಿ ಕೊಡಿ. ಎಲ್ಲವನ್ನೂ ತನಿಖೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಚಿವರು ಹೇಳಿದರು.
ಡಿಪಿಎಆರ್ ಸಿಎಂ ಅಧೀನದಲ್ಲಿದೆ :
ಕಮಿಷನರೆಟ್ ಹುದ್ದೆಗಳಿಗೆ ಎಸ್ಪಿ ದರ್ಜೆಯ ಅಧಿಕಾರಿಗಳ ನೇಮಕಕ್ಕೆ ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಡಿಪಿಎಆರ್ ಮುಖ್ಯಮಂತ್ರಿಗಳ ಅಧಿನದಲ್ಲಿದೆ. ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಅಣತಿಯಂತೆ ವರ್ಗಾಯಿಸಲಾಗುತ್ತದೆ. ನೇಮಕ ಮಾಡಿರುವುದಿರಂದ ಯಾವುದೇ ತೊಂದರೆ ಇಲ್ಲ. ಎಂದರು. ಕಲಬುರಗಿ ಕಮಿಷನರ್ ಆಗಿ ಎಸ್ಪಿ ದರ್ಜೆಯ ಆರ್.ಚೇತನ್ ವರ್ಗಾವಣೆ ಮಾಡಲಾಗಿದೆ.