ಬೆಂಗಳೂರು: ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ ಬುಧವಾರ ಮುಂಜಾನೆ ನಡೆದಿದೆ. ನೆಲಮಂಗಲ ಮೂಲದ ವಿ. ಮಂಜುನಾಥ್ (48) ಮೃತ ಕೈದಿ. ಬುಧವಾರ ಬೆಳಗ್ಗೆ 6.45ರ ಸುಮಾರಿಗೆ ಡಿ ಬ್ಯಾರಕ್‌ನ ಏಳನೇ ಕೊಠಡಿ ಸಮೀಪದ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಮಂಜುನಾಥ್, ಜೈಲಿನಲ್ಲಿ ನಡೆಯುವ ಕೆಲ ವಿಭಾಗಗಳ ಮೇಲ್ವಿಚಾರಕರ ಚುನಾವಣೆಯಲ್ಲಿ ಗೆದ್ದು, ಅಡುಗೆ ವಿಭಾಗದ “ಪಂಚ್’ (ಮೇಲ್ವಿಚಾರಕ) ಆಗಿದ್ದು, ಪ್ರತಿ ನಿತ್ಯ ಎಲ್ಲ ಕೈದಿಗಳಿಗೆ ಕಾಫಿ, ತಿಂಡಿ ಹಾಗೂ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ. ಜತೆಗೆ ಸ್ವಚ್ಛತಾ ವಿಭಾಗದ ಉಸ್ತುವಾರಿ ಹೊತ್ತಿದ್ದ.
ಪ್ಲಾಸ್ಟಿಕ್ ಚೀಲದಲ್ಲಿ ಬಿಗಿದುಕೊಂಡು ಆತ್ಮಹತ್ಯೆ: ಬೆಳಗ್ಗೆ 6.30ಕ್ಕೆ ಎಲ್ಲ ಬ್ಯಾರಕ್‌ಗಳಿಗೆ ಕಾಫಿ ವಿತರಣೆ ಮಾಡಿರುವ ಬಗ್ಗೆ ಪರಿಶೀಲಿಸಿ ಬಂದ ಮಂಜುನಾಥ್, ಅಡುಗೆ ಕೊಣೆಗೆ ತರಕಾರಿ ಬರುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತನ್ನೊಂದಿಗೆ ಕೊಂಡೊಯ್ದಿದ್ದ. ಅದನ್ನೇ ಹಗ್ಗದ ಮಾದರಿಯಲ್ಲಿ ಸುತ್ತಿಕೊಂಡು 6.45ರ ಸುಮಾರಿಗೆ ಡಿ ಬ್ಯಾರಕ್‌ನ ಕೆಳಮಹಡಿಯಲ್ಲಿರುವ ಏಳನೇ ಕೊಠಡಿ ಬಳಿ ಇರುವ ಕಬ್ಬಿಣದ ಗೇಟ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಂತರ ಮಂಜುನಾಥ್‌ಗಾಗಿ ಇತರೆ ಕೈದಿಗಳು ಹುಡುಕಾಟ ನಡೆಸುತ್ತಿರುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಖಿನ್ನತೆಗೊಳಗಾಗಿದ್ದ ಕೈದಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗುವ ಕೈದಿಗಳಿಗೆ ಅವಧಿ ಪೂರ್ಣ ಬಿಡುಗಡೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಮಂಜುನಾಥ್ ಸನ್ನಡತೆ ಹೊಂದಿದ್ದರೂ ನಿಯಮದ ಪ್ರಕಾರ ಬಿಡುಗಡೆಗೆ ಅವಕಾಶ ಇರಲಿಲ್ಲ. ಅದರಿಂದ ಖಿನ್ನತೆಗೊಳಗಾಗಿದ್ದ. ಅಲ್ಲದೆ, ಕೆಲ ತಿಂಗಳ ಹಿಂದೆ ಸಜಾ ಬಂಧಿಗಳ ಬಿಡುಗಡೆ ಆಗುತ್ತಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸಿದ್ದ ದಿನ ಪತ್ರಿಕೆಯೊಂದರ ನಕಲಿ ಪ್ರತಿಯನ್ನು ಇಟ್ಟುಕೊಂಡು, ಈ ಬಗ್ಗೆ ಸಹ ಕೈದಿಗಳ ಜತೆ ಚರ್ಚೆ ನಡೆಸುತ್ತಿದ್ದ.
ತಾವು ಎಷ್ಟೇ ಸನ್ನಡತೆ ಹೊಂದಿದ್ದರು ತಮಗೆ ಬಿಡುಗಡೆ ಆಗುವುದಿಲ್ಲ ಎಂದು ಅಳಲು ತೊಡಿಕೊಂಡಿದ್ದ ಎಂದು ಸಹ ಕೈದಿಗಳು ಹೇಳುತ್ತಿದ್ದರು. ಈ ಮಧ್ಯೆ ಮಂಗಳವಾರವಷ್ಟೇ ಮೂವರು ಅಲ್ಪಾವಧಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಎಲ್ಲ ವಿಚಾರಗಳಿಂದ ಆತ ಮಾನಸಿಕವಾಗಿ ನೊಂದಿದ್ದ. ಆತ್ಮಹತ್ಯೆ ಸಂದರ್ಭದಲ್ಲಿಯೂ ಆತನ ಜೇಬಿನಲ್ಲಿ ದಿನ ಪತ್ರಿಕೆಯ ನಕಲಿ ಪ್ರತಿ ಪತ್ತೆಯಾಗಿದೆ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಹೇಳಿದರು.