Advertisement

ಗಾಂಜಾ ಹಣದಲ್ಲಿ ಮನೆ ನಿರ್ಮಿಸುತ್ತಿದ್ದ ಆರೋಪಿ ಸೆರೆ

11:58 AM Feb 15, 2018 | Team Udayavani |

ಬೆಂಗಳೂರು: ಗಾಂಜಾ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡು ಈ ದಂಧೆಯಲ್ಲಿ ಸಂಪಾದಿಸಿದ ಅಕ್ರಮ ಹಣದಿಂದ ನಿವೇಶನ ಖರೀದಿಸಿ, ಲಕ್ಷಾಂತರ ರೂ. ವೆಚ್ಚದಲ್ಲಿ ಮನೆ ಕಟ್ಟುತ್ತಿದ್ದ ಚಾಮರಾಜನಗರ ಮೂಲದ ಆರೋಪಿ ಈಗ ಕೋರಮಂಗಲ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ನವೀನ್‌ ಕುಮಾರ್‌ (29) ಬಂಧಿತ. ಆರೋಪಿಯು ಕೆಲ ದಿನಗಳ ಹಿಂದೆ ಬಂಧನಕ್ಕೊಳಗಾದ ಕೊಳ್ಳೆಗಾಲದ ರಾಚಪ್ಪನ ಶಿಷ್ಯ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೋರಮಂಗಲದ ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಬಸ್‌ ನಿಲ್ದಾಣ ಬಳಿ ಗಾಂಜಾ ಮಾರಾಟ ಮಾಡುತ್ತಿರುವುದು ತಿಳಿದು ಪೊಲೀಶರು ದಾಳಿ ನಡೆಸಿದಾಗ ಆರೋಪಿ ತಪ್ಪಿಸಿಕೊಂಡು ಚಾಮರಾಜನಗರ ಜಿಲ್ಲೆಯ ಸ್ವಗ್ರಾಮ ಹನೂರಿನಲ್ಲಿ ತಲೆಮರೆಸಿಕೊಂಡಿದ್ದ. ಗ್ರಾಮಕ್ಕೆ ತೆರಳಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, 40 ಕೆ.ಜಿ.ಗಾಂಜಾ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಮಲ್ಲೇಶ್‌ಗಾಗಿ ಹುಡುಕಾಟ ನಡೆದಿದೆ. 

ಹನೂರು ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ನವೀನ್‌, ಹೆಚ್ಚು ಹಣ ಗಳಿಸಲು ಬೆಂಗಳೂರಿಗೆ ಬಂದಿದ್ದು, ಎರಡೂವರೆ ವರ್ಷ ಹಿಂದೆ ಗಾಂಜಾ ಮಾರಾಟಗಾರ, ಕೊಳ್ಳೆಗಾಲದ ರಾಚಪ್ಪನ ಪರಿಚಯವಾಗಿದೆ. ಈತನ ಜತೆ ಒಂದೂವರೆ ವರ್ಷ ನಗರದಲ್ಲಿ ಯುವಕರಿಗೆ ಹಾಗೂ ಬೀಡಾ ಸ್ಟಾಲ್‌, ಗೂಡಂಗಡಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಈ ವ್ಯವಹಾರದಿಂದ ಆರೋಪಿಗಳಿಬ್ಬರು ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂ. ಆಸ್ತಿ ಸಂಪಾದಿಸಿದ್ದರು. 6 ತಿಂಗಳ ಹಿಂದೆ ರಾಚಪ್ಪನ ಜತೆ ಹಣದ ವಿಚಾರದಲ್ಲಿ ಜಗಳ ಮಾಡಿಕೊಂಡ
ನವೀನ್‌, ಕೊಳ್ಳೆಗಾಲದ ತಾಳಬೆಟ್ಟದಲ್ಲಿ ಗಾಂಜಾ ಬೆಳೆಗಾರರನ್ನು ಪರಿಚಯಿಸಿಕೊಂಡು ತಾನೇ ನೇರವಾಗಿ ಗಾಂಜಾ ಖರೀದಿಸಿ ನಗರದ ಶಾಲಾ, ಕಾಲೇಜು, ಟೆಕ್ಕಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದ. ಈ ಮೂಲಕ ಸುಮಾರು 80 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ್ದಾನೆ.
 
ತೆರಿಗೆ ಕಟ್ಟಿ ಸಿಕ್ಕಿ ಬಿದ್ದಿದ್ದ ರಾಚಪ್ಪ ಕೆಲ ವರ್ಷಗಳಿಂದ ನಿರಂತರವಾಗಿ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದ ರಾಚಪ್ಪ, ಕೋಟ್ಯಂತರ ರೂ. ಆಸ್ತಿ ಸಂಪಾದಿಸಿದ್ದ. ತಲ್ಲಘಟ್ಟ ಪುರದಲ್ಲಿ ಅಪಾರ್ಟ್‌ಮೆಂಟ್‌ ಹೊಂದಿದ್ದು, 40 ಲಕ್ಷ ರೂ. ಆದಾಯ ತೆರಿಗೆ ಸಹ ಪಾವತಿಸಿದ್ದ. ಆದರೆ, ಐಟಿ ರಿಟನ್ಸ್‌ ವೇಳೆ ಉದ್ಯೋಗದ ಜಾಗದಲ್ಲಿ “ಸೆಂಟ್ರಿಂಗ್‌’ ಕೆಲಸ ಎಂದು ನಮೂದಿಸಿದ್ದ. ಅನುಮಾನಗೊಂಡ ಐಟಿ ಅಧಿಕಾರಿಗಳು, ಆದಾಯದ ಮೂಲ ತಿಳಿಸುವಂತೆ ರಾಚಪ್ಪನಿಗೆ ಸೂಚಿಸಿದ್ದರು. ಆರೋಪಿ ಪ್ರಥಮ ದರ್ಜೆ ಗುತ್ತಿಗೆದಾರನ ನಕಲಿ ಪರವಾನಗಿ ಸಲ್ಲಿಸಿದ್ದ. ಈ ಬಗ್ಗೆ ಐಟಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಯ ಅಸಲಿ ಬಣ್ಣ ಬಯಲಾಗಿತು

18 ಲಕ್ಷದ ಸೈಟು, 40 ಲಕ್ಷದ ಮನೆ!
ಕೋರಮಂಗಲ ಪೊಲೀಸರು ಚಾಮರಾಜ ನಗರದ ಹನೂರುನಲ್ಲಿ ಆರೋಪಿ ನವೀನ್‌ ಆಸ್ತಿ ಕಂಡು ಅಚ್ಚರಿಗೊಂಡಿದ್ದಾರೆ. ಹನೂರಿನಲ್ಲಿ ಈತ 18 ಲಕ್ಷ ರೂ. ಮೌಲ್ಯದ ನಿವೇಶನ ಖರೀದಿಸಿ, 40 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಈಗಾಗಲೇ 25 ಲಕ್ಷ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ.

ನವೀನ್‌ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಕೋರ್ಟ್‌ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 2016ರಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಿಡುಗಡೆ ಬಳಿಕವೂ ಆರೋಪಿ ದಂಧೆ ಮುಂದುವರಿಸಿದ್ದ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next