ಮಂಡ್ಯ: ಸರ್ಕಾರಿ ಮಹಾವಿದ್ಯಾಲಯ ಈಗ ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು, ಸಂಶೋಧನಾ ಆಧಾರಿತ ಕೋರ್ಸ್ ಗಳ ಪ್ರಾರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ಮಂಡ್ಯ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಎಂ.ಎಸ್.ಮಹದೇವನಾಯಕ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ನಡೆದ ಇತಿಹಾಸ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಶೋಧನೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉತ್ತಮ ಕೆಲಸ ಮಾಡುವೆ: ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಮಟ್ಟದಲ್ಲಿ ಮಂಡ್ಯ ವಿವಿ ಬೆಳೆಸಲು ಕೇಂದ್ರದಿಂದ ನೇರವಾಗಿ ಇಲ್ಲಿಗೆ ಆಯ್ಕೆಯಾಗಿ ಬಂದಿದ್ದೇನೆ. ಈ ಭಾಗದ ಜನ ಹಾಗೂ ವಿದ್ಯಾರ್ಥಿಗಳ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಮೈಸೂರು, ಧಾರವಾಡ, ಬೆಂಗಳೂರು ಕ್ಲಸ್ಟರ್ ಸೇರಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಯಾಗಲು ಹೆಸರು ಕೇಳಿ ಬಂದಿತ್ತು. ಆದರೂ ಈಗ ಮಂಡ್ಯ ದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪಿಹೆಚ್‌ಡಿ ಆರಂಭ: ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳು ನೇರವಾಗಿ ಬಂದು ಕೇಳಬೇಕು. ಮೊದಲು ಕೀಳರಿಮೆ ಬಿಟ್ಟು ಸಮಸ್ಯೆ ಹೇಳಿಕೊಂಡು ನಿರಂತರ ಅಭ್ಯಾಸದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪಿಹೆಚ್‌ಡಿ ಆರಂಭಿಸಲಾಗುತ್ತಿದೆ. ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಇಲ್ಲಿಯೇ ಸಂಶೋಧನೆ ಕೈಗೊಳ್ಳಬಹುದು. ಅವರಿಗೆ ಬೇಕಾದ ವಿದ್ಯಾರ್ಥಿ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಜೀವನದಲ್ಲಿ ವ್ಯಾಸಂಗದ ಘಟ್ಟ ಅತಿ ಮುಖ್ಯವಾದುದು. ಈ ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದ ಜೊತೆಗೆ ಶಿಸ್ತು ಮೈಗೂಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಶ್ರಮವಹಿಸಿ ಓದುವ ಮೂಲಕ ಜೀವನ ರೂಪಿಸಿಕೊಳ್ಳಬೇಕು. ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲು ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಇತಿಹಾಸ ಪ್ರಾಧ್ಯಾಪಕ ರಾಜು, ಕನ್ನಡ ಪ್ರಾಧ್ಯಾಪಕ ಎನ್.ಎಸ್.ಶಂಕರೇಗೌಡ, ನಿವೃತ್ತ ಪ್ರಾಧ್ಯಾಪಕ ಚಿಕ್ಕಮಾದನಾಯಕ ಮತ್ತಿತರರು ಭಾಗವಹಿಸಿದ್ದರು.