Advertisement

ಹಿಂದುಳಿದ ಜಿಲ್ಲೆಗಿಲ್ಲ ಆದ್ಯತೆ

05:44 PM Feb 17, 2018 | Team Udayavani |

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಕೊನೆ ಬಜೆಟ್‌ ಯಾವುದೇ ವಿಶೇಷತೆಗಳಿಲ್ಲದೆ ಜಿಲ್ಲೆಯ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬಹುದು ಎಂಬ ಜನತೆ ನಿರೀಕ್ಷೆಗಳೆಲ್ಲಾ ಸುಳ್ಳಾಗಿವೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಬೂದಿಹಾಳ – ಪೀರಾಪುರ ಏತ ನೀರಾವರಿ ಯೋಜನೆಯ ವಿಸ್ತರಣೆಯಡಿ ಶಹಾಪುರ ಹಾಗೂ ಸುರಪುರ ತಾಲೂಕುಗಳ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಾಮಗಾರಿ ಘೋಷಣೆ
ಬಿಟ್ಟು ಯಾವುದೇ ವಿಶೇಷ ಯೋಜನೆಗಳು ಘೋಷಿಸದೇ ಯಾದಗಿರಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹತ್ತಿಯನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಹತ್ತಿ ಸಂಸ್ಕರಣಾ ಘಟಕ ಮಂಜೂರು ಮಾಡಬೇಕು. ಜೊತೆಗೆ ರೈತರ ಬಹುಬೇಡಿಕೆ ಆಗಿರುವ ರೇಕ್‌ ಪಾಯಿಂಟ್‌ ಮಂಜೂರುಗೊಳಿಸಬೇಕು ಎಂಬ ಬೇಡಿಕೆ
ಈಡೇರಿಲ್ಲ.

ಜಿಲ್ಲೆಯಲ್ಲಿ ಶಹಾಪುರ, ಸುರಪುರ ಮತ್ತು ಗುರುಮಠಕಲ್‌ ನಗರಗಳು ಜನದಟ್ಟಣೆ ಹೆಚ್ಚಾಗುತ್ತಿದ್ದು, ಇಲ್ಲಿ ತಲಾ ಒಂದು ಸಂಚಾರಿ ಪೊಲೀಸ್‌ ಠಾಣೆ, ಯಾದಗಿರಿ ನಗರದಲ್ಲಿ ಇನ್ನೊಂದು ನಗರ ಪೊಲೀಸ್‌ ಠಾಣೆ ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ರಂಗ ಮಂದಿರಗಳ ಸ್ಥಾಪನೆ, ಯಾದಗಿರಿ ಕೋಟೆ, ಬೋನಾಳ ಪಕ್ಷಿಧಾಮ, ಮಲಗಿರುವ ಬುದ್ಧ, ಮೈಲಾಪುರ ಮಲ್ಲಯ್ಯ ಕ್ಷೇತ್ರ, ತಿಂಥಣಿ ಮೌನೇಶ್ವರ, ಹತ್ತಿಕುಣಿ ಜಲಾಶಯ, ಛಾಯಾ ಭಗವತಿ ಅಭಿವೃದ್ಧಿಗೊಳಿಸಿ ಪ್ರೇಕ್ಷಣಿಕ ಸ್ಥಳಗಳನ್ನಾಗಿ ರೂಪಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಿಸಬೇಕು. ಸುರಪುರ, ಶಹಾಪುರ, ಯಾದಗಿರಿ, ಗುರುಮಠಕಲ್‌ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆಗೆ ಆದ್ಯತೆ ನೀಡಬೇಕೆಂಬ ಜನರ ನಿರೀಕ್ಷೆ
ಸುಳ್ಳಾಗಿದೆ.

ಕಳೆದ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ ಅನುದಾನ ನೀಡದೇ ಇರುವುದರಿಂದ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆಗೊಳಿಸದೇ ವೈದ್ಯಕೀಯ ಕಾಲೇಜು ನಿರ್ಮಾಣ ಕನಸಾಗಿಯೇ ಉಳಿದಿದೆ.

Advertisement

ಜಿಲ್ಲೆಯಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಈ ಬಜೆಟ್‌ನಲ್ಲಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡಬೇಕಾಗಿತ್ತು. ಅದಕ್ಕೂ ಯಾವುದೇ ಆದ್ಯತೆ ನೀಡಿಲ್ಲ. ನಿರುದ್ಯೋಗ ನಿವಾರಣೆಗೆ ಕೈಗಾರಿಕೆ ಸ್ಥಾಪನೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಒಟ್ಟಾರೆ ಕಾಂಗ್ರೆಸ್‌
ಸರಕಾರದ ಕೊನೆಯ ಬಜೆಟ್‌ ಯಾದಗಿರಿ ಜಿಲ್ಲೆಗೆ ಮಾತ್ರ ಶೂನ್ಯ ಕೊಡುಗೆ ನೀಡಿದೆ.

ಉಚಿತ ಬಸ್‌ ಪಾಸ್‌ಗೆ ಖುಷಿ
ಯಾದಗಿರಿ: ಬಜೆಟ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಿಸಿರುವುದಕ್ಕೆ ಜಿಲ್ಲಾ ಎಐಡಿಎಸ್‌ಓ (ಆಲ್‌ ಇಂಡಿಯಾ ಡೆಮಾಕ್ರೇಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌) ಸಮಿತಿ ಸ್ವಾಗತಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ನೀಡುವುದಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ರಾಜ್ಯ ಸರಕಾರದ ಈ ನಿರ್ಧಾರವನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಹರ್ಷ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿ
ರಾಜ್ಯ ಸರಕಾರ ವಿದ್ಯಾರ್ಥಿ ಪರವಾದ ನಿರ್ಧಾರ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅಧ್ಯಕ್ಷ ರಾಮಲಿಂಗಪ್ಪ ಬಿ.ಎನ್‌, ಕಾರ್ಯದರ್ಶಿ ಸೈದಪ್ಪ ಹೆಚ್‌.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಕೊಡುಗೆ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಘೋಷಣೆಗಳ ನಾಮಫಲಕವಾಗಿವೆ. ಹೊರತು ಯಾದಗಿರಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ಜನರ ನಿರೀಕ್ಷೆಗಳಿಗೆ ತಣ್ಣಿರೆರಚಿದ್ದಾರೆ.  ಚಂದ್ರಶೇಖರಗೌಡ ಮಾಗನೂರ
ಬಿಜೆಪಿ ಜಿಲ್ಲಾಧ್ಯಕ್ಷ ಜನಪರ ಬಜೆಟ್‌ 20 ಲಕ್ಷ ಮನೆಗಳ ನಿರ್ಮಾಣ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ
ಉಚಿತ ಬಸ್‌ ಪಾಸ್‌ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಇದೊಂದು ಜನಪರ ಬಜೆಟ್‌ ಆಗಿದೆ.  ಚನ್ನಾರೆಡ್ಡಿ ಪಾಟೀಲ್‌ ತುನ್ನೂರ ಮಾಜಿ ಎಂಎಲ್‌ಸಿ ವ್ಯರ್ಥ ಕಸರತ್ತು ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ವ್ಯರ್ಥವಾಗಿದೆ. ಮುಂದಿನ ಸರಕಾರ ಇದನ್ನು ಕಾರ್ಯರೂಪಕ್ಕೆ ತರುತ್ತದೆ ಎಂಬುದು ಖಾತ್ರಿ ಇಲ್ಲ. ಆದ್ದರಿಂದ ಇದೊಂದು ವ್ಯರ್ಥ ಬಜೆಟ್‌ ಆಗಿದೆ.
 ನಾಗನಗೌಡ ಕಂದಕೂರ ಜೆಡಿಎಸ್‌ ಮುಖಂಡ

„ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next