Advertisement

ಪ್ರವಾಸೋದ್ಯಮ-ಉಕ್ಕು ಉದ್ಯಮಕ್ಕೆ ಸಿಕ್ಕಿಲ್ಲ ಆದ್ಯತೆ

07:11 AM Feb 02, 2019 | Team Udayavani |

ಬಳ್ಳಾರಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಡ, ಮಧ್ಯಮ ವರ್ಗ, ಕಾರ್ಮಿಕರು, ರೈತರಿಗಾಗಿ ಉತ್ತಮ ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಉಕ್ಕು ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶವಿರುವ ಗಣಿನಾಡು ಬಳ್ಳಾರಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ನಿರಾಸೆ ಮೂಡಿಸಿದೆ.

Advertisement

ಕೇಂದ್ರದಲ್ಲಿ ಈ ಹಿಂದಿನ ಹಣಕಾಸು ಸಚಿವರಾಗಿದ್ದ ಅರುಣ್‌ ಜೈಟ್ಲಿಯವರು 2016ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಐತಿಹಾಸಿಕ ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ‘ಆದರ್ಶ್‌ ನಗರ’ ಯೋಜನೆಯಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಘೋಷಿಸಿದ್ದರು. 2015ರ ಬಜೆಟ್‌ನಲ್ಲಿ ಹಂಪಿಯನ್ನು ‘ರಾಮಾಯಣ ಸರ್ಕ್ನೂಟ್’ಗೆ ಸೇರಿಸಿ ಘೋಷಣೆ ಮಾಡಲಾಗಿತ್ತು. ಆದರೆ, ಇವು ಯಾವು ಕೂಡ ಕಾರ್ಯರೂಪಕ್ಕೆ ಬರಲಿಲ್ಲ. ಜತೆಗೆ ಕಳೆದ 2018ರಲ್ಲಿ ಮಂಡಿಸಿದ್ದ ಬಜೆಟ್‌ನಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯನ್ನು ದೇಶದ ಪ್ರಮುಖ 10 ಸಾಂಪ್ರದಾಯಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ (ಐಕಾನಿಕ್‌ ಟೂರಿಜಮ್‌ ಸೈಟ್) ಸೇರಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದರು. ಆದರೆ, ಕೇಂದ್ರ ಸರ್ಕಾರದ ಈ ಎಲ್ಲ ಘೋಷಣೆಗಳು ಕೇವಲ ಬಜೆಟ್‌ಗಷ್ಟೇ ಸೀಮಿತವಾದವಷ್ಟೇ ಹೊರತು, ಯಾವೊಂದು ಯೋಜನೆಗೂ ಬಿಡಿಗಾಸು ಅನುದಾನ ಬಿಡುಗಡೆಗೊಳಿಸಿ, ಯೋಜನೆ ಜಾರಿಗೊಳ್ಳುವಲ್ಲಿ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಹಿಂದಿನಂತೆಯೇ ಪ್ರಸಕ್ತ ಸಾಲಿನ ಬಜೆಟ್‌ನಲ್ಲೂ ಹಂಪಿ ಸೇರಿ ಬಳ್ಳಾರಿ ಜಿಲ್ಲೆಗೆ ಅನ್ಯಾಯವಾಗಿದೆ ಎಂಬುದು ಜಿಲ್ಲೆಯ ಪ್ರಗತಿಪರರು, ಸಾಮಾಜಿಕ ಹೋರಾಟಗಾರರ ಅಸಮಾಧಾನವಾಗಿದೆ.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಂಪಿಗೆ ಸ್ವದೇಶಿ ಮತ್ತು ವಿದೇಶಿಯರು ಸೇರಿ ವಾರ್ಷಿಕ ಸರಾಸರಿ ಎರಡು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಂಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದ್ದರೆ ಅಥವಾ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿದ್ದರೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಾದರೂ ಹಂಪಿಗೆ ಈ ಬಾರಿಯಾದರೂ ಅನುದಾನ ಬಿಡುಗಡೆಗೊಳಿಸಿದ್ದರೆ, ಈ ಹಿಂದೆ ಘೋಷಿಸಲಾಗಿದ್ದ ಯೋಜನೆಗಳಿಗೆ ಒಂದಷ್ಟು ಕಾಯಕಲ್ಪ ನೀಡಲು ಸಾಧ್ಯವಾಗುತ್ತಿತ್ತು ಎಂಬ ಮಾತು ಸಾಮಾಜಿಕ ಹೋರಾಟಗಾರರದ್ದಾಗಿದೆ.

ಗಣಿಗಾರಿಕೆಯಿಂದಾಗಿ ದೇಶದ ಗಮನ ಸೆಳೆದಿರುವ ಗಣಿನಾಡು ಬಳ್ಳಾರಿ ಜಿಲ್ಲೆ ಗಣಿಗಾರಿಕೆ ಮತ್ತು ಉಕ್ಕು ಉದ್ಯಮದಿಂದಾಗಿ ಇಂದು ದೇಶದ ‘ಉಕ್ಕಿನ ರಾಜಧಾನಿ’ಯಾಗಿ ಬೆಳೆಯುತ್ತಿದೆ. ಅಲ್ಲದೇ, ಕಳೆದ 2014ರ ಲೋಕಸಭೆ ಚುನಾವಣೆ ವೇಳೆ ಬಳ್ಳಾರಿಗೆ ಆಗಮಿಸಿದ್ದ ಕೇಂದ್ರದ ಗೃಹ ಸಚಿವ ರಾಜನಾಥ್‌ ಸಿಂಗ್‌ ಬಳ್ಳಾರಿಯನ್ನು ಉಕ್ಕಿನ ರಾಜಧಾನಿಯನ್ನಾಗಿಯೂ ಘೋಷಿಸಿದ್ದರು. ಅದಕ್ಕೆ ಬೇಕಾಗುವ ಎಲ್ಲ ಮೂಲಸೌಲಭ್ಯ ಕಲ್ಪಿಸುವುದಾಗಿಯೂ ಘೋಷಿಸಿದ್ದರು. ಮೇಲಾಗಿ ಧನಬಾದ್‌ನಲ್ಲಿರುವ ‘ಇಂಡಿಯನ್‌ ಸ್ಕೂಲ್‌ ಆಫ್‌ ಮೈನ್ಸ್‌’ ಮಾದರಿಯ ಗಣಿ ಮತ್ತು ಉಕ್ಕು ತಯಾರಿಕೆ ಕುರಿತ ಕೌಶಲ್ಯ ಶಿಕ್ಷಣ ಕುರಿತು ಉನ್ನತ ಮಟ್ಟದ ಕೇಂದ್ರವನ್ನಾದರೂ ಸ್ಥಾಪಿಸುವ ಕುರಿತು ನಿರೀಕ್ಷಿಸಲಾಗಿತ್ತು. ಅದನ್ನು ಸಹ ಕೇಂದ್ರ ಸರ್ಕಾರ ಹುಸಿಗೊಳಿಸಿದೆ.

ಜಿಲ್ಲೆಯ ಎಲ್ಲ ಕೈಗಾರಿಕೆಗಳಲ್ಲೂ ಬಿಹಾರ ಸೇರಿ ವಿವಿಧ ರಾಜ್ಯಗಳ ಜನರೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಕಾರಣ ಉತ್ತರ ಭಾರತದಲ್ಲಿ ಇಂಡಿಯನ್‌ ಸ್ಕೂಲ್‌ ಆಫ್‌ ಮೈನ್ಸ್‌ ಸಂಸ್ಥೆ ಇರುವುದರಿಂದ ಅಲ್ಲಿ ತರಬೇತಿ ಪಡೆದು ದಕ್ಷಿಣ ಭಾರತದಲ್ಲಿನ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಪರಿಣಾಮ ಆ ಕೌಶಲ್ಯ ಇಲ್ಲಿನ ಸ್ಥಳೀಯರಲ್ಲಿ ಇರದ ಕಾರಣ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಅವಕಾಶ ದೊರೆಯುತ್ತಿಲ್ಲ. ಸ್ಥಳೀಯವಾಗಿ ತಾಂತ್ರಿಕ ಶಿಕ್ಷಣ ಪಡೆದ ಕೆಲವರಿಗೆ ಕೈಗಾರಿಕೆಗಳಲ್ಲಿ ಒಂದಷ್ಟು ಉದ್ಯೋಗ ದೊರೆತಿರಬಹುದು. ಆದರೆ, ಪ್ರಮುಖವಾಗಿ ಗಣಿ ಮತ್ತು ಉಕ್ಕು ತಯಾರಿಸುವ ಕೇಂದ್ರ ಬಳ್ಳಾರಿಯಲ್ಲಿಲ್ಲ. ಹಾಗಾಗಿ ಬಳ್ಳಾರಿಯಲ್ಲೂ ಕೇಂದ್ರವನ್ನು ಸ್ಥಾಪಿಸಿದರೆ ಅನುಕೂಲವಾಗುತ್ತಿತ್ತು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ಅಲ್ಪ ಪ್ರಮಾಣದಲ್ಲಾದರೂ ನಿಯಂತ್ರಣಗೊಳ್ಳುತ್ತಿತ್ತು. ಆದರೆ, ಆ ಕುರಿತ ನಿರೀಕ್ಷೆಯೂ ಹುಸಿಯಾಗಿದೆ. ಬಡ, ಮಧ್ಯಮ, ಕಾರ್ಮಿಕ ವರ್ಗಕ್ಕೆ ಉತ್ತಮ ಯೋಜನೆಗಳನ್ನು ಘೋಷಿಸಿದೆ ಎನಿಸಿದರೂ, ಉದ್ಯೋಗ ಸೃಷ್ಟಿಸುವ, ಹಂಪಿಯನ್ನು ಅಭಿವೃದ್ಧಿ ಪಡಿಸಲು ಮೂಲಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲೆಯ ಜನರನ್ನು ನಿರಾಸೆ ಮೂಡಿಸಿದೆ ಎಂದು ಪ್ರಗತಿಪರರ ಅಭಿಪ್ರಾಯವಾಗಿದೆ.

Advertisement

ಕೇಂದ್ರ ಬಜೆಟ್ ಚುನಾವಣಾ ಗಿಮಿಕ್‌: ಸಚಿವ ತುಕಾರಾಂ
ಬಳ್ಳಾರಿ: ಕೇಂದ್ರದ ಬಜೆಟ್ ಚುನಾವಣಾ ಗಿಮಿಕ್‌ ಆಗಿದೆ. ಕೇಂದ್ರದ ಎನ್‌ಡಿಎ ಸರಕಾರ ಕೇವಲ ತಂತ್ರಗಾರಿಕೆಯ ಬಜೆಟ್ ಮಂಡಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಹೇಳಿದರು. ನಗರದ ವಿಮ್ಸ್‌ ಆವರಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲ. ಕೇವಲ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ರೈತರ ಸಾಲಮನ್ನಾ ಮಾಡಲಾಗಿತ್ತು. ಯುಪಿಎ ಸರ್ಕಾರದ ಬಜೆಟ್‌ಗಳು ಸಹ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಲಾಗಿತ್ತು. ಇದೀಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸಹ ರೈತರ ಸಾಲಮನ್ನಾ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮೂರು ಹಂತದಲ್ಲಿ 6 ಸಾವಿರ ರೂ. ರೈತರ ಖಾತೆಗೆ ಹಣ ಹಾಕುವುದು ರೈತರಿಗೆ ಸಂತಸದ ತಂದಿದೆ.
•ವಾ.ಹುಲುಗಯ್ಯ, ರಾಜ್ಯ ರೈತ ಸಂಘ, ಸಿರುಗುಪ್ಪ.

ಗಣಿಗಾರಿಕೆ ಮತ್ತು ಉಕ್ಕು ಉದ್ಯಮದಿಂದ ಬಳ್ಳಾರಿ ಜಿಲ್ಲೆಯು ಇಂದು ದೇಶದ ”ಉಕ್ಕಿನ ರಾಜಧಾನಿ”ಯಾಗಿ ಬೆಳೆಯುತ್ತಿದೆ. ಧನಬಾದ್‌ ನಲ್ಲಿರುವ ‘ ಇಂಡಿಯನ್‌ ಸ್ಕೂಲ್‌ ಆಫ್‌ ಮೈನ್ಸ್‌” ಮಾದರಿಯಲ್ಲಿ ಈ ಭಾಗದ ಯುವಕರಿಗೆ ಗಣಿ ಮತ್ತು ಉಕ್ಕು ತಯಾರಿಕೆ ಕೌಶಲ್ಯ ಶಿಕ್ಷಣ ನೀಡಲು ಉನ್ನತ ಕೇಂದ್ರದ ಸ್ಥಾಪನೆಯ ನಿರೀಕ್ಷೆ ಹುಸಿಯಾಗಿಸಿದೆ. ಹಂಪಿ ಅಭಿವೃದ್ಧಿಗೂ ಈ ಹಿಂದೆ ಸತತ ಮೂರು ವರ್ಷಗಳ ಕಾಲ ಘೋಷಿಸಿದ್ದ ಯೋಜನೆಗಳಿಗೂ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡದಿರುವುದು. ಕೇಂದ್ರ ಸರ್ಕಾರ ಗಣಿ ಜಿಲ್ಲೆಗೆ ಅನ್ಯಾಯವೆಸಗಿದೆ.
•ಶಿವಕುಮಾರ ಮಾಳಗಿ, ಸಾಮಾಜಿಕ ಹೋರಾಟಗಾರ.

ನಿರಾಶಾದಾಯಕ ಬಜೆಟ್‌:ಪಿಟಿಪಿ
ಹೂವಿನಹಡಗಲಿ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಜನಸಾಮಾನ್ಯರಿಗೆ,
ಮಧ್ಯಮ ವರ್ಗದವರಿಗೆ, ರೈತರಿಗೆ ನಿರಾಸೆ ಮೂಡಿಸಿರುವ ನಿರಾಶಾದಾಯಕ ಬಜೆಟ್‌ ಇದಾಗಿದೆ ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್‌ ನಾಯ್ಕ ತಿಳಿಸಿದರು.

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ರೈತರು, ಮಧ್ಯಮ ವರ್ಗದವರ ಪರವಾದ ಬಜೆಟ್‌ ಆಗಿದೆ. ರೈತರ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳ ಬಹುದಾಗಿತ್ತಾದರೂ, ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಆಶಾದಾಯಕ ಬಜೆಟ್‌ ಆಗಿದೆ. ಅಸಂಘಟಿತ ಕಾರ್ಮಿಕರಿಗೆ ಪೆನನ್‌ ಸೌಲಭ್ಯ ಕಲ್ಪಿಸುವುದು ಕೊನೆಯ ದಿನಗಳಲ್ಲಿ ಅವರಿಗೆ ನೆರವಾಗಲಿದೆ. ಚುನಾವಣಾ ಪೂರ್ವದ ಬಜೆಟ್‌ ಎನಿಸಿದರೂ, ಬಡ, ಮಧ್ಯಮ ವರ್ಗಗಳಿಗೆ ಅನುಕೂಲಕರ ಬಜೆಟ್‌ ಆಗಿದೆ.
 ಸಿದ್ದರಾಮ ಕಲ್ಮಠ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌.

ಮಧ್ಯಮ ವರ್ಗ-ರೈತಪರ ಬಜೆಟ್‌… 
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ ಉತ್ತಮ ಬಜೆಟ್‌ ಆಗಿದೆ. ರೈತರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚು ಒತ್ತು ಕೊಡಲಾಗಿದೆ. ಅಸಂಘಟಿತ ನಿವೃತ್ತ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ನೀಡುವುದು ಒಳ್ಳೆಯ ಯೋಜನೆ. ಆಯುಷ್ಮಾನ್‌ ಭಾರತ್‌ ಯೋಜನೆ ಸಹ ಬಡವರಿಗೆ ಅನುಕೂಲವಾಗಲಿದೆ. ಒಟ್ಟಾರೆಯಾಗಿ ಬಜೆಟ್‌ ಒಳ್ಳೆಯ ಯೋಜನೆಗಳಿಂದ ಕೂಡಿದ್ದು, ಬಡವರು, ಕಾರ್ಮಿಕರು, ಮಧ್ಯಮ ವರ್ಗದ ಮತ್ತು ರೈತ ಪರವಾದ ಬಜೆಟ್‌ ಆಗಿದೆ.
 ಜಿ.ಸೋಮಶೇಖರರೆಡ್ಡಿ ಶಾಸಕರು, ಬಳ್ಳಾರಿ ನಗರ.

ಬಜೆಟ್‌ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗಿದೆ. ಮಹಿಳೆ ಮತ್ತು ರೈತರು ನಾಲ್ಕೂವರೆ ವರ್ಷದ ನಂತರ ಮೋದಿ ಅವರಿಗೆ ನೆನಪಾದಂತಿದೆ. ಬಜೆಟ್‌ನ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ರೈತರಿಗೆ 6 ಸಾವಿರ ರೂ. ಘೋಷಣೆ ಮಾಡಿ, ರಸಗೊಬ್ಬರ ದರಗಳನ್ನು ಏರಿಸಿ ರೈತರ ಸಮಸ್ಯೆಗಳನ್ನು ಜೀವಂತವಿಟ್ಟಿದ್ದಾರೆ.
 ಅಕ್ಕಿ ತೋಟೇಶ್‌ ಜಿಪಂ ಮಾಜಿ ಸದಸ್ಯ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಈ ಬಜೆಟ್‌ನಿಂದ ಯಾವುದೇ ಸಾರ್ಥಕತೆ ಆಗುವುದಿಲ್ಲ. ಮೋದಿಯವರ ಅಚ್ಛೇದಿನ್‌ ಮಾತು ಸಂಪೂರ್ಣ ಹುಸಿಯಾಗಿದೆ. ಕೇವಲ ಬಂಡವಾಳಶಾಹಿಗಳ ಪರ ಆಡಳಿತ ನಡೆಸಿ ಜನವಿರೋದಿಯಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. 
 ರೋಗಾಣಿ ಪ್ರಕಾಶ್‌ ಕಾಂಗ್ರೆಸ್‌ ಯುವ ಮುಖಂಡ

ಕೇಂದ್ರ ಸರ್ಕಾರದ ಬಜೆಟ್‌ ಜನಪರವಾಗಿದೆ. ಈ ಹಿಂದೆ 5 ಲಕ್ಷ ರೂ. ಆದಾಯದವರೆಗೆ ಇದ್ದ ತೆರಿಗೆ ವಿನಾಯಿತಿಯನ್ನು ಈ ಬಾರಿ 6.5 ಲಕ್ಷ ರೂ.ಗಳಿಗೆ ಏರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಬಂಪರ್‌ ಕೊಡುಗೆ ನೀಡಲಾಗಿದೆ. ಅಸಂಘಟಿತ ಕಾರ್ಮಿಕರಿಗೂ ಒಳ್ಳೆಯ ಕೊಡುಗೆ ನೀಡಲಾಗಿದೆ.
 ಎರ್ರೆಪ್ಪ, ಬಟ್ಟೆ ವ್ಯಾಪಾರಿ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next