ಗುಂಡ್ಲುಪೇಟೆ: ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡುವ ಮೂಲಕ ತಾಲೂಕಿನಲ್ಲಿ 50 ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ತಲಾ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ತಿಳಿಸಿದರು.
ತಾಲೂಕಿನ ಪಡುಗೂರು ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಯ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸ್ವತಂತ್ರ ಬಂದು 75 ವರ್ಷವಾಗಿದ್ದರು ಸಹ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ಇಲ್ಲದಿರುವುದು ಬೇಸರ ವಿಚಾರ. ಹಾಗಾದರೆ ಹಿಂದಿನ ಜನಪ್ರತಿನಿಧಿ 25 ವರ್ಷ ಏನು ಮಾಡುತ್ತಿದ್ದರು ಎಂಬುದೇ ಪ್ರಶ್ನೆಯಾಗಿದೆ ಎಂದರು.
ತಾಲೂಕಿನ ಯುವ ಸಮುದಾಯ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ತೊಂಡವಾಡಿ ಗ್ರಾಮದ ಬಳಿ ದೊಡ್ಡ ಪ್ರಮಾಣದ ಕೈಗಾರಿಕೆ ಸ್ಥಾಪನೆ ಆಗುವ ನಿರೀಕ್ಷೆ ಇದೆ. ಕಂಪನಿಯೊಂದು ಕೈಗಾರಿಕೆ ಸ್ಥಾಪನೆ ಮಾಡಿದ್ದು, ಇದಕ್ಕೆ ಪೂರಕ ಸಹಕಾರ ನೀಡಿದ್ದೇವೆ ಎಂದು ತಿಳಿಸಿದರು.
Related Articles
ಕ್ಷೇತ್ರ ವ್ಯಾಪ್ತಿಯ ದೊಡ್ಡ ಗ್ರಾಮ ಗುರುತು ಮಾಡಿ ಕೆಲಸ ಮಾಡುತ್ತಿದ್ದು, ಪಡುಗೂರಿನ ಜನರು ಬೇಡಿಕೆ ಸಲ್ಲಿಸದಿದ್ದರೂ 50 ಲಕ್ಷ ಅನುದಾನ ನೀಡಿದ್ದೇನೆ. ಈ ಭಾಗದ ಪ್ರಮುಖ ಶೈಕ್ಷಣಿಕ ಮತ್ತು ರಾಜಕೀಯ ಶಕ್ತಿ ಕೇಂದ್ರ ಕಬ್ಬಹಳ್ಳಿ ಗ್ರಾಮದ ಸುತ್ತಲಿನ ಮೂರು ದಿಕ್ಕುಗಳ ಪಡಗೂರು, ಶೀಗೆವಾಡಿ, ಹುಣಸಿನಪುರ ರಸ್ತೆ ಅಭಿವೃದ್ಧಿ ಆಗುತ್ತಿವೆ ಎಂದರು.
ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಕೆಲಸ ಆಗುತ್ತಿದೆ. ಆಲಂಬೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ನಲ್ಲೂರು ಅಮಾನಿ ಕೆರೆಯೂ ತುಂಬುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಗ್ರಾಮದ ಉಪ್ಪಾರ ಬೀದಿಗೆ ಮೂಲಸೌಲಭ್ಯ ಒದಗಿಸುವ ಭರವಸೆ ನೀಡಿದರು.
ನಂತರ ಶಾಸಕರು ಗ್ರಾಮದ ಡೇರಿ ಬಳಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದರು. ಪಶು ವೈದ್ಯರ ನಿಯೋಜನೆ ಭರವಸೆ ನೀಡಿದರು.
ದೇವರಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿಯೂ ಸಹ 50 ಲಕ್ಷ ರೂ. ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಗಳ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿ, ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡ ಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಸಹಕಾರ ಹೆಚ್ಚಿನ ರೀತಿಯಲ್ಲಿರಲಿ ಎಂದು ಕೋರಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ಉಪಾಧ್ಯಕ್ಷ ಮಳವಳ್ಳಿಮಹೇಶ್, ನಿರ್ದೇಶಕ ಚನ್ನಮಲ್ಲೀಪುರ ಬಸವಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ದೊಡ್ಡಹುಂಡಿ ಜಗದೀಶ, ಕಬ್ಬಹಳ್ಳಿಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಮಹದೇವಪ್ರಸಾದ್, ಉಪಾಧ್ಯಕ್ಷಮಹೇಶ ಕಲ್ಲಹಳ್ಳಿ, ಗ್ರಾಪಂ ಸದಸ್ಯ ನಟೇಶ್, ಗ್ರಾಮದ ಹಿರಿಯಮುಖಂಡರಾದ ಬಸವರಾಜಪ್ಪ, ಮಲ್ಲೇಶ, ಎಪಿಎಂಸಿ ನಿರ್ದೇಶಕಿ ಭಾಗ್ಯ, ತಾಪಂ ಮಾಜಿ ಸದಸ್ಯರಾದ ಶಿವಗನಾಗು, ರೇವಣ್ಣ, ಎಂ.ಸಂತೋಷ್ ಇತರರು ಇದ್ದರು.