Advertisement

ನೇಕಾರರೇ ಆನ್‌ಲೈನ್‌ ಮಾರಾಟಕ್ಕೆ ಆದ್ಯತೆ ನೀಡಿ

09:27 PM Aug 07, 2019 | Lakshmi GovindaRaj |

ಚಿಕ್ಕಬಳ್ಳಾಪುರ: ವಸ್ತ್ರ ವಿನ್ಯಾಸದಲ್ಲಿ ಸಾಕಷ್ಟು ನೈಪುಣ್ಯತೆಯನ್ನು ಹೊಂದಿರುವ ನೇಕಾರರು ತಾವು ಸಿದ್ಧಪಡಿಸಿದ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ಮಾರಾಟಕ್ಕಾಗಿ ಆನ್‌ಲೈನ್‌ ಮಾರಾಟಕ್ಕೆ ಆದ್ಯತೆ ನೀಡಿದರೆ ಹೆಚ್ಚು ಬೇಡಿಕೆ ಹಾಗೂ ನ್ಯಾಯಯುತವಾದ ಬೆಲೆ ಕೈಗೆ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಕೈ ಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ ಐದನೇ ವರ್ಷದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಜವಳಿ ಘಟಕಗಳ ಸ್ಥಾಪನೆಗೆ ಇಲಾಖೆ ಯೋಜನೆಗಳಡಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಉದ್ಯಮಶೀಲರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಮೆಜಾನ್‌, ಪ್ಲಿಪ್‌ ಕಾರ್ಟ್‌ನಂತಹ ದೈತ್ಯ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸಿದ ಬಳಿಕ ಮಾರುಕಟ್ಟೆ ಸಾಕಷ್ಟು ಮುಕ್ತವಾಗಿರುವುದರಿಂದ ನೇಕಾರರು ಕೂಡ ಆನ್‌ಲೈನ್‌ ಮಾರುಕಟ್ಟೆಯಲ್ಲಿ ನೋಂದಾಣಿಯಾದರೆ ವಹಿವಾಟು ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೇ ದೇಶದ ಉದ್ದಗಲಕ್ಕೂ ವಿಸ್ತರಣೆಯಾಗುತ್ತದೆ ಎಂದರು.

ಎಷ್ಟೇ ಆಧುನಿಕ ತಂತ್ರಜ್ಞಾನ ಬೆಳೆದರೂ ನೇಕಾರರ ವೃತ್ತಿ ಕೌಶಲ್ಯ, ಕಲೆ, ಅವರ ನೈಪುಣ್ಯತೆಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರಲ್ಲಿನ ಶಿಸ್ತು ಬದ್ಧತೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ದೇಶದ ಸ್ವಾತಂತ್ರ ಹೋರಾಟದಲ್ಲಿ ಕೈಮಗ್ಗ ಕ್ಷೇತ್ರದ ಕೊಡುಗೆ ಅಪಾರವಾದದು ಎಂದು ಹೇಳಿದರು.

ವ್ಯಾಪಾರ ವಹಿವಾಟು ವೃದ್ಧಿಗೆ ನೇಕಾರರ ಆನ್‌ಲೈನ್‌ ಮಾರುಕಟ್ಟೆಗೆ ಹೊಂದಿಕೊಳ್ಳಬೇಕೆಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಏನೇ ವಸ್ತು ಖರೀದಿ ಮಾಡಬೇಕಾದರೂ ಮೊದಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವುದು ಸಾಮಾನ್ಯ. ಆದರಲ್ಲೂ ಸೀರೆಗಳನ್ನು ಖರೀದಿಸುವ ಮಹಿಳೆಯರು ಕೂಡ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವುದು ಹೆಚ್ಚಾಗಿದೆ. ಆದ್ದರಿಂದ ನೇಕರಾರರು ಆನ್‌ಲೈನ್‌ ಮೂಲಕ ವ್ಯಾಪಾರ ನಡೆಸಿದರೆ ಆರ್ಥಿಕ ಅಭಿವೃದ್ಧಿ ಸುಧಾರಣೆ ಸಾಧ್ಯ ಎಂದರು.

Advertisement

ಜಿಲ್ಲೆಯಲ್ಲಿ ಪ್ರಮುಖ ಜವಳಿ ಉದ್ದಿಮೆಗಳು ಸೇರಿದಂತೆ ಒಟ್ಟು 18 ಜವಳಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5,900 ಜನರಿಗೆ ಉದ್ಯೋಗವನ್ನು ಒದಗಿಸಿದೆ. ಜವಳಿ ನೀತಿ ಅಡಿಯಲ್ಲಿ ಜಿಲ್ಲೆಯಲ್ಲಿ 5 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೂಲಕ ನಿರುದ್ಯೋಗ ಯುವಕ-ಯುವತಿಯರಿಗೆ ಎಸ್‌ಎಂಒ ತರಬೇತಿಯನ್ನು ನೀಡಿ ಉದ್ಯೋಗಗಳನ್ನು ತೊಡಗಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

790 ಕೈ ಮಗ್ಗಗಳು ಕಾರ್ಯ: ಜಿಲ್ಲೆಯಲ್ಲಿ ಇತ್ತೀಚಿನ ಸಮೀಕ್ಷೆಯ ಪ್ರಕಾರ 790 ಕೈಮಗ್ಗಗಳು ರೇಷ್ಮೆ ಸೀರೆ ಉತ್ಪಾದನೆಯಲ್ಲಿ ತೊಡಗಿದ್ದು, 1060 ವಿದ್ಯುತ್‌ ಮಗ್ಗಗಳು ಪಾಲಿಸ್ಟರ್‌ ಸೀರೆ ಉತ್ಪಾದಿಸುತ್ತಿವೆ. ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕುಗಳಲ್ಲಿ ಕೈಮಗ್ಗ ಹಾಗೂ ವಿದ್ಯುತ್‌ ಮಗ್ಗ ನೇಕಾರಿಕೆ ಚಾಲ್ತಿಯಲ್ಲಿದೆ. ಚಿಂತಾಮಣಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಹೆಚ್‌ಡಿಸಿ), ಉಪಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, 40 ಕೈಮಗ್ಗ ನೇಕಾರರಿಗೆ ಉದ್ಯೋಗವನ್ನು ಕಲ್ಪಿಸಿದೆ. ನಿಗಮದ ನೇಕಾರರು ರೇಷ್ಮೆ ಸೀರೆ ಮತ್ತು ರೇಷ್ಮೆ ಸಾದಾ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 67 ನೇಕಾರರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಇದರಲ್ಲಿ 11 ಕೈಮಗ್ಗ ಸಹಕಾರ ಸಂಘಗಳು ಹಾಗೂ 4 ಕಾರ್ಯನಿರತ ವಿದ್ಯುತ್‌ ಮಗ್ಗ ನೇಕಾರರ ಸಹಕಾರ ಸಂಘಗಳು ಕಾರ್ಯನಿರ್ವಸುತ್ತಿವೆ ಎಂದರು. ತಾಪಂ ಅಧ್ಯಕ್ಷರಾದ ಬಿ.ಎಂ.ರಾಮುಸ್ವಾಮಿ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕಬಸವರಾಜು, ಕೈಮಗ್ಗ ನೇಕಾರರ ಸಂಘದ ಜಿಲ್ಲಾಧ್ಯಕ್ಷರಾದ ಗಣೇಶ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹಮದ್‌ ಅತೀಕ್‌ ಉಲ್ಲಾ ಷರೀಪ್‌, ಜವಳಿ ತನಿಖಾಧಿಕಾರಿ ಯೋಗಿಚಂದ್ರ ಇತರರಿದ್ದರು.

ಸ್ವಾತಂತ್ರ್ಯದಲ್ಲಿ ಸ್ವದೇಶಿ ಚಳುವಳಿ: ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್‌ ಮಾತನಾಡಿ, ಬ್ರಿಟಿಷರು ಬ್ರಿಟನ್‌ನಿಂದ ಆಮದು ಮಾಡಿಕೊಂಡ ಉತ್ಪನ್ನಗಳನ್ನು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದನ್ನು ಖಂಡಿಸಿ ದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವ ಉದ್ದೇಶದಿಂದ 1905 ಆ.7 ರಂದು ಕಲ್ಕತ್ತದಲ್ಲಿ ಸ್ವದೇಶಿ ಚಳುವಳಿಯನ್ನು ಆರಂಭಿಸಲಾಯಿತು. ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಆ.7ರಂದು ಕೇಂದ್ರ ಜವಳಿ ಸಚಿವ ಸಂತೋಷ್‌ ಕುಮಾರ್‌ ಗಂಗಾವರ್‌ ರವರು ಸಂಸತ್ತಿನಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚಾರಣೆ ಆಚರಿಸಲು ಘೋಷಣೆ ಮಾಡಿದರು. ತದನಂತರ ಪ್ರಧಾನಿ ನರೇಂದ್ರ ಮೋದಿ 2015 ಆ.7ರಂದು ಚನ್ನೆ çನಲ್ಲಿ ಮೊದಲ ರಾಷ್ಟ್ರೀಯ ಕೈಮಗ್ಗ ದಿನಾಚಾರಣೆಗೆ ಚಾಲನೆ ನೀಡಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಿರಿಯ ನೇಕಾರರಿಗೆ ಸನ್ಮಾನ: ಐದನೇ ವರ್ಷದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವೆಂಕಟರಮಣಪ್ಪ, ಸುಬ್ಬಣ್ಣ, ಜಯರಾಮಪ್ಪ, ಚಿಂತಾಮಣಿ ತಾಲೂಕಿನ ರಾಮಚಂದ್ರಪ್ಪ, ಶಿಡ್ಲಘಟ್ಟ ತಾಲೂಕಿನ ಜಯಮ್ಮ, ಸೌಭಾಗಮ್ಮ, ಚೌಡಪ್ಪ, ನರಸಿಂಹಮೂರ್ತಿ, ಚಿಂತಾಮಣಿ ತಾಲೂಕಿನ ಎಸ್‌,ಆರ್‌. ನಾರಾಯಣಸ್ವಾಮಿ, ಅಂಜಪ್ಪ ಮತ್ತಿತರನ್ನು ಜಿಲ್ಲಾಡಳಿತದ ಪರವಾಗಿ ಶಾಲು ಹೊದಿಸಿ ಹಣ್ಣು ಹಂಪಲು, ಕೊಟ್ಟು ಅಭಿನಂದನಾ ಪತ್ರ ನೀಡಿ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.

ಒಮ್ಮೆ ಚಿಂತಾಮಣಿಯಲ್ಲಿ ನೇಕಾರರ ಮನೆಗೆ ಭೇಟಿ ಕೊಟ್ಟೆ. ಅವರ ಕಲೆ, ನೈಪುಣ್ಯತೆ ನೋಡಿ ಅಶ್ಚರ್ಯವಾಯಿತು. ಜತೆಗೆ ಅವರ ಸಮಸ್ಯೆಗಳು ನೋಡಿ ನೋವಾಯಿತು. ಜಿಲ್ಲಾಡಳಿತದಿಂದ ನೇಕಾರರ ಸಮಸ್ಯೆಗಳ ಸಾಧಕ-ಭಾದಕಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೇಕಾರರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next